

ಅಪ್ಪಯ್ಯ ಭಾಗ- 04 (ಕೊಂಚ ಧೀರ್ಘ ಇದೆ. ಕಾರಣ ದೊಡ್ಡ ಕಥೆ ಆಗಬೇಕಾದ ರೋಚಕ ನೆಲದ ಇತಿಹಾಸ ಇದು)ಬಿ ಎಸ್ ವೈ ಹೇಳಿದ ಅಪೂರ್ಣ ಕಥೆಯ ಪಾತ್ರದಲ್ಲಿ ಅಪ್ಪಯ್ಯ.


ಈ ಶರಾವತಿ ಹಾಗೆ ಲಾಗಾಯಿತಿನಿಂದಲೂ. ಅಲ್ಲೆಲ್ಲೋ ತೀರ್ಥಹಳ್ಳಿ ಬಳಿ ಅಂಬಿನ ಮೊನೆಯಿಂದ ಜನಿಸಿದವಳು ಎಂಬ ಹೆಗ್ಗಳಿಕೆಯಲಿ ಹುಟ್ಟಿ ಹಾಗೆ ರಭಸವಾಗಿ ಹರಿಯುವವಳು. ಕೆಲವು ಕಡೆ ಸಣ್ಣ ಆಳದಲ್ಲಿ ಧುಮುಕಿ ಜೋಗದಲ್ಲಿ ಬೋರ್ಗೆರೆದು ಸಾಗರ ಸೇರುವ ಅವಳ ಪಯಣ ಬಹಳ ಧೀರ್ಘದ್ದು ಅಲ್ಲ. ಆದರೆ ಅವಳು ಚುರುಕು. ಅವಳು ಸೆಳೆತ, ಅವಳೆಂದರೆ ಬೋರ್ಗೆರೆತ, ರಭಸ. ಇವಳ ಸಹೋದರಿ ವರದೇ ಹಾಗಲ್ಲ ನಿಧಾನವಾಗಿ ಹರಿದು ಕೆರೆ ಕಟ್ಟೆ ತುಂಬಿಸಿ ತುಂಗಭದ್ರಾ ಸೇರಿ ಮುಂದೆಲ್ಲೋ ಕೃಷ್ಣೆ ಸಖಿಯಾಗಿ ಬಹು ದೂರ ಸಾಗುತ್ತಾಳೆ.
ಆದರೆ ನಮ್ಮ ಶರಾವತಿ ಹಾಗಲ್ಲ ಅವಳದು ಒಂಟಿ ಹಾದಿ. ಬೆಟ್ಟ ಗುಡ್ಡಗಳ ನಡು ಪಯಣ. ಇದೇ ಕಾರಣಕ್ಕೆ ಆಕೆಗೆ ಒಡ್ಡು ಕಟ್ಟುವ ಮನುಷ್ಯ ಪ್ರಯತ್ನ. ಬೆಳಕು ಕತ್ತಲ ಜಗಳದಲ್ಲಿ ಶರಾವತಿ ಬೆಳಕಿನ ವಾರ ಸುದಾರಳು. ಒಂದಲ್ಲ ಎರಡು ಒಡ್ಡು ಕಟ್ಟಿ ಲಾಂಚ್ ಬಂದು ಸಿಗಂದೂರು ಬೆಳೆದು ನಾಡಿನ ಜನರೆಲ್ಲ ನಮ್ಮೂರಿಗೆ ಬರುತ್ತಾ ಇದ್ದಾರೆ.ಶರಾವತಿ ಗೆ ಮಡೆನೂರು ಡ್ಯಾಮು ಕಟ್ಟಿ ಹಿನ್ನೀರು ಬಲಿತು ಊರೆಲ್ಲಾ ಮುಳುಗಿದರೂ ಮನುಷ್ಯ ಸಂಬಂಧಗಳ ವಿಸ್ತಾರಕೆ ಅಡ್ಡಿ ಆಗಿರಲಿಲ್ಲ.
ಕರೂರುನಿಂದ ಬೆಸೂರಿಗೆ ವನಗದ್ದೆ ನಾಯಕರು ಸಂಬಂಧ ಕುದುರಿಸಿ ಮದುವೆ ಮುಗಿಸಿದ್ದರು. ಬೀಗರ ಊಟ ಮುಗಿಸಿ ಸಂಜೆ ದಿಬ್ಬಣ ಕರೂರಿನಿಂದ ಬೆಸೂರು ಹೋಗಬೇಕಿತ್ತು. ಮಧ್ಯೆ ನಮ್ಮ ಶರಾವತಿ ಬಿಮ್ಮನೆ ಹರಿಯುತ್ತಿದ್ದಳು. ನದಿ ದಾಟಿಸುವ ದೋಣಿಯ ಅಂಬಿಗನೆ ನಮ್ಮ ದೋಣಿ ವೆಂಕಟ. ಆತನ ಹೆಸರಿನ ಜತೆ ದೋಣಿ ಸೇರಿಕೊಳ್ಳಲು ಇದೆ ಕಾರಣ.
70 ವರ್ಷ ದಾಟಿದ್ದ ವೆಂಕಟ ಆಗಲೂ ಕಟ್ಟು ಮಸ್ತು ಆಳು. ದುಬ್ಬಮ್ಮ ಕಾಯಿಲೆ ಬಂದು ಮುಖ ಗಂಟಾಗಿತ್ತು. ಆದರೆ ದೋಣಿ ನಡೆಸುವುದರಲ್ಲಿ ನಿಷ್ಣಾತ. ಆ ಸಂಜೆ ದೋಣಿ ವೆಂಕಟ ಕಾಯುತ್ತಾ ಇದ್ದ. ನಡು ನಡುವೆ ಎಲೆ ಅ ಡಿಕೆ ಜಗಿದು ಕರೂರಿನ ಕಡೆಯ ಹಾದಿ ಕಡೆ ಇಣುಕಿ ಇಣುಕಿ ನೋಡುತ್ತಾ ಇದ್ದ ವೆಂಕಟ. ಮೇ ತಿಂಗಳು. ಹಳೆ ಮಳೆ ನಾಲ್ಕು ಬಿದ್ದು ಸಂಜೆ ಹೊತ್ತು ಆಕಾಶ ಕಪ್ಪಾಗಿ ಬಿಡುತ್ತಾ ಇತ್ತು. 4 ಗಂಟೆಗೆ ವನಗದ್ದೆ ಯಜಮಾನ ಗಿಡ್ಡನಾಯ್ಕರ ಮಕ್ಕಳ ಮದುವೆ ದಿಬ್ಬಣವನ್ನ ಬೆಸೂರು ಕಡೆ ದಾಟಿಸಿ ಹರದೂರು ಬಳಿಯ ತನ್ನ ಬಿಡಾರ ಸೇರಿಕೊಳ್ಳುವ ಯೋಜನೆ ರೂಪಿಸಿ ದಿಬ್ಬಣ ಬರ ಕಾಯುತ್ತಾ ಇದ್ದ ವೆಂಕಟ ಕೊನೆಗೂ ದಾರಿಯ ಗೌಜು ಗದ್ದಲ ಕೇಳಿಯೇ ದೋಣಿಯ ಹಗ್ಗ ಬಿಡಿಸಿ ಸಿದ್ದ ಆದ.
ತಲೆಯ ಮೇಲೆ ಮುಂಡಾಸು ರಾರಾಜಿಸುತ್ತಿತ್ತು.ವನಗದ್ದೆ ಗಿಡ್ಡನಾಯಕರನ್ನ ಯಜಮಾನರು ಎಂದೇ ಊರು ಕರೆಯುತ್ತಾ ಇದ್ದುದ್ದು. ಇಬ್ಬರು ಮಕ್ಕಳನ್ನ ಒಟ್ಟಿಗೆ ಮದುವೆ ಜೋರಾಗಿ ನಡೆಸಿದ್ದರು. ಅದೆಷ್ಟು ಜೋರು ಅಂದರೆ ವರರಿಬ್ಬರೂ ಸರ್ಜು ಕೋಟು ಹಾಕಿದ್ದು ದೊಡ್ಡ ಸುದ್ದಿ ಆಗಿತ್ತು. ದೀವರ ಮನೆ ಮದುವೆ ಎಂದರೆ ಮಾತಿಗಿಂತ ಹಾಡು ಹೆಚ್ಚು. ಹೆಜ್ಜೆ ಹೆಜ್ಜೆಗೂ ಸಂಪ್ರದಾಯ, ಗೋಡೆ ಮೇಲೆ ಹಸೆ, ಹಾಡು, ಆರತಿ, ಕಳಸ ಹೀಗೆ. ಸಂಸ್ಕೃತಿ ಸಿರಿತನದ ನೆಲದ ನಿಜ ಮಕ್ಕಳಲ್ಲವೇ…?
ಅವತ್ತು ಬೀಗರ ಊಟ ಮುಗಿಸಿ ಕಳುಹಿಸಿಕೊಡುವ ಹೊತ್ತಿಗೆ ತಡವೇ ಆಗಿತ್ತು. ಹರದೂರು ದೋಣಿ ಕಡವಿಗೆ ಬರುವ ಹೊತ್ತಿಗೆ ಸಂಜೆ 5 ಗಂಟೆ. ಆಕಾಶದ ಮೋಡ ಕತ್ತಲು ತಂದಿತ್ತು. ತಣ್ಣಗಿದ್ದ ಗಾಳಿ ಜೋರಾಗಿತ್ತು.ವೆಂಕಟ ಜೋಪಾನವಾಗಿ ಎಲ್ಲರನ್ನೂ ದೋಣಿಗೆ ಹತ್ತಿಸಿದ. ಮುನ್ನ ತಾಯಿ ಶರಾವತಿಗೆ ದಂಪತಿಗಳು ಪೂಜೆ ಮಾಡಿ ಕೈ ಮುಗಿದು ದೋಣಿ ಹತ್ತಿದರು. ಒಟ್ಟು ವೆಂಕಟನ ಬಿಟ್ಟು ಇಪ್ಪತ್ತೆರೆಡು ಜನ. ಅದೊಂದು ಮಗು ದೋಣಿ ಹತ್ತುವಾಗಲೇ ಜೋರು ಅತ್ತಿತು. ದೋಣಿ ನಿಧಾನವಾಗಿ ಹೊರಟಿತು. ವೆಂಕಟ ಕುಶಲವಾಗಿ ದೋಣಿ ನಡೆಸುತ್ತಾ ಇದ್ದ. ಅದೊಂದು ಮಹಾಗಾಳಿ ಕೊಡಚಾದ್ರಿ ಪರ್ವತ ಶ್ರೇಣಿಯ ಎಡೆಯಿಂದ ಬಹು ಬಾಹುಗಳಿಂದ ಆವರಿಸಿಕೊಳ್ಳುತ್ತಾ ಕರೂರಿನ ಕಾಡುಗಳ ಮರಗಳ ಉರುಳಿಸಿ ದೋಣಿ ಕಳುವಿಗೆ ಅಪ್ಪಳಿಸಿತ್ತು. ಇನ್ನೇನು ದಡ ಹತ್ತಿರ ಬಂತು ಎನ್ನುವಾಗಲೇ ದೋಣಿ ಅತ್ತ ಇತ್ತ ವಾಲ ತೊಡಗಿತು. ಒಳಗೆ ಕೂತಿದ್ದ ಹೆಂಗಸರು ನೀರು ಒಳ ನುಗ್ಗಿತು ಎಂದು ಕೂಗಿದರು. ಆ ಮಗು ಜೋರಾಗಿ ಅರಚಿಕೊಂಡು ಅಮ್ಮನನ್ನು ಗಟ್ಟಿ ಹಿಡಿದುಕೊಂಡಿತು. ವೆಂಕಟ ಗಡಿಬಿಡಿ ಬೇಡ ಸುಮ್ಮನೆ ಕೂರಿ ಎಂದ ಮಾತು ಕೇಳದೇ ಹೆಂಗಸರು ಗಂಡಸರು ಎದ್ದು ನಿಂತರು. ಗಾಳಿ ಜೋರಾಯಿತು…. ದೋಣಿ ಮುಳುಗಿತು ಎಂದು ಜೋರಾಗಿ ಕೂಗಿದರು ಯಾರೋ.. ಯಾರು ಯಾರನ್ನ ಹಿಡಿದರು ಎಂದು ಗೊತ್ತಾಗುವ ಹೊತ್ತಿಗೆ ದೋಣಿ ಮರುಚಿತ್ತು.*****************
ದೋಣಿ ಮುಳುಗಿತು ಎಂಬ ಸುದ್ದಿ ಕರೂರು ತಲುಪಿತು. ಅಪ್ಪಯ್ಯ ಆಗ 22 ವರ್ಷದ ಯುವಕ.ನಾಲ್ಕು ಸ್ನೇಹಿತರ ಬಳಗ ಕೂಡಿಕೊಂಡು ಹರದೂರು ತುದಿಯ ದೋಣಿ ಕಳುವಿಗೆ ಬರುವ ಹೊತ್ತಿಗೆ 7 ಗಂಟೆ ಆಗಿತ್ತು. ದಡದಲ್ಲಿ ನಿಂತು ಜೋರಾಗಿ ಕೂಗು ಹಾಕಿದರು ಶರಾವತಿ ಗೆ ಮುಖ ಮಾಡಿ. ಉಹುಂ ಸದ್ದಿಲ್ಲ. ಯಾರಾದರೂ ಅಕಸ್ಮಾತ್ತಾಗಿ ಬದುಕಿ ಮರ ಮುಂಡು ಹತ್ತಿ ಕುಳಿತಿದ್ದರೆ ಎಂಬ ಕೊನೆಯ ಆಶಾವಾದ. 23 ಜನರಲ್ಲಿ ವನಗದ್ದೆ ಯಜಮಾನರ ಮಗ ವರ ಮಹಾನ್ ಈಜುಗಾರ ಅವನಾದರೂ ಬದುಕಿಲ್ಲವೇ ಎಂಬ ಪ್ರಶ್ನೆ ಅಪ್ಪಯ್ಯನ ಮನದೊಳಗೆ. ನದಿ ದಡದಲ್ಲಿ ಬೆಂಕಿ ಹಾಕಿ ಹೊಳೆ ಹೆಣ ಕಾಯುತ್ತಾ ಕುಳಿತರು. ಸುಮಾರು 9 ಗಂಟೆ ಹೊತ್ತಿಗೆ ಹೊಳೆ ನಡುವಿನಿಂದ ಕೂಗು ಕೇಳಿತು. ಕತ್ತಲು ಕತ್ತಲು… ನಿಜವೋ ಭ್ರಮೆಯೋ ಎಂಬ ಭ್ರಮೆ ಅಪ್ಪನಿಗೆ. ಎಲ್ಲರೂ ಕಿವಿ ನೆಟ್ಟಗೆ ಮಾಡಿ ಕುಳಿತರು. ಮತ್ತೆ ಕ್ಷೀಣ ದ್ವನಿ ಕೇಳಿಸಿತು. ಆ ಕೂಗು ಹತ್ತಿರ ಆಗುತ್ತಾ ಬಂತು… ದೊಡ್ಡದಾಗುತ್ತಾ.ನಿಜ ..ಈ ದ್ವನಿ ವೆಂಕಟನದು. ಕೆಲವೇ ಕ್ಷಣದಲ್ಲಿ 70 ರ ವಯದ ವೆಂಕಟ ದೋಣಿ ಜತೆ ದಡಕ್ಕೆ ಬಂದ. ದೋಣಿ ಇಳಿದವನೆ ” ಮಗಾ ಎಲ್ಲಾ ಮುಳುಗಿ ಹೋದ್ರು, ನಾ ಹೆಂಗೆ ಮುಖ ತೋರಿಸಲಿ” ಎಂದು ಜೋರಾಗಿ ನೆಲ ಹಿಡಿದು ಅತ್ತ.
ಅಪ್ಪಯ್ಯ ಅವನಿಗೆ ಸಮಾಧಾನ ಮಾಡಿ ಬದುಕಿದ ಬಗೆ ಕೇಳಿದರಂತೆ. ದೋಣಿ ಸೆಳವಿಗೆ ಸಿಕ್ಕಿ ಮಗುಚಿಕೊಂಡಾಗ ರಬಸದಲ್ಲಿ ಕೆಳ ಮುಖವಾಗಿ ಸಾಗುತ್ತಾ ಇದ್ದಾಗ ವೆಂಕಟ ದೋಣಿ ಹಗ್ಗ ಬಿಡಲೇ ಇಲ್ಲ. 2 ಕಿ ಮೀ ನದಿಯಲ್ಲಿ ಹಗ್ಗ ಹಿಡಿದು ಸಾಗಿ ಕೊನೆಗೂ ಪಕ್ಕದ ದಡ ಸೇರಿದ ನಂತರ ದೋಣಿ ತಿರುವು ಹಾಕಿಕೊಂಡು, ಅಲ್ಲೆ ದಡದಲ್ಲಿ ಇದ್ದ ಬಯನೇಮರ ತುಂಡು ಹುಟ್ಟು ಮಾಡಿಕೊಂಡು ತನ್ನ ಅನುಭ ವದ ಲೆಕ್ಕದಲ್ಲಿ ತನ್ನ ಬದುಕಿಸಿದ ದೋಣಿ ಹತ್ತಿ ಪುನ್ಹ ದೋಣಿ ಕಡುವಿಗೆ ಕಗ್ಗತ್ತಲಲ್ಲಿ ಬಂದಿದ್ದ ವೆಂಕಟ. ದೋಣಿ ವೆಂಕಟ.
ಮಾರನೇ ದಿನ ಸಾಗರದಿಂದ ಪೊಲೀಸ್ ಬಂದು ಮತ್ತೆರೆಡು ದೋಣಿ ತರಿಸಿ 20 ಹೆಣಗಳನ್ನು ನದಿಯಿಂದ ಎತ್ತಿಸಿ ಕುಟುಂಬ ಸಮ್ಮುಖದಲ್ಲಿ ಸಾಮೂಹಿಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಶರಾವತಿ ದಡದಲ್ಲಿ ಮುಗಿಲು ಮುಟ್ಟಿದ ರೋಧನ. ಶರಾವತಿ ಉಪ್ಪಾದಳು ಆ ದಿನ ಕಣ್ಣೀರು ಸೇರಿ. ಅಪ್ಪಯ್ಯ ಈಜುಗಾರರು. ಅವತ್ತಿನ ಹೆಣ ಎತ್ತುವ ಬೆಳಗಿನ ಪ್ರಕ್ರಿಯೆಯಲ್ಲಿ ಅಪ್ಪಯ್ಯ ತೊಡಗಿಸಿಕೊಂಡರು.
ಮಧುಮಗಳ ಕಳೆ ಬರಹ ಸೇರಿ ಎಲ್ಲವನ್ನೂ ಅಪ್ಪನೂ ಸೇರಿ ಒಂದು ತಂಡ ಎತ್ತಿ ತಂದಿತು. ಜತನದಿಂದ ತೊಲಗಟ್ಟಲೆ ಬಂಗಾರ ತಿರುಗಿಸಲಾಯಿತು. ಆದರೆ ಆ ದೋಣಿಯಲ್ಲಿದ್ದ ಕೊನೇ ಕ್ಷಣದಲ್ಲಿ ಅತ್ತ ಮಗು ಮತ್ತು ಆ ತಾಯಿ ಎಷ್ಟೇ ಹುಡುಕಿದರೂ ಸಿಗಲಿಲ್ಲ… ಕೊನೆಗೂ ಎಳೆ ಮಗು ತನ್ನ ತಾಯಿ ಜತೆ ಶರಾವತಿ ಭಾಗವಾದಳು. ಅಪ್ಪಯ್ಯ ಇವೆಲ್ಲವಕ್ಕೂ ಸಾಕ್ಷಿ ಆಗಿದ್ದಾರೆ. ಕಥೆಯ ಭಾಗ ಆಗಿದ್ದಾರೆ.ಹಾ ಅಂದಹಾಗೆ… ಈ ದೋಣಿ ವೆಂಕಟ ನಮ್ಮ ತಂದೆಯ ರಕ್ತ ಸಂಬಂಧಿ. ದೋಣಿ ಮುಳುಗಡೆ ಆಗಿ ತೀರಿ ಹೋದವರ ಸಂಬಂಧಿ ಗಳು ತುಂಬಾ ಜನ ಇದ್ದಾರೆ. ಆದರೆ ಶರಾವತಿ ನದಿ ದಂಡೆಯಲ್ಲಿ ನಡೆದ ಅತಿ ದೊಡ್ಡ ದುರಂತ ಇದು. ತುಮರಿ ಸೇತುವೆ ಶಂಕುಸ್ಥಾಪನೆ ಹೊತ್ತಿನಲ್ಲಿ ಬಿ ಎಸ್ ಯಡಿಯೂರಪ್ಪನವರು ಈ ಕಥೆ ನೆನಪಿಸಿದ್ದರು.
ಅವರ ಬೆನ್ನ ಹಿಂದೆ ದೋಣಿ ವೆಂಕಟನ ಸಂಬಂಧಿಯಾಗಿ ನಾನು ವೇದಿಕೆಯಲ್ಲಿ ಇದ್ದೆ. ಬಿ ಎಸ್ ವೈ ಸೇತುವೆಗೆ ಕಾರಣವೂ ಆದ ಈ ಕಥೆ ಹೇಳಿ ದೋಣಿ ಮುಳುಗಡೆಯಾದ ವ್ಯಥೆಯನ್ನ ಇಂದಿನ ಶಾಸ ಕರ ಕುಟುಂಬ ಎಂಬ ಹೆಸರನ್ನು ವಿಶೇಷವಾಗಿ ಉಲ್ಲೇಖಿಸಿ ಹೇಳಿದರು. ಆ ಕಥೆ ನನ್ನ ಅಪ್ಪಯ್ಯನ ಸಾಮಾಜಿಕ ಕಾಳಜಿ ಮತ್ತು ಪ್ರಾಮಾಣಿಕ ನಡವಳಿಕೆಗಳ ಆತ್ಮಕಥೆ ಭಾಗವೂ ಹೌದು.
ಹೆಣ ಎತ್ತುವಾಗ ಕೊರಳ ಸರ ಕಳಚಿಕೊಂಡು ಮುಚ್ಚಿಡುವ ನುರಿತ ಮುಳುಗುಗಾರರನ್ನ ನಾನು ಕಂಡಿರುವೆ, ಕೇಳಿರುವೆ. ಅಪ್ಪ ತನ್ನ ಸಮಾಜಮುಖಿ ನಡವಳಿಕೆ ಮತ್ತು ಪ್ರಾಮಾಣಿಕತೆ ಕಾರಣ ನನಗೆ ಯಾವಾಗಲೂ ಹತ್ತಿರ ಮತ್ತು ಎತ್ತರ. ದೋಣಿ ವೆಂಕಟ ಸಾಹಸಗಾಥೆ ಚಿಕ್ಕದಲ್ಲ. 70 ವರ್ಷದಲ್ಲಿ ಆತ ಬದುಕಿ ಬಂದದ್ದು, ಅದರಲ್ಲೂ ದೋಣಿ ಕಡವಿಗೆ ಆ ರಾತ್ರಿ ಮರಳಿ ಬರುವ ಮುನ್ನ ದೋಣಿ ಮುಳುಗಿದ ಜಾಗ ಬಳಿ ಮರ ಮಟ್ಟುವಿನಲ್ಲಿ ಯಾರಾದರೂ ಉಳಿದಿರಬಹುದೇ, ಸಹಾಯಕ್ಕೆ ಕರೆಯಬಹುದೇ ಎಂದೇ ಜೋರು ಕೂಗು ಹಾಕುತಾ ಬಂದಿದ್ದರಂತೆ.
ಕಷ್ಟದಲ್ಲಿಯೂ ಎಂತಹ ಹೃದಯ ವೈಶಾಲ್ಯತೆ…ಈ ನಿಜ ಕಥೆ ಎಷ್ಟೆಲ್ಲಾ ಹೇಳುತ್ತಾ ಇದೆ.ಅಪ್ಪ ಮೊನ್ನೆ ಮತ್ತೆ ಈ ಕಥೆ ಹೇಳಿದರು. ನಾನು ಕೇಳುತ್ತಾ ಮೌನವಾದೆ.-
ಜಿ. ಟಿ ಸತ್ಯನಾರಾಯಣ. (ಚಿತ್ರಗಳು: 1) ಹರದೂರು ರಸ್ತೆ. ಅಂದರೆ ಮುಳುಗಡೆ ಮುನ್ನ ಸಾಗರ ಸಂಪರ್ಕ ಮಾಡುತ್ತಾ ಇದ್ದ ರಸ್ತೆ. ಈಗಲೂ ಗಟ್ಟಿ ಇದೆ. 2) ದೋಣಿ ವೆಂಕಟನನ್ನು ವಿಚಾರಣೆ ಮಾಡಿದ ಅಂದಿನ ಕರೂರು ಪೊಲೀಸ್ ಸ್ಟೇಷನ್. ಈ ಕಟ್ಟಡದಲ್ಲಿ ಅಪರಾಧಿಗಳನ್ನು ಬಂಧನ ಮಾಡುತ್ತಾ ಇದ್ದ ಒಂದು ಕತ್ತಲ ಕೋಣೆ ಇಂದಿಗೂ ಇದೆ.)
