




ಕ್ರ್ಯಾಬ್ ಪಾಲಕ್ ಮಸಾಲಾ ಸವಿದಿದ್ದೀರಾ?
ಮಲೆನಾಡಿನ ಜೀವವೈವಿಧ್ಯಗಳಲ್ಲಿ ಏಡಿಗಳ ಪ್ರಭೇದವೂಒಂದು. ಏಡಿಗಳಲ್ಲಿ ಕಪ್ಪುಏಡಿ(ಕಾರೇಡಿ) ಬಿಳಿಏಡಿ(ಬೆಳ್ಳೇಡಿ) ಸಮುದ್ರ ಏಡಿ,ಕೆಂಪುಏಡಿ,ಮುಂಡೇಡಿ ಹೀಗೆಅನೇಕ ವೈವಿಧ್ಯತೆಗಳಿವೆ.
ಚುಕ್ಕೆಏಡಿ ಎನ್ನಲಾಗುವ ಸಮುದ್ರದ ಏಡಿ ಹಿಂದಿ ನಟರಂತೆ ಕೈಕಾಲು-ಉದ್ದದ ವಿಶಿಷ್ಟ ಏಡಿ. ಈ ಏಡಿಗಳು ರಾತ್ರಿಸಮಯದಲ್ಲಿ ಸಮುದ್ರದ ದಂಡೆಗೆ ಬಂದು ಮೊಟ್ಟೆ ಇಡುವುದು!, ಮರಿಮಾಡುವುದನ್ನು ಮಾಡುತ್ತವೆ. ಮಲೆನಾಡಿನ ಕಾರೇಡಿಗಳು-ಬೆಳ್ಳೇಡಿಗಳು ತಮ್ಮ ಅಂಡ್ಲಗಳಲ್ಲಿ ಮರಿಗಳನ್ನು ಮಾಡಿ ಲೋಕಾರ್ಪಣೆ ಮಾಡುತ್ತವೆ. ಆದರೆ ಸಮುದ್ರದ ಏಡಿ ಅಂಡ್ಲಗಳಲ್ಲಿ ಶೇಖರಿಸಿಟ್ಟುಕೊಳ್ಳುವ ಮರಿಗಳೊಂದಿಗೆ ಮೊಟ್ಟೆಗಳನ್ನೂ ಇಡುತ್ತವೆ ಎಂದು ಕರಾವಳಿಯ ಜನ ಸಮುದ್ರದಂಡೆಯ ಮೊಟ್ಟೆಸಾಲುಗಳನ್ನು ತೋರಿಸಿ ಹೇಳುವುದಿದೆ.
ಆ ಬಗ್ಗೆ ತಜ್ಞರು ಸಂಶೋಧನೆ ಮಾಡಿರಬಹುದು, ಮಾಡಿರದಿದ್ದರೆ ‘ಏಡಿಮೊಟ್ಟೆ ಒಂದು ಅಧ್ಯಯನ’ ಎಂದು ಆಸಕ್ತರು ಸಂಶೋಧನೆ ಮಾಡಬಹುದು!.
ಈ ಏಡಿಗಳು (ಕೂರ್ಮಾವತಾರ) ಭೂಮಿಯನ್ನೇ ಹೊತ್ತುಕೊಂಡು ಭೂಮಿಗೆ ರಕ್ಷಣೆ ಕೊಟ್ಟಿವೆ ಎನ್ನುವವರಿದ್ದಾರೆ. ಅದೊಂದು ಪುರಾಣದ ಕತೆ. ಈ ಕಾಲದಲ್ಲಿ ಏಡಿಗಳ ಪುರಾಣ ಬಿಚ್ಚಿಕೊಳ್ಳುವುದು ಮಲೆನಾಡಿನ ಮಳೆಗಾಲದ ಪ್ರಾರಂಭದಿಂದ.
ಮಲೆನಾಡಿನಲ್ಲಿ ಮಳೆಗಾಲ ಪ್ರಾರಂಭವಾಯಿತೆಂದರೆ ಹಳೆನೀರಿನಿಂದ ಮೇಲೆದ್ದು ಹೊಸ ನೀರು ಸೇರುವ ಮೊದಲ ಮಳೆಗಳಲ್ಲಿ ಬಯಲುಸೀಮೆಯ ಹುಡುಗಿಯರಂತೆ ಮೀನು-ಏಡಿಗಳು ಹುಚ್ಚೆದ್ದು ಕುಣಿಯತೊಡಗುತ್ತವೆ. ಈ ಮೀನು-ಏಡಿಗಳ ಮಳೆಗಾಲ ಸ್ವಾಗತದ ಹುಚ್ಚು ಕುಣಿತವನ್ನು ಹತ್ತುಮೀನು, ಎಂದು ಇದರ ಬೇಟೆಯನ್ನು ಹತ್ತುಮೀನು ಹೊಡೆಯುವುದು ಎಂದು ಮಲೆನಾಡಿನ ಜನ ಸಂಭ್ರಮಿಸುತ್ತಾರೆ.
ಮಲೆನಾಡಿನ ಜನರಿಗೆ ಕಪ್ಪೆಚಿಪ್ಪು, ಕಲಗಾ, ನೀಲಿ ಕಲಗಾಗಳನ್ನು ಸವಿಯುವುದು ಗೊತ್ತಿಲ್ಲ, ಹಾಗಾಗಿ ಮೀನುಹಾರಿ,ಮಾಂಸಾಹಾರಿಗಳ ಬಗ್ಗೆ ಸಸ್ಯಾಹಾರಿಗಳು ಮೂಗು ಮುರಿಯುವಂತೆ ಕರಾವಳಿಯ ಕಪ್ಪೆಚಿಪ್ಪು ತಿನ್ನುವ ಜನರ ಬಗ್ಗೆ ಮಲೆನಾಡಿನ ಪಕ್ಕಾ ಮೀನುಹಾರಿ ಮಂಡೂಕಗಳು ಮೂಗುಮುರಿಯುವುದಿದೆ. ಇವೆಲ್ಲಾ ಜಲಚರ ವರ್ಣಭೇದದ ರಾಜಕಾರಣ ಹಾಗಿರಲಿ,
ಕರಾವಳಿಯಲ್ಲಿ ಕಾಂಡ್ಲಾಕಾಡು ಇರುವ ಬಗ್ಗೆ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಕರಾವಳಿಯ ಕಾಂಡ್ಲಾ ಕಾಡುಗಳೆಂದರೆ…
ಸೀಗಡಿ, ಏಡಿ, ಕಪ್ಪೆಚಿಪ್ಪು, ಮೀನುಗಳ ಆವಾಸ ಸ್ಥಾನ.
ಕುಳ್ಳದಾಗಿ ಬೇರು-ಬೀಳಲುಗಳನ್ನು ಚಾಚಿಕೊಂಡಿರುವ ಕಾಂಡ್ಲಾವನಗಳ ಸಂರಕ್ಷಣೆ, ಅಭಿವೃದ್ಧಿಗೆ ಕಡಲಜೀವಶಾಸ್ರ್ತಜ್ಞರು ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ಈ ಕಾಡುಗಳಿರದಿದ್ದರೆ ಸಿಹಿನೀರಿನ ಶ್ರೀಮಂತರ ಮೀನುಗಳಾದ ನೊಗ್ಲಿ, ಮಡ್ಲಿ ಸೀಗಡಿ,ಕುರಡೆ,ರಾಂಸ್ ಸೇರಿದಂತೆ ಅನೇಕ ರುಚಿಕರ ಮೀನುಗಳ ಸಂತತಿಯೇ ನಾಶವಾಗುತ್ತದೆ ಎಂದು ತಜ್ಞರು ಎಚ್ಚರಿಸಿ ಆಗಿದೆ.
ಆದರೆ ಮಲೆನಾಡಿನಂತೆ ಕರಾವಳಿಯ ಜನ ಕೂಡಾ ತಮ್ಮ ಮೀನುಗಳಿಗೆ ಆಹಾರ ನೀಡುವ ಕಾಂಡ್ಲಾ ಕಾಡನ್ನೇ ಕಡಿದು ಉರುವಲಾಗಿ ಉರಿಸುತಿದ್ದಾರೆ. ಇಂಥ ಕಾಂಡ್ಲಾ ಕಾಡುಗಳು ಸಮುದ್ರ ಸೇರುವ ನದಿಗಳ ತಿರುವು,ಸಂಗಮ ಪ್ರದೇಶದಲ್ಲಿ ಬೆಳೆಯುವುದು ಹೆಚ್ಚು. ಇಂಥದ್ದೇ ಸಸ್ಯ ಪ್ರಭೇದವೊಂದು ಮಲೆನಾಡಿನ ನದಿದಂಡೆಗಳಲ್ಲೂ ಇದೆ. ಈ ಅನಾಮಧೇಯ ಸಸ್ಯ ನದಿಗಳ ಮೀನಿಗೆ ಆಹಾರವಾಗುವ ವಿಶಿಷ್ಟ ಕಾಯಿಯನ್ನು ಉತ್ಪಾದಿಸುತ್ತವೆ. ಕರಾವಳಿಯ ಕಾಂಡ್ಲಾ ಮತ್ತು ಮಲೆನಾಡಿನ ಅಡ್ಲಾ!(ಹೊಳೆಪಿಳ್ಳಿ) ಗಿಡಗಳ ಬುಡಗಳನ್ನು ತಮ್ಮ ವಾಸಸ್ಥಳಗಳನ್ನಾಗಿ ಆಶ್ರಯಿಸುವ ಏಡಿಗಳು ಭೂಮಿಯನ್ನು ಹೊತ್ತು ರಕ್ಷಿಸುತ್ತವೆ ಎನ್ನುವ ಪುರಾಣಕ್ಕೆನನ್ನೋಣ? ಪುರಾಣದ ಬದನೆ ಕಾಯಿ ತಿನ್ನಲು ಬರಲ್ಲ ಎಂದು ನಮ್ಮ ಪೂರ್ವಜರೇ ಹೇಳಿದ್ದಾರೆ.
ತಿನ್ನಲು ಬರುವ ಏಡಿಗಳ ಲೋಕವೊಂದಿದೆ ಅದು ಈಗ ದುಬಾರಿಯ ಲೋಕ ಕೂಡಾ.
ಕಾರೇಡಿ ಅಥವಾ ಕಪ್ಪು ಏಡಿ ಎನ್ನುವ ಕಲ್ಲೇಡಿ ನಿಗ್ರೋಗಳಂತೆ ಕಪ್ಪು, ಬಿರುಸು, ಗಟ್ಟಿ. ಈ ಏಡಿಗಳು ಕಲ್ಲಂತ ಕಲ್ಲಿನ ಬುಡದಲ್ಲೇ ಕುಳಿತು ಸಂಸಾರ ಮಾಡುತ್ತವೆ. ಹೊಳೆ, ನದಿ, ಕೆರೆ ಎಲ್ಲೆಂದರಲ್ಲಿ ಇರುವ ಕಲ್ಲುಗಳ ಬುಡದಲ್ಲಿ ಅವಿತುಕೊಳ್ಳುವ ಏಡಿಗಳು ಹೊರಬರುವುದೇ ಬಹು ಅಪರೂಪ. ಮುಂಗಾರಿನ ಮಳೆಯಲ್ಲಿ ಹೊಸ ನೀರಿಗೆ ಹೊಂದಿಕೊಳ್ಳಲು ಹೊರಬರುತ್ತವೆ ಎನ್ನುವ ಏಡಿ ಮಳೆಗಾಲದಲ್ಲಿ ಜಿಟಿಜಿಟಿಮಳೆಯಲ್ಲಿ ಕಲ್ಲು-ದರದಿಂದ ಹೊರಬಂದು ಆಡುವುದನ್ನು ನಾವೇ ನೋಡಿದ್ದೇವೆ. ಹೀಗೆ ಆಡಾಡುತ್ತಲೇ ಜಿಟಿಜಿಟಿಮಳೆಯಲ್ಲಿ ಚಿನ್ನಾಟ ಆಡುವ ಮೀನುಗಳನ್ನು ಹಿಡಿದು ತಿನ್ನುವುದು ಏಡಿಗಳ ಪರಾಕ್ರಮ. ಕೆಲವೇ ಏಡಿಗಳ ಬಗ್ಗೆ ತಿಳಿದಿರುವ ಜನರಿಗೆ ಆಶ್ಚರ್ಯವಾಗುವಂಥಹ ಮಾಹಿತಿಯೊಂದನ್ನು ನೀಡಿರುವ ರಾಜ್ಯ ಪರಿಸರ ಪ್ರಶಸ್ತಿ ವಿಜೇತ ಪರಿಸರ ತಜ್ಞ ಎಂ.ಬಿ.ನಾಯ್ಕ ಕಡಕೇರಿ ಭಾರತದಲ್ಲಿ 47 ಪ್ರಭೇದಗಳ ಏಡಿಗಳಿದ್ದು ಹಿಂದೆ 41 ರಷ್ಟಿದ್ದ ಏಡಿಗಳ ವೈವಿಧ್ಯತೆಗೆ ಇತ್ತೀಚಿನ ವರ್ಷಗಳಲ್ಲಿ ಕೇರಳದ 6 ಹೊಸ ಏಡಿ ಜಾತಿಗಳು ಸೇರಿರುವ ಹೊಸ ಅಪ್ ಡೇಟ್ ನೀಡುತ್ತಾರೆ.
ಇಂಥ ಏಡಿ ಮಳೆಗಾಲದ ತಂಪಿನ ಕಾಲದಲ್ಲಿ ಮನುಷ್ಯರ ಮೈಬಿಸಿ ಮಾಡಲು ಉತ್ತಮ ಆಹಾರ ಎನ್ನಲಾಗುತ್ತದೆ.ಇಂಥ ವೈಶಿಷ್ಟ್ಯದ ಏಡಿಗಳನ್ನು ಹಿಡಿಯಲು ನಾವು ಚಿಕ್ಕಂದಿನಲ್ಲಿ ಪಟ್ಟ ಪರಿಪಾಟಲು ಹೇಳಿತೀರದು. ಹಿರಿಯರು ಹಿಡಿದು ತರುತಿದ್ದ ಏಡಿಗಳನ್ನು ಕೆಂಡದಲ್ಲಿ ಸುಟ್ಟು, ಖಾರದೊಂದಿಗೆ ಬೇಯಿಸಿ, ಕಟ್ಟುಏಡಿಮಾಡಿ ತಿನ್ನುತಿದ್ದ ನಮಗೆ ನಮ್ಮ ನಾಲಿಗೆಯೇ ಈ ಏಡಿಗಳನ್ನು ಹಿಡಿ-ಹಿಡಿ ಎಂದು ಪ್ರೇರೆಪಿಸುತಿದ್ದುದು ಮರೆಯದ ಅನುಭವ. ನಮ್ಮ ತೋಟದ ಚಿಕ್ಕ ತೊರೆಗಳ ದರ, ಕಲ್ಲುಗಳ ಅಡಿಯಲ್ಲಿ ಅಡಗಿಕುಳಿತುಮನುಷ್ಯರಿಗೇ ಚೆಳ್ಳೆಹಣ್ಣು ತಿನ್ನಿಸುತಿದ್ದ ಏಡಿಗಳನ್ನು ಹಿಡಿಯಲಾರದೆ ಪರಿತಪಿಸಿದಷ್ಟು ಏಡಿ ಹಿಡಿದು ಸಂಬ್ರಮಿಸಿದ ಅನುಭವಗಳು ನಮಗಿಲ್ಲ.
ಸರಿಸುಮಾರು 25-30 ವರ್ಷಗಳ ಹಿಂದಿನ ಕತೆ ಇರಬೇಕು ನಮ್ಮದೊಂದು ಮರಿಸೈನ್ಯ ಒಮ್ಮೆ ಏಡಿಹಿಡಿಯಲೆಂದು ನಮ್ಮೂರಿನ ಹಳದೋಟದ ಹೊಳೆಗೆ ಹೋಗಿತ್ತು. ಏಡಿಹುಡುಕಿ,ಅಲೆದಾಡಿ ಬೇಸತ್ತು ಮರಳುವ ಮೊದಲು ತೋಟದ ತುದಿಯಲ್ಲಿ ಕಂಡ ಮಾವಿನಮರದ ಕಾಯಿಗಳನ್ನು ಕೊಯ್ದು ತಿಂದಿದ್ದೆವು. ಅಂಥ ಅಕಾಲದಲ್ಲಿ ನಮಗೆ ಮಾವಿನಕಾಯಿ ಪೂರೈಸಿದ ಆ ನತದೃಷ್ಟ ಇಸಾಡು ಮಾವಿನ ಮರಕ್ಕೆ ಬೇಡರ ಮರ ಎಂದು ನಾವ್ಯಾಕೆ ನಾಮಕರಣ ಮಾಡಿದೆವೋ ಈಗಲೂ ಅರಿಯದ ರಹಸ್ಯ.ಏಡಿಶಿಕಾರಿ ಮಾಡುವವರು ಹೊಳೆಯ ಪಕ್ಕ ಅಡುಗೆ ಮಾಡಿದ ಚಿತ್ರ ನೋಡಿ ನಾವು ಅದು ಬೇಡರಲೋಕ ಎಂದು ಅರ್ಥೈಸಿಕೊಂಡಿರಲೂ ಬಹುದು. ಹೀಗೆ ಚಿಕ್ಕಂದಿನಲ್ಲಿ ಶುರುವಾದ ನಮ್ಮ ಏಡಿ ಶಿಕಾರಿ ಆಗಿನಿಂದಲೂ ಮುಂದುವರಿದಿದ್ದರೂ ಈಗಲೂ ವರ್ಷಕ್ಕೊಂದೆರಡು ಬಾರಿ ಏಡಿ ಶಿಕಾರಿ ಮಾಡಿ ಸಂಬ್ರಮಿಸದಿದ್ದರೆ ನಮ್ಮ ಮಲೆನಾಡಿನ ಮಳೆಬದುಕಿಗೆ ಖಂಡಿತಾ ಮರ್ಯಾದೆ ಇಲ್ಲ.
ಮಳೆಗಾಲವಿರಲಿ,ಚಳಿಗಾಲವಿರಲಿ,ಬೇಸಿಗೆಯೇ ಬರಲಿ ಎಲ್ಲಾ ಕಾಲಗಳಲ್ಲೂ ಈ ಉಷ್ಣಾಹಾರದ ಏಡಿ ಸೇವಿಸುವುದರಿಂದ ಕ್ಯಾನ್ಸರ್, ಹೃದಯ ಕಾಯಿಲೆ,ಮಧುಮೇಹ,ರಕ್ತದೊತ್ತಡ ಸೇರಿದಂತೆ ಕೆಲವು ರೋಗಗಳಿಗೆ ಸೆಡ್ಡು ಹೊಡೆಯುವ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಸಂಶೋಧನೆಗಳು ಸಾಬೀತುಮಾಡಿವೆ. ಗಾಯ ಒಣಗಲು, ಕೊಬ್ಬು ಕರಗಲು, ತೂಕಕಡಿಮೆಯಾಗಲು ಕೂಡಾ ಈ ಏಡಿ ಆಹಾರ ನೆರವಾಗುತ್ತದೆ ಎನ್ನುವುದೂ ತಜ್ಞರ ಅಭಿಪ್ರಾಯ.
ಇಂಥ ಏಡಿಶಿಕಾರಿಯ ಮಳೆಗಾಲದ ನೆನಪುಗಳಲ್ಲಿ ಏಡಿ ಹಿಡಿಯಲು ಹೋಗಿ ಹಾವು ಹಿಡಿದು ಹೌಹಾರಿದ್ದೂ ಇದೆ, ಅದೊಂದು ವರ್ಷ ನಮ್ಮ ಕೋಡಂಬಿಯ ಚಿಕ್ಕಪ್ಪನ ಮನೆಯ ವರ್ಷದ ಆಳು ಗಣೇಶ್ ಚತುರ್ಥಿಯ ಸಮಯಕ್ಕೆ ನಮ್ಮ ಮನೆಯ ನೆಂಟನಾಗಿ ಬಂದಿದ್ದ. ಅವರ ಏಡಿ ಶಿಕಾರಿ ಕಯ್ಯಾಲಿ ಅದ್ಯಾವಗಿಂದ ಪ್ರಾರಂಭವಾಗಿತ್ತೋ ಏನು. ನಮ್ಮಂಥ ಕೆಲವು ಅಡ್ಡಕಸುಬಿ ಹುಡುಗರನ್ನು ಕರೆದೊಯ್ದವನೇ ತೋಟದ ಅವಳಿಯ ದರ, ಕಲ್ಲುಗಳ ಅಡಿಗಳನ್ನು ಹುಡುಕಿ ಒಂದೆರಡು ಗಂಟೆಯಲ್ಲಿ ನೂರಾರ ಏಡಿ ಹಿಡಿದು ಬಿಟ್ಟಿದ್ದ!. ಈ ಏಡಿಶಿಕಾರಿಯ ನಂತರ ನಮ್ಮ ಬದುಕಿನಲ್ಲಿ ಇಷ್ಟು ಕಡಿಮೆ ಸಮಯದಲ್ಲಿ ನೂರಾರು ಏಡಿಗಳನ್ನು ಹಿಡಿದ ಉದಾಹರಣೆ ಔಷಧಿಗೆ ಬೇಕೆಂದರೂ ಸಿಗುತ್ತಿಲ್ಲ.
ಇಂಥ ಏಡಿಯ ಕಾರಣಕ್ಕೆ ಏಡಿ ಹಿಡಿಯಲು ಹೋಗಿ ಏಡಿಗಳಿಂದ ಕಚ್ಚಿಸಿಕೊಂಡ ನೋವಿನ ಕ್ಷಣ ಏಡಿಗಳ ಭೇಟೆಯ ರಸಮಯ ಗಳಿಗೆಗಳಷ್ಟೇ ಭದ್ರ.ಮಲೆನಾಡಿನ ಹೊಳೆ, ನದಿ, ಕೆರೆ ಭಾವಿಗಳಲ್ಲೂ ಸಿಗುವ ಕಾರೇಡಿ ಕರಾವಳಿಯ ಕಾಂಡ್ಲಾವನಗಳಲ್ಲಿ ಯತೇಚ್ಛವಾಗಿ ದೊರೆಯುತ್ತವೆ. ಕಾರವಾರದ ಕಡವಾಡ ಬಳಿ ರೈತರ ಬಾಂದಾರುಗಳ ಬಳಿ ಸಿಗುವ ಕಲ್ಲೇಡಿ ದೇಶದಲ್ಲಿ ಒಂದಕ್ಕೆ ನೂರಾರು ರೂಪಾಯಿ ಬೆಲೆ ಬಾಳಿದರೆ ವಿದೇಶಗಳಲ್ಲಿ ಈ ಏಡಿಯಬೆಲೆ ಒಂದಕ್ಕೆ ಸಾವಿರಾರು ರೂಪಾಯಿ! ಹಾಗಾಗಿ ಕರಾವಳಿಯ ಏಡಿಗಳನ್ನು ಸಮುದ್ರ, ವಾಯುಮಾರ್ಗಗಳಲ್ಲಿ ವಿದೇಶಕ್ಕೆ ರಫ್ತು ಮಾಡಿ ಲಕ್ಷಾಂತರ ದುಡಿಯುವ ಉದ್ಯಮಿಗಳು ಏಡಿಯನ್ನು ಸಾಕ್ಷಾತ್ ಪುರಾಣದ ಭೂಮಿ ರಕ್ಷಕನಂತೆ ಕಾಣುವುದು ವಿಶೇಶ.
ಇಂಥ ಕಾರೇಡಿಗಳನ್ನು ನಾನಾ ಖಾದ್ಯಗಳನ್ನಾಗಿ ಮಾಡಿ ಚಪ್ಪರಿಸುತ್ತಾರಾದರೂ ಕಾರೇಡಿಯ ಕಟ್ಟೇಡಿ ಮತ್ತು ಕೆಸದ ಸೊಪ್ಪಿನ ಏಡಿ ‘ಪಾಲಕ ಕ್ರ್ಯಾಬ್’ ಸವಿದವರು ಏಡಿಯನ್ನು ಕಂಡೊಡನೆ ಚಳ್ ನೀರು ಭರಿಸಿಕೊಂಡರೆ ಅದರಲ್ಲಿ ಏಡಿಯದ್ದಾಗಲಿ ಏಡಿ ತಿನ್ನುವವರ ತಪ್ಪೇನೂ ಇಲ್ಲ.
ಮಲೆನಾಡಿನ ಕಲ್ಲು ಏಡಿಗಳ ರುಚಿಗೂ, ಸಮುದ್ರದ ಬಿಳಿ ಏಡಿಗಳ ರುಚಿಗೂ ಮಲೆನಾಡಿನ ಗದ್ದೆಗಳಲ್ಲಿರುವ ಕೆಂಪು-ಬಿಳಿಯ ಬೆಳ್ಳೇಡಿಗಳ ರುಚಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ಮಲೆನಾಡಿನ ಕಾರೇಡಿ, ಸಮುದ್ರದ ಚುಕ್ಕೆ ಏಡಿ ಬಹುತೇಕ ಎಲ್ಲಾ ಖಾದ್ಯಗಳಿಗೆ ಹೊಂದಿಕೆಯಾಗುವ ಸರಿಸೃಪ. ಅದರೆ ಬೆಳ್ಳೇಡಿಯಿದೆಯಲ್ಲ ಬೆಳ್ಳೇಡಿ ಮುಂಡಿ ಮಾಡಬೇಕು ಅಥವಾ ಪಾಲಕ್, ಅಥವಾ ಪಲ್ಲೆ, ಮಸಾಲೆ ಮಾಡಬೇಕು. ಈ ಬೆಳ್ಳೇಡಿಗಳನ್ನೂ ಕಲ್ಲೇಡಿ,ಸಮುದ್ರ ಏಡಿಗಳಂತೆ ಕಟ್ಟೇಡಿಮಾಡಲು ಸಾಧ್ಯವಿಲ್ಲ ಯಾಕೆಂದರೆ ಈ ಬೆಳ್ಳೇಡಿಗಳ ಗಾತ್ರವೇ ಗರಿಷ್ಟ 50 ಗ್ರಾಂ. ಈ ಬೆಳ್ಳೇಡಿ, ಕಾರೇಡಿಗಳು ಭತ್ತದ ಗದ್ದೆಗಳ ಬದು ಕಡಿದು ಜಮೀನು, ಬೆಳೆ ಹಾಳುಮಾಡುತ್ತವೆಂದು ಇವುಗಳಿಗೆ ವಿಷ ಉಣಿಸುವ ಧೂರ್ತರೂ ಇದ್ದಾರೆ!. ಆದರೆ ಕೊಂದದ್ದನ್ನು ತಿಂದು ಕಳೆ ಎನ್ನುವಂತೆ ಏಡಿಕೊಂದ ಪಾಪವನ್ನು ತಿಂದು ಕಳೆಯುವ ಏಡಿಭಕ್ಷಕರಿಗಿಂತ ಈ ವಿರಳ ಜೀವಿ ಏಡಿಗಳಿಗೆ ವಿಷುಉಣಿಸಿ ಹಿಂಸಾನಂದ ಪಡೆಯುವವರು ಮಲೆನಾಡಿನ ಭಯೋತ್ಪಾದಕರು ಎನ್ನಬೇಕಷ್ಟೆ.
ಇಂಥ ಏಡಿಪುರಾಣ ಈಗ ನೆನಪಾಗಲೂ ಒಂದು ನೆಪ ಉಂಟು, ಈ ವರ್ಷದ ಕರೋನಾ ಜನತಾಕಫ್ಯೂ, ನಂತರ ಲಾಕ್ ಡೌನ್ ಪ್ರಾರಂಭವಾಯಿತಲ್ಲ, ಆಗ ಕುಳಿತಲ್ಲಿ ಕುಳತಿರಲಾರದ ನಮ್ಮ ಸಂಕಟ ದೂರ ಮಾಡಿದ್ದು ಈ ಏಡಿ ಭೇಟೆ. ಸುತ್ತಮುತ್ತಲಿನ ಹೊಂತಗಾರ ಹುಡುಗರೆಲ್ಲಾ ಏಡಿ ಹಿಡಿಯಲು ಹೋಗುತಿದ್ದಾರೆ ಎನ್ನುವ ಮಾಹಿತಿ ಸಿಕ್ಕ ನಮಗೆ ನಾವೂ ಒಂದು ಕೈ ನೋಡಿ ಬಿಡೋಣ ಎಂದು ಹುಕಿ ಬಂದು ತೋಟದ ಕಡೆ ಹೊರಟೇ ಬಿಟ್ಟೆವು. ಆಗತಾನೆ ನಿಧಾನಕ್ಕೆ ನೀರು ಬರಿದಾಗುತಿದ್ದ ತೊರೆಗಳ ಕಲ್ಲುಗಳ ಕೆಳಗೆ ಏಡಿ ಶೋಧಿಸಿದ್ದೇ ಶೋಧಿಸಿದ್ದು ಎಂಟ್ಹತ್ತು ಏಡಿ ಹಿಡಿಯಬೇಕಾದರೆ ಎಂಟ್ಹತ್ತು ಜನರ ಸೊಂಟಗಳು ಬಿದ್ದು ಹೋಗಿದ್ದವು.
ಹವ್ಯಾಸ, ಟೈಮ್ ಪಾಸ್ ಎಂದು ಏಡಿ ಭೇಟೆಗೆ ಹೋಗಿದ್ದ ನಮಗೆ ಕೊನೆಗೆ ತಿಳಿದ ವಾಸ್ತವವೆಂದರೆ…….. ಲಾಕ್ಡೌನ್ ನಲ್ಲಿ ಊರಿಗೆ ಬಂದಿದ್ದ ಪರ ಊರುಗಳಲ್ಲಿದ್ದ ಹುಡುಗರೆಲ್ಲಾ ಖಾಲಿಪೀಲಿ ಊರ ಹುಡುಗರೊಂದಿಗೆ ಸೇರಿ ಏಡಿ ಹಿಡಿದದ್ದೇ ಹಿಡಿದದ್ದು. ಆ ಏಡಿ ಮೀನುಗಳು ಲಾಕ್ಡೌನ್ ಆಗಿದ್ದರೂ ಈ ಲಾಕ್ ಡೌನ್ ಹುಡುಗರ ಕಸರತ್ತಿನೆದುರು ಅವರ ಜೀವಮಾನವೇ ಮುಗಿದುಹೋದಂತಾಗಿತ್ತು. ಪ್ರಾರಂಭದ ಒಂದು ತಿಂಗಳ ಲಾಕ್ ಡೌನ್ ದೆಸೆಯಿಂದಾಗಿ ಮಲೆನಾಡಿನ ಏಡಿ-ಮೀನುಗಳ ಸಂತತಿ ಸಂಪೂರ್ಣ ನಾಶವಾಗಿ ಬಿಟ್ಟಿದೆ.ಆದರೆ ಈಗಿನ ಕೇಂದ್ರದ 2ಲಕ್ಷಕೋಟಿಕರೋನಾ ಪ್ಯಾಕೇಜ್ ನಲ್ಲಿ ಈ ಮಲೆನಾಡಿನ ಏಡಿ-ಮೀನುಗಳ ರಕ್ಷಣೆಗೆ ಯಾವ ಉಪಕ್ರಮ ಕೈಗೊಂಡ ಮಾಹಿತಿ ಮಾತ್ರ ಇಲ್ಲ.
ಭೂಮಿಯನ್ನೇ ಎತ್ತಿ ಹಿಡಿದ ಏಡಿಗಳು ಈಗ ಭೂಮಿ ಮೇಲಿನ ಕರೋನಾ ಮನುಷ್ಯರು, ಕರೋನಾ ಸಂತೃಸ್ತರು, ಕರೋನಾದಿಂದ ಭಯಭೀತರಾದವರಿಂದ ವಿನಾಶದ ಅಂಚಿಗೆ ಸರಿದಂತಾಗಿದೆ. ಏಡಿಗಳನ್ನು ಕಾಲನ ಕೊನೆಗೆ ದೂಡಿದ ಮನುಷ್ಯರಿಗೆ ಕರೋನಾ ನಿವಾರಕವಾಗಿ ಈ ಉಷ್ಣಮಾಂಸದ ಏಡಿಯೇ ಉಪಯೋಗಕ್ಕೆ ಬರಬಹುದು! ಇಂಥ ಬಹುಪಯೋಗಿ ಏಡಿಗಳ ಜಗತ್ತು ಭಾರತದ ಜನರ ಮನೋಭಾವಕ್ಕೂ ಉದಾಹರಣೆಯಾಗಿರುವುದು ಮಾತ್ರ ಏಡಿಗಳು ಮತ್ತು ಭಾರತ ಉಪಖಂಡಕ್ಕಿರುವ ಬಾದರಾಯಣ ಸಂಬಂಧ ಎನ್ನಲೇಬೇಕು.
ಯಾರನ್ನೂ ಮೇಲೇಳಲು ಬಿಡದ ಏಡಿ ಮನುಷ್ಯರಂತೆ ದೇಶಾಂತರ, ಖಂಡಾಂತರ, ಪ್ರವಾಸ ಮಾಡಿದರೂ ತನ್ನ ಗುಣ-ರುಚಿ,ಸ್ವಭಾವ ಗುಣಲಕ್ಷಣಗಳನ್ನು ಬಿಡದಿರುವುದೂ ನಮ್ಮ ಏಡಿಗಳ ಅಸ್ಮಿತೆಯ ಲಕ್ಷಣ ಎಂದೇ ಬಣ್ಣಿಸಬೇಕಾಗಿದೆ.
ಸಮಾಜಮುಖಿ ಕನ್ನೇಶ್, ಕೋಲಶಿರ್ಸಿ,
(ಕನ್ನೇಶ್ವರ ನಾಯ್ಕ, ಸಿದ್ಧಾಪುರ (ಉ.ಕ.) ಮೊ-9740598884
Kanneshwar ganapati naik
Add- opp acf off, i.b road siddapur
581355
Samajamukhi.kannesh@gmail.com
samajamukhi@rediffmail.com



ಕಾರೇಡಿಗಳನ್ನು ನಾನಾ ಖಾದ್ಯಗಳನ್ನಾಗಿ ಮಾಡಿ ಚಪ್ಪರಿಸುತ್ತಾರಾದರೂ ಕಾರೇಡಿಯ ಕಟ್ಟೇಡಿ ಮತ್ತು ಕೆಸದ ಸೊಪ್ಪಿನ ಏಡಿ ‘ಪಾಲಕ ಕ್ರ್ಯಾಬ್’ ಸವಿದವರು ಏಡಿಯನ್ನು ಕಂಡೊಡನೆ ಚಳ್ ನೀರು ಭರಿಸಿಕೊಂಡರೆ ಅದರಲ್ಲಿ ಏಡಿಯದ್ದಾಗಲಿ ಏಡಿ ತಿನ್ನುವವರ ತಪ್ಪೇನೂ ಇಲ್ಲ.
