

ಇತಿಹಾಸದ ಭೂಗರ್ಭದಲ್ಲಿ ಅದೆಷ್ಟು ದಾಖಲೆಗಳು ಹುದುಗಿ ಕೂತಿವೆಯೋ?
ಬನವಾಸಿ, ಬಿಳಗಿ, ಗೇರುಸೊಪ್ಪಾ, ಸದಾಶಿವಗಢ, ಮಿರ್ಜಾನ್,ಕಾಕನೂರು ಕೋಟೆ ಹೀಗೆ ಗೋವಾ ತುದಿಯಿಂದ ತಮಿಳುನಾಡಿನ ವರೆಗೆ…. ಅದೆಷ್ಟು ಪ್ರದೇಶಗಳನ್ನು ನೋಡಿಲ್ಲ.ಗೋವಾ ಗಡಿಯ ಮಾರ್ಕೆಪೂಣಂ ಜಾತ್ರೆಯ ವಿಶಿಷ್ಟ ದೇವಸ್ಥಾನದಿಂದ ಪ್ರಾರಂಭಿಸಿ ಬೇಲೂರು, ಹಳೆಬೀಡು, ಹಂಪಿ ಹೈದರಾಬಾದಿನ ಕೆಲವು ಪ್ರದೇಶಗಳು, ಹುಬ್ಬಳ್ಳಿ ದೆಹಲಿಯ ಸಮಾಧಿಗಳು! ಎಷ್ಟೊಂದು ಸತ್ಯ, ಚರಿತ್ರೆ ಹುದುಗಿದ ಪ್ರದೇಶಗಳನ್ನು ಸಂದರ್ಶಿಸಿಲ್ಲ. ಇಲ್ಲೆಲ್ಲಾ ಸಕಾರಣ, ನಿಗದಿತ ಸಮಯ ಮಿತಿಯಲ್ಲಿ ಅಡ್ಡಾಡಿ ಬಂದ ನಮಗೆ ಇದೇ ಶಿವಮೊಗ್ಗ -ಜೋಗ ರಸ್ತೆಯ ಅನಂತಪುರದ ಒಳಗೆ ಇಂಥದ್ದೊಂದು ಪ್ರದೇಶವಿದೆ ಎನ್ನುವ ಅಂದಾಜೂ ಇದ್ದಿರಲಿಲ್ಲ. ಕಿರಿಯ ಸ್ನೇಹಿತನಂಥ ರಾಜ್ ಗುರು ಇದೇ ತಿಂಗಳು ಮೂರ್ನಾಲ್ಕು ಪ್ರದೇಶಗಳಿಗೆ ಕರೆದಾಗ ಒಂದೆರಡು ಬಾರಿ ಹೋಗಿ ಬಂದಿದ್ದೆ. ಈ ಬಾರಿ ಗುರು ತುಸು ಹೆಚ್ಚೇ ಒತ್ತಾಯಿಸಿದ್ದ ಅವನ ಒರಾತ ಒಂದೇ ಹೊಸಗುಂದಕ್ಕೆ ಒಮ್ಮೆ ಬನ್ನಿ.
ಗುಂಜಗೋಡಿನ ಪ್ರವೀಣಾ ದಂಪತಿಗಳೊಂದಿಗೆ ನಮಗೆಂದೇ ಗುರು ವ್ಯವಸ್ಥೆ ಮಾಡಿದ್ದ ಬೆಂಗಳೂರಿನ ಕ್ವಾಲೀಸ್ ಕಾರ್ನಲ್ಲಿ ಸಿದ್ಧಾಪುರದಿಂದ ಬೆಳಿಗ್ಗೆ ಹೊರಟಾಗ ಸಾಗರ ದಾಟಿ, ಅನಂತಪುರಕ್ಕಿಂತ ಹಿಂದೆ 1-2 ಕಿ.ಮೀ ಒಳರಸ್ತೆಯಲ್ಲಿ ಹೊಸಗುಂದಕ್ಕೆ ಇಳಿದಾಗ ಹೊಸ ಲೋಕವೊಂದರ ಅನಾವರಣವಾದಂತಾಯಿತು. ಸ್ವಿಂಮ್ಮಿಂಗ್ಪೂಲ್ ಮಾದರಿಯ ಪುಷ್ಕರಣೆ, ಅದಕ್ಕೆ ತಾಗಿಕೊಂಡತ್ತಿದ್ದ ಶಿಲಾಶಾಸನಗಳು, ಅಲ್ಲಿಯ ಉಮಾಮಹೇಶ್ವರ ದೇವಸ್ಥಾನ, ಗೋಶಾಲೆ ಈ ಪ್ರದೇಶಕ್ಕೆ ತಾಕಿಕೊಂಡಂತಿರುವ 600 ಎಕರೆಗಳ ದೇವರಕಾಡು. ಈ ಪ್ರದೇಶದ ಜಲ. ಮರ, ವನ,ಜನ ನಮಗೆ ಹೇಳೀಮಾಡಿಸಿದಂತಿದ್ದ ಪ್ರದೇಶವದು.
ಶಿಷ್ಯ ಗುರು ಇದೇ ಪ್ರದೇಶದಲ್ಲಿ ವಿವಾಹವಾಗಲು ನಿಶ್ಚಯಿಸಿರುವುದು,ತನ್ನ ಮೊದಲ ನಿರ್ಮಾಣದ ಚಲನಚಿತ್ರವೊಂದರ ಚತ್ರೀಕರಣ ನಡೆಯುತ್ತಿರುವುದು ಇವುಗಳೊಂದಿಗೆ ಈ ಹೊಸಗುಂದದ ವೈಶಿಷ್ಟ್ಯದ ಕಾರಣಕ್ಕೆ ಗುರು ನಮ್ಮನ್ನು ಅಲ್ಲಿ ಬರಮಾಡಿಕೊಂಡಿದ್ದು.
ಈ ಹಿಂದೆ ಹೊಸಗುಂದ ಶಾಸನ ಎಂದು ಓದಿದ್ದು ನೆನಪಿತ್ತಷ್ಟೆ. ಡಾ,ಜ್ನಾನೇಶ್ ಹಿಂದೆ ಬಾರಂಗಿಯ ಅರಸರಿಗೂ ಹೊಸಗುಂದದ ದೊರೆಗಳಿಗೂ ಆಗಿದ್ದ ಯುದ್ಧಕ್ಕೆ ಸಂಬಂಧಿಸಿದ್ದ ಶಾಸನವೊಂದು ತಮ್ಮೂರು ಕೊಡಕಣಿಯಲ್ಲಿ ಇರುವುದಾಗಿ ಅಲ್ಲೇ ತಿಳಿಸಿದರು.
ಹೀಗೆ ಶಿಷ್ಯ ಗುರುವಿನ ಮೇಲ್ ಉಸ್ತುವಾರಿಯ ಸಿನೆಮಾ ಚಿತ್ರೀಕರಣದೊಂದಿಗೆ ಹೊಸಗುಂದದ ಶಾಂತರಸರು ಆಳಿ, ರಾಜ್ಯ, ದೇವಸ್ಥಾನ, ಕೋಟೆ, ಕಾಡು ಕಟ್ಟಿ ಬೆಳೆ ಸಿದ ಪ್ರದೇಶ ನವೀಕರಣಗೊಂಡದ್ದನ್ನು ನೋಡಿ ಖುಷಿ ಪಟ್ಟೆವು. ನಾರಾಯಣ ಶಾಸ್ತ್ರಿ ಎನ್ನುವವರು ಸುಮಾರು 800 ವರ್ಷಗಳ ಹಿಂದಿನ ವೈಭವದ ಹೊಸಗುಂದವನ್ನು 1970 ರ ನಂತರ ಸರ್ಕಾರ, ಸಾರ್ವಜನಿಕರು ಮರುಶೋಧಿಸಿದ್ದನ್ನು ಚರಿತ್ರೆಗೆ ಅಪಚಾರವಾಗದಂತೆ ಅಭಿವೃದ್ಧಿ ಪಡಿಸಿರುವ ರೀತಿ ಹಿಡಿಸಿತು.
ನಮ್ಮ ನೆಲದ ಹೊಸಗುಂದ ರಾಜರು ಮೆರೆದು ಮರೆತುಹೋಗಿದ್ದ ಸ್ಥಳವೊಂದು ಐವತ್ತು ವರ್ಷಗಳ ಹಿಂದೆ ಪತ್ತೆಯಾಗಿ, ಈಗ ನವೀಕರಣಗೊಂಡಿರುವುದು, ಒಂದೇ ಪ್ರದೇಶದಲ್ಲಿ ಗೋಶಾಲೆ, ದೇವರಕಾಡು, ಧಾರ್ಮಿಕ, ಐತಿಹಾಸಿಕ ಮಹತ್ವಗಳೆಲ್ಲಾ ಮೇಳೈಸಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವುದು ನಮ್ಮಲ್ಲೂ ಅಭಿಮಾನ ಮೂಡಿಸಿತು. ಇವೆಲ್ಲವನ್ನೂ ಪ್ರೀತಿಯಿಂದ ತೋರಿಸಿ, ಸಂಬ್ರಮಿಸಿದ ಗುರು ನಮಗೆ ಹೊಸಗುಂದವೆಂಬ ನೂತನ ಪ್ರವಾಸಿಕ್ಷೇತ್ರ ಪರಿಚಯಿಸಿದ. ಈ ಸಾಧ್ಯತೆಯ ಹಿಂದಿನ ಕಾರಣ, ಪ್ರೀತಿ- ಅಭಿಮಾನಗಳನ್ನು ಕೇವಲ ಗುರುಶಿಷ್ಯನ ಸಂಬಂಧಕ್ಕೆ ಮಿತಿಗೊಳಿಸಬಾರದಲ್ಲವೆ? ಹೊಸಗುಂದದ ಪರಿಚಯ, ವಿವರ, ಅಲ್ಲಿನ ವೈಶಿಷ್ಟ್ಯಗಳನ್ನು ನೀವು samaajamukhi ಯು ಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು.






1 Comment