nagesh hegde on drugs-ಆನಂದಾಮೈಟ್ ಎಂಬ ಕನ್ನಡದ ಡ್ರಗ್ಸ್ ಶಬ್ಧದ ಬಗ್ಗೆ ನಾಗೇಶ್ ಹೆಗಡೆ ಬರಹ

ಆನಂದಾಮೈಡ್‌ ಉಕ್ಕಿದರೆ ಸಾಲದೇ?

[ನಾಗೇಶ ಹೆಗಡೆ ಅಂಕಣ ಲೇಟೆಸ್ಟ್‌ ಪ್ರಜಾವಾಣಿಯಲ್ಲಿ]

ಮಾದಕವಸ್ತುಗಳನ್ನು ಎಂದೂ ಸೇವಿಸದಿದ್ದವರಿಗೂ ತಲೆ ಗಿಮ್ಮೆನ್ನಿಸುವಷ್ಟು ‘ಡ್ರಗ್ಸ್‌’ ಸುದ್ದಿಗಳ ಸುರಿಮಳೆಯಾಗುತ್ತಿದೆ. ಇಲ್ಲಿ ರಾಗಿಣಿ, ಅಲ್ಲಿ ರಿಯಾ; ಇಲ್ಲಿ ಸಂಜನಾ, ಅಲ್ಲಿ ಕಂಗನಾ; ಇಲ್ಲಿ ಇ-ಡಿ, ಅಲ್ಲಿ ಎನ್‌ಸಿಬಿ; ಹೀರೋಯಿನ್‌ಗಳ ಜೊತೆ ಹೆರಾಯಿನ್‌. ಮಾದಕ ವಿಷಯ ಬಿಟ್ಟರೆ ಈ ದೇಶದಲ್ಲಿನ ಬೇರೆ ಸುದ್ದಿಗಳಿಗೆ ವಿದೇಶಿ ಚಾನೆಲ್‌ಗಳನ್ನು ಜಾಲಾಡಬೇಕಾಗಿದೆ.ಅನಾದಿ ಕಾಲದಿಂದಲೂ ಅಫೀಮು, ಚರಸ್‌, ಗಾಂಜಾ, ಹಶೀಶ್‌, ಕೆನ್ನಾಬೀಸ್‌, ಗ್ರಾಸ್‌, ವೀಡ್‌ ಇತ್ಯಾದಿ ಹೆಸರಿನಲ್ಲಿ ಈ ದ್ರವ್ಯಗಳು ಮನೋಲ್ಲಾಸಕ್ಕೆ, ಔಷಧಕ್ಕೆ ಹಾಗೂ ಅಧ್ಯಾತ್ಮ ಸಾಧನೆಗೆ ಬಳಕೆಯಾಗುತ್ತಿದ್ದವು. ಅಮೆರಿಕದ ಸಂಸ್ಥಾಪಕ ಅಧ್ಯಕ್ಷ ಜಾರ್ಜ್‌ ವಾಷಿಂಗ್ಟನ್‌ ಅಫೀಮನ್ನು ಬೆಳೆಯುತ್ತಿದ್ದ, ಮಾರುತ್ತಿದ್ದ; ಕಳೆದ ಶತಮಾನದಲ್ಲಿ ಅದು ಬ್ರಿಟಿಷರ ಕೈಯಲ್ಲಿ (ಚೀನಾವನ್ನು ಮಣಿಸುವ) ರಾಜಕೀಯ ಶಸ್ತ್ರವಾಯಿತು. ನಿಷೇಧ ಹಾಕಿದ ದೇಶಗಳಲ್ಲೆಲ್ಲ ಅದು ಕೇಡಿಗಳ ಪಾಪಾಸ್ತ್ರವಾಯಿತು. ಜಾಗತಿಕ ರಾಜಕಾರಣದಲ್ಲಿ ಆಗಾಗ ಸಂಚಲನ ಮೂಡಿಸುತ್ತ ಕಳ್ಳಮಾರ್ಗದಲ್ಲಿ ಓಡಾಡುತ್ತ ಅದು ಸಾರ್ವಕಾಲಿಕ ಸಾಂಕ್ರಾಮಿಕವಾಯಿತು. ಸದ್ಯಕ್ಕೆ ನಮ್ಮಲ್ಲಿ ಅದು ಮಾಧ್ಯಮಗಳ ಮಾಣಿಕ್ಯವಾಗಿ ಮಿನುಗತೊಡಗಿದೆ.ವಿಜ್ಞಾನ ಏನು ಹೇಳುತ್ತದೆ? ಈ ಮಾದಕ ಸಸ್ಯಗಳ ಸಂಶೋಧನೆ ನಿಷಿದ್ಧವಾಗಿದ್ದರಿಂದ ವಿಜ್ಞಾನ ಬಾಯಿಕಟ್ಟಿ ಕೂತಿತ್ತು. ಹೊಸ ಮಾಹಿತಿಗಳೆಲ್ಲ ಚಟದಾಸರದ್ದೇ ಸಂಶೋಧನೆ ಎಂಬಂತೆ, 1960ರವರೆಗೂ ಅದು, ಅದಂತೆ- ಇದಂತೆಗಳ ಕಂತೆಯಾಗಿತ್ತು. ಅಫೀಮಿನ ಚಟವನ್ನು ತಗ್ಗಿಸಲು ‘ಮಾರ್ಫಿನ್‌’ ಒಳ್ಳೆಯದೆಂದು ವೈದ್ಯರು ಹೇಳಿದರು. ಅದು ಜಾಸ್ತಿ ದಾಸರನ್ನು ಸೃಷ್ಟಿಸಿತು. ‘ಮಾರ್ಫಿನ್‌’ ಹಾವಳಿಯನ್ನು ತಡೆಯಲು ಹೆರಾಯಿನ್‌, ಮರಿಹ್ಯುವಾನಾ ಬಂದು ಇನ್ನಷ್ಟು ವ್ಯಾಪಕವಾದವು. ಚಟಕ್ಕೆ ಬಿದ್ದು ಬದುಕೇ ಚಿಂದಿಯಾದ ಬೆರ್ಚಪ್ಪಗಳಿಗೆ ಜೀವ ತುಂಬಲೆಂದು ಜರ್ಮನ್‌ ವಿಜ್ಞಾನಿಗಳು ‘ಮೆಥಡೋನ್‌’ ಎಂಬ ಕೃತಕ ಕೆಮಿಕಲ್‌ ದ್ರವ್ಯವನ್ನು ಪರಿಚಯಿಸಿದರು. ಅದು ವಿಶ್ವಸಂಸ್ಥೆಯಿಂದ ಅಂಗೀಕೃತ ‘ಔಷಧ’ವಾಗಿದ್ದರೂ ಪ್ರತಿದಿನವೂ ಡಾಕ್ಟರ್‌ ಬಳಿ ಹೋಗುವಂತಾಯಿತು. ಸಸ್ಯದ ಒಳಗಿನ ಸಂಗತಿ ಏನು?1963ರಲ್ಲಿ ಬಲ್ಗೇರಿಯದಿಂದ ಇಸ್ರೇಲಿಗೆ ಬಂದ ಯುವವಿಜ್ಞಾನಿ ರಾಫೆಲ್‌ ಮೆಕ್ಕೊಲಮ್‌ ಈ ಸರ್ಕಾರದಿಂದ ಹೇಗೋ ಅನುಮತಿ ಪಡೆದು ಕನ್ನಾಬಿಸ್‌ ಸಸ್ಯದ ರಸಲಕ್ಷಣಗಳ ಅಧ್ಯಯನ ಆರಂಭಿಸಿದ. ನೋಡಿದಷ್ಟೂ ಅವನಿಗೆ ಅಚ್ಚರಿಗಳ ಸರಮಾಲೆಯೇ ಕಾಣತೊಡಗಿತು. ಇಲಿಗಳ ಮೇಲೆ, ಕೋತಿಗಳ ಮೇಲೆ ಪ್ರಯೋಗ ನಡೆಸುತ್ತ ಹೋದ. ಎಷ್ಟೊಂದು ಕಾಯಿಲೆಗಳಿಗೆ, ಮನೋರೋಗಗಳಿಗೆ ಅದೊಂದು ಅಮೃತಕಲಶವಾಗಿ ಕಂಡಿತು. ಅವನ ತಂಡ ಮುಂದೆ ದಶಕಗಳ ಕಾಲ ಹೆಂಪ್‌, ಪಾಪ್ಪಿ, ಭಂಗಿ ಸಸ್ಯಗಳ ಮೇಲೆ ಸಂಶೋಧನೆ ನಡೆಸಿತು. ಪ್ರಮುಖವಾಗಿ ಮಾದಕ ಅಂಶಗಳಿರುವ ‘ಟಿಎಚ್‌ಸಿ’ ಮತ್ತು ಔಷಧೀಯ ಅಂಶಗಳಿರುವ ‘ಸಿಬಿಡಿ’ ಎಂಬ ಎರಡು ಬಗೆಯ ದ್ರವ್ಯಗಳನ್ನು ಪ್ರತ್ಯೇಕಿಸಿತು. ಚಟಗ್ರಾಹಿ ಅಂಶಗಳನ್ನು ಬೇರ್ಪಡಿಸಿದರೆ ಮಾದಕ ಸಸ್ಯಗಳಲ್ಲಿ ಮನುಷ್ಯನ 20ಕ್ಕೂ ಹೆಚ್ಚು ಕಾಯಿಲೆಗಳನ್ನು ವಾಸಿ ಮಾಡುವ ಗುಣ ಸಿಬಿಡಿಗೆ ಇದೆ ಎಂಬುದು ತಿಳಿದುಬಂತು. ಈತನ ತಂಡದ ನಿರಂತರ ಶ್ರಮದಿಂದಾಗಿ ಇಸ್ರೇಲ್‌ ಇಂದು ಔಷಧ ಜಗತ್ತಿನ ಶೃಂಗಸ್ಥಾನಕ್ಕೇರಿದೆ. ಮಾದಕ ಸಸ್ಯಗಳನ್ನು ಸಂಸ್ಕರಿಸಿ ಔಷಧವಾಗಿ ಬಳಕೆಗೆ ತರಬಲ್ಲ 20 ಸಾವಿರಕ್ಕೂ ಹೆಚ್ಚು ಪೇಟೆಂಟ್‌ಗಳು ಕಾನೂನಿನ ಅನುಮತಿಗಾಗಿ ಕಾದಿವೆ.ಮನುಷ್ಯನ ಮಿದುಳಿನಲ್ಲೂ ಇದೇ ಔಷಧಗಳನ್ನು ಹೋಲುವ ರಸಗಳು ಉತ್ಪನ್ನವಾಗುವುದನ್ನೂ ಮೆಕ್ಕೊಲಮ್‌ ತಂಡವೇ 1992ರಲ್ಲಿ ಪತ್ತೆ ಹಚ್ಚಿತು. ದೇಹಕ್ಕೆ ಅಗತ್ಯವಿದ್ದಾಗ ಆನಂದ, ಖುಷಿ, ಸಂತಸವನ್ನು ಸ್ಫುರಿಸಬಲ್ಲ ಈ ರಸಕ್ಕೆ ಆತ ‘ಆನಂದಾಮೈಡ್‌’ ಎಂದೇ ಹೆಸರಿಸಿದ. ನಮಗೆ ಸ್ಮರಣಶಕ್ತಿ, ಶರೀರದ ಹತೋಟಿ, ರೋಗನಿರೋಧಕ ಶಕ್ತಿ ಹೆಚ್ಚಲು ಈ ಸ್ಫುರಣವೇ ಕಾರಣವೆಂಬುದು ವೈದ್ಯಲೋಕಕ್ಕೆ ಖಚಿತವಾಯಿತು. ಜಾಸ್ತಿ ವ್ಯಾಯಾಮ ಅಥವಾ ದೇಹದಂಡನೆ ಮಾಡಿದಾಗ ಇಲ್ಲವೆ, ತೀವ್ರ ಧ್ಯಾನಸ್ಥ ಸ್ಥಿತಿಯಲ್ಲಿ- ಭಕ್ತ ಕುಂಬಾರನಿಗಾದಂತೆ, ಮಿದುಳಿನಿಂದ ಇದು ತಂತಾನೆ ಉಕ್ಕುತ್ತದೆ ಎಂಬುದು ಖಚಿತವಾಯಿತು. ಅದು ಸಾಕಿತ್ತು. ಆದರೆ ಉಕ್ಕಿದ್ದು ಇಳಿಯಬಾರದೆಂದು ಡ್ರಗ್ಸ್‌ ಸೇವಿಸುವ ಕ್ರೀಡಾಳುಗಳು, ದೇಹಶ್ರಮವಿಲ್ಲದೇ ಕಿಕ್‌ ಬಯಸುವ ಸುಶಾಂತರೂ ಇರುತ್ತಾರಲ್ಲ?ಮಾದಕ ಸಸ್ಯಗಳು ಔಷಧೀಯ ಉದ್ದೇಶಕ್ಕೆ ಮುಕ್ತವಾಗಿ ಸಿಗಬೇಕೆಂದು ಡಾಕ್ಟರ್‌ಗಳು ಅನೇಕ ರಾಷ್ಟ್ರಗಳಲ್ಲಿ ಒತ್ತಾಯ ಹೇರುತ್ತಿದ್ದಾರೆ. ಕಾನೂನಿನ ಬಿಗಿಹಿಡಿತ ಇದ್ದಷ್ಟೂ ಅಪರಾಧ, ಗುಹ್ಯರೋಗಗಳು ಹೆಚ್ಚುತ್ತವೆ; ಅದರಿಂದ ಹಾನಿಕಾರಕ ಕೃತಕ ಕೆಮಿಕಲ್‌ಗಳ ಹಾವಳಿಯೂ ಹೆಚ್ಚುವುದರಿಂದ ಹಿತಮಿತ ಸೇವನೆಗೆ ಅವಕಾಶ ಸಿಗಬೇಕೆಂದು ಒತ್ತಾಯಿಸುವವರೂ ಹೆಚ್ಚುತ್ತಿದ್ದಾರೆ. ಕೆನಡಾ, ಝೆಕ್‌, ಪೋರ್ಚುಗಲ್‌, ಉಗಾಂಡಾಗಳಲ್ಲಿ ಮಾದಕ ದ್ರವ್ಯಗಳ ಬಳಕೆಗೆ ಯಾವ ನಿರ್ಬಂಧವೂ ಇಲ್ಲ. ಆಸ್ಟ್ರೇಲಿಯಾದಲ್ಲಿ ವೈದ್ಯರ ಶಿಫಾರಸಿನ ಮೇಲೆ ಔಷಧವಾಗಿ ಬಳಸಲು ಅವಕಾಶವಿದೆ.ಸ್ವಿತ್ಸರ್ಲೆಂಡ್‌ ದೇಶದ ಧೋರಣೆಯೇ ಬೇರೆ ಬಗೆಯದು. ಅಲ್ಲಿ ತೀವ್ರ ಚಟದಾಸರಿಗೆ ಸರ್ಕಾರವೇ ಡ್ರಗ್ಸ್‌ ನೀಡುತ್ತದೆ. ದಿನವೂ ಹೊಸ ಸೂಜಿಗಳನ್ನು ನೀಡುತ್ತದೆ. ಝೂರಿಕ್‌ ನಗರದಲ್ಲಿ ಡ್ರಗ್ಸ್‌ ವಿತರಣೆಗೆಂದೇ ಮೀಸಲಾದ ‘ಸೂಜಿಪಾರ್ಕ್’ನ ಸಂತೆಯನ್ನು ತೋರಿಸಲು ಸ್ವಿಸ್‌ ಅಧಿಕಾರಿಗಳೇ ಈ ಅಂಕಣಕಾರನನ್ನು ಕರೆದೊಯ್ದಿದ್ದರು.ಡ್ರಗ್ಸ್‌ ದಲ್ಲಾಳಿಗಳನ್ನು ಮಟ್ಟ ಹಾಕಿ, ಎಳೆಯರಿಗೆ ಅದು ಸಿಗದಂತೆ ಮಾಡುವುದೇ ಅತ್ಯಂತ ಸೂಕ್ತವೆಂದು ಸ್ವಿಸ್‌ ಸರ್ಕಾರ ನಿರ್ಧರಿಸಿದೆ. ಅಲ್ಲಿನವರ ಈ ಕ್ರಮದಿಂದಾಗಿ ಏಡ್ಸ್‌ ಕಾಯಿಲೆ, ಹಿಂಸಾಕೃತ್ಯಗಳ ಪ್ರಮಾಣ ಶೇಕಡ 60ರಷ್ಟು ಕಡಿಮೆಯಾದ ವರದಿಗಳಿವೆ. ಮುಕ್ತವಾಗಿ ಸಿಗುವಂತೆ ಮಾಡಿದರೂ ಅಷ್ಟೆ, ಕಟ್ಟುನಿಟ್ಟಿನ ನಿರ್ಬಂಧ ಹಾಕಿದರೂ ಅಷ್ಟೆ, ಸಾರಾಯಿಯ ಹಾಗೆ, ಪ್ರತೀ ಸಮಾಜದಲ್ಲೂ ಕೆಲವರು ಮಾತ್ರ ಅದಕ್ಕೆ ದಾಸರಾಗುತ್ತಾರೆ. ಅವರ ಪ್ರಮಾಣ ಹೆಚ್ಚದಂತೆ ನೋಡಿಕೊಂಡರೆ ಸಾಕೆಂಬ ಧೋರಣೆ ಅನೇಕ ದೇಶಗಳಲ್ಲಿ ವ್ಯಾಪಕವಾಗುತ್ತಿದೆ.ಒಬಾಮಾ ಅಧ್ಯಕ್ಷರಾಗಿದ್ದಾಗ ಮಂಡ್ಯದ ಬಳಿಯ ಹಲ್ಲೇಗೆರೆ ಕುಟುಂಬದ 38ರ ಯುವಕ ಡಾ. ವಿವೇಕ್‌ ಮೂರ್ತಿಯವರನ್ನು ಅಮೆರಿಕದ ಸರ್ವೋನ್ನತ ವೈದ್ಯಾಧಿಕಾರಿ (ಸರ್ಜನ್‌ ಜನರಲ್‌) ಎಂದು ನೇಮಕ ಮಾಡಿದರು. ಮಾದಕ ದ್ರವ್ಯ ಮತ್ತು ಗನ್‌ ಲಾಬಿಗಳು ಈ ನೇಮಕವನ್ನು ವಿರೋಧಿಸಿದವು. ಮೂರ್ತಿ ತಮ್ಮ ನೇಮಕವಾದ ವರ್ಷವೇ ಅಮೆರಿಕದಲ್ಲಿ 47 ಸಾವಿರ ಜನರ ಅಕಾಲಿಕ ಮೃತ್ಯು ಮಾದಕ ದ್ರವ್ಯದಿಂದಾಗಿಯೇ ಸಂಭವಿಸಿದ್ದನ್ನು ಹೇಳುತ್ತ, ಸರ್ಕಾರದ ಪರವಾಗಿ ಮೊತ್ತಮೊದಲ ಬಾರಿಗೆ ಚಟ ನಿರ್ವಹಣೆಯ ಮಾರ್ಗಸೂಚಿ ನಿರ್ದೇಶನಗಳನ್ನು ರೂಪಿಸಿದರು. ನಾರ್ಕೊಟಿಕ್‌ ವಿಭಾಗದ ಮಾನವೀಯ ಮುಖ ಹೇಗಿರಬೇಕೆಂಬುದನ್ನು ಹೇಳುವ ಈ ವರದಿ ಅಮೆರಿಕದ ಮಹತ್ವದ ದಾಖಲೆಗಳಲ್ಲಿ ಒಂದೆನಿಸಿದೆ.ಇನ್ನೇನು, ಅಮೆರಿಕದ ಕಾರುಗಳಲ್ಲಿ ಹೊಸದೊಂದು ಸಾಧನವನ್ನು ಅಳವಡಿಸಲಾಗುತ್ತದೆ. ಡ್ರಗ್ಸ್‌ ಸೇವನೆ ಮಾಡಿ ಡ್ರೈವರ್‌ ಸೀಟಿನಲ್ಲಿ ಕೂತರೆ ಎಂಜಿನ್‌ ಚಾಲೂ ಆಗದಂತೆ ಸೂಕ್ಷ್ಮ ಸಂವೇದಿ ಇಲೆಕ್ಟ್ರಾನಿಕ್‌ ನಿಯಂತ್ರಕಗಳು ಬರಲಿವೆ. ಚಾಲಕನ ಹಾವಭಾವ, ಕಣ್ಣುಗುಡ್ಡೆಗಳ ಚಲನೆ, ಉಸಿರಾಟದ ವೇಗ ಇತ್ಯಾದಿ ಹದಿನೈದು ಬಗೆಯ ಲಕ್ಷಣಗಳನ್ನು ಅಳೆದು ನೋಡಿ, ಅದು ಕಾರನ್ನು ನಿಷ್ಕ್ರಿಯ ಗೊಳಿಸುತ್ತದೆ. ಲಂಚ ಕೊಟ್ಟರೂ ಊಹೂಂ.ಮಾದಕ ಸಸ್ಯಗಳಿಗೆ ವೀಡ್‌ ಎಂತಲೂ ಹೇಳುತ್ತಾರೆ. ಏಕೆಂದರೆ, ಹಾಗೇ ಬಿಟ್ಟರೆ ಅದು ಕಳೆಯ ಹಾಗೆ ಎಲ್ಲೆಲ್ಲೂ ಬೆಳೆಯುತ್ತದೆ. ಗಾಂಜಾ ಎಂದರೆ ಗಂಗಾತಟದಲ್ಲಿ ತಂತಾನೇ ಬೆಳೆಯುವ ಸಸ್ಯ ತಾನೆ? ಅಫೀಮು ಚಟವೂ ಹಾಗೇ. ಅದರ ಹಾವಳಿ ಮಿತಿಮೀರದ ಹಾಗೆ ನಿರಂತರ ಸವರುತ್ತಲೇ ಇರಬೇಕು. ನಾರ್ಕೊಟಿಕ್‌ ಎಂಬ ಕಾರ್ಕೋಟಕದ ನಿಯಂತ್ರಣ ಮಾಡಬೇಕಾದವರು ವರ್ಷವಿಡೀ ನಿದ್ರಾ-ಭಂಗಿಯಲ್ಲಿದ್ದು, ಜನರ ಗಮನವನ್ನು ಬೇರೆಡೆ ತಿರುಗಿಸಬೇಕಾದಾಗ ಮಾತ್ರ ಮೈಕೊಡವಿ ಎದ್ದು ತಾರೆಗಳ ಮೇಲೆ ಮುಗಿಬಿದ್ದರೆ ಹೇಗೆ?ಸುದ್ದಿಗ್ರಾಹಕರಿಗೆ ಅದು ಕ್ಷಣಿಕ ಕಿಕ್‌ ಕೊಟ್ಟೀತೆ ವಿನಾ ಮಾದಕ ಹಾವಳಿಯನ್ನು ತಗ್ಗಿಸಲಾರದು.10.09.2020

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *