ಅನಿಸುತಿದೆ ಯಾಕೋ ಇಂದು……. ಹುಟ್ಟಿದ ಗುಟ್ಟು ಹೀಗಿದೆ- (ಚಿತ್ತಾಲತನದ ಸೊಬಗು)
ಗೌರೀಶ್‍ಕಾಯ್ಕಿಣಿಯವರ ಪುತ್ರರಾಗಿರುವ ಭಾಗ್ಯದಿಂದಾಗಿ ಜಯಂತರಿಗೆ ಸಾಹಿತ್ಯಲೋಕ, ಸಾಹಿತಿಗಳ ಲೋಕವೆಲ್ಲಾ ತೀರಾಎಳೆವಯಸ್ಸಿನಿಂದಲೇ
ಚಿರಪರಿಚಿತ, ಕವಿಗಳು, ಸಾಹಿತಿಗಳು ಕಾಯ್ಕಿಣಿಯವರ ಮನೆಗೆ ಬರುವುದು, ವೈಚಾರಿಕ ಕಡಕ್ಕು ಹಿರಿ ಕಾಯ್ಕಿಣಿಯವರೊಂದಿಗೆ ‘ಚಿಗುರಿದ ಕನಸಿನ’ಜಯಂತ್ ಸಮಾಜಸೇವಾಕರ್ತರು, ಸಾಹಿತಿಗಳು, ಬರಹಗಾರರ ಮನೆಗೆ ಹೋಗುವುದೆಲ್ಲಾಮಾಮೂಲಾಗಿತ್ತಂತೆ. ಎಳೆ ಕವಿ ಜಯಂತರ ಬರಹ, ಸಾಹಿತ್ಯದಿಂದಾಗಿ ಜಯಂತ್ ಮಿ. ಡಿಫರೆಂಡ್ ಎಂದು ಗುರುತಿಸಿಕೊಂಡಿದ್ದರು.
ಹೀಗೆ ಶಾಲಾ ಕಾಲೇಜುಗಳಲ್ಲಿ ತುಸು ಭಿನ್ನರೆಂದು ಗುರುತಿಸಿಕೊಂಡಿದ್ದ ಜಯಂತ್ ಕುಮಟಾದ ಬಾಳಿಗಾ ಕಾಲೇಜಿನ ಸಾಹಿತ್ಯದ ಕಾರ್ಯಕ್ರಮವೊಂದಕ್ಕೆ ಕಪ್ಪು ಹಲಗೆಯ ಮೇಲೆ ‘ಅನಿಸುತಿದೆ ಯಾಕೋ ಇಂದು ನೀವೇನೆ ನಮ್ಮವರೆಂದು’ ಎಂದು ಬರೆದು ಅತಿಥಿಗಳಿಗೆ ಆಹ್ವಾನ ಕೋರಿದ್ದರಂತೆ !
ಮುಂದೆ ಯೋಗರಾಜ್ ಭಟ್ಟ್‍ರ ಸಹವಾಸ ದೋಷದಿಂದಾಗಿ ‘ಮುಂಗಾರು ಮಳೆ’ಗೆ ಮುದ್ದಾದ ಹಾಡೊಂದನ್ನು ಬರೆಯಬೇಕಾಗಿ ಬಂದಾಗ….
ಜಯಂತ್, ತಮ್ಮ ಹಳೆ ಸಾಲುಗಳನ್ನೇ ಸ್ವಲ್ಪ ತಿರುಚಿ(?) ‘ಅನಿಸುತಿದೆ ಯಾಕೋ ಇಂದು…. ನೀನೇನೆ ನನ್ನವಳೆಂದು…. …..ಮಾಯದಾ ಲೋಕದಿಂದ ನನಗಾಗಿ ಬಂದವಳೆಂದು’ ಎಂದೆಲ್ಲಾ ಬರೆದು ಜಗತ್ಪ್ರಸಿದ್ಧರಾಗುವುದರೊಂದಿಗೆ, ಯುವ ಮನಸುಗಳ ಪ್ರೀತಿಯ ಗೀತೆ ರಚನೆಕಾರ ಎನಿಸಿಕೊಂಡರು.
ಇದಕ್ಕೂ ಮೊದಲು,
‘ಚಿಗುರಿದ ಕನಸು’ ಚಿತ್ರಕ್ಕೆ
‘ಓ… ಆಜಾರೆ…… ನಿನ್ನ ಕಂಡ ಕ್ಷಣ….’
ಆ ನಂತರ ‘ಅಂತೂ ಇಂತು ಪ್ರೀತಿ ಬಂತು’
‘ನಡೆದಾಡುವ ಕಾಮನ ಬಿಲ್ಲು……. ಉಸಿರಾಡುವ ಗೊಂಬೆಯು ಇವಳು….
ಸೇರಿದಂತೆ ಅನೇಕ ಹಾರ್ಟ್‍ಟಚ್ಚಿಂಗ್ ಗೀತೆಗಳನ್ನು ಗೀಚಿ, ಖುಷಿ ಹಂಚಿದರು.
ಅಪ್ಪನ ಬಳುವಳಿ ಎನ್ನುವಂತೆ ಜಯಂತರ ಸಂಪರ್ಕ ಅನೇಕ ಶ್ರೇಷ್ಠ ಉದ್ಧಾಮಸಾಹಿತಿ ಬರಹಗಾರರೊಂದಿಗೆಲ್ಲಾ ತೀರಾ ಎಳವೆಯಿಂದಲೇ ಇತ್ತು.
ಕಾಯ್ಕಿಣಿ ಕುಟುಂಬದ ಹಿತೈಸಿಗಳೂ ಚಿರಪರಿಚಿತರೂ ಆಗಿದ್ದ ಯಶವಂತ ಚಿತ್ತಾಲರು ವೃತ್ತಿ ಅನಿವಾರ್ಯತೆಗಾಗಿ ಮುಬೈನಲ್ಲಿದ್ದರು. ಅವರ ಸಂಬಂಧ-ಸಂಪರ್ಕದಲ್ಲಿದ್ದ ಜಯಂತ್, ಯಶವಂತ್ ಚಿತ್ತಾಲರ ಬರಹಗಳ ಮೊದಲ ಓದುಗ ಕೇಳುಗರಾಗಿದ್ದರಂತೆ.
ಹೀಗೆ ಯಶವಂತ್ ಚಿತ್ತಾಲರ ಪದ್ಯ-ಗದ್ಯ ವಾಚನ ಕೇಳುತ್ತಾ. ಪ್ರಯತ್ನಪೂರ್ವಕವಾಗಿ ಬ್ಯಾಂಡ್ ಸ್ಟ್ಯಾಂಡ್ ಬಂಡೆತೀರದ ಪ್ರೇಮಿಗಳ ಮುದ್ದಾಟ ಗಮನಿಸುತ್ತಿದ್ದರಂತೆ!
ಈ ರಹಸ್ಯ ಅರಿತ ಚಿತ್ತಾಲರು ವಿನೋದ ಪೂರ್ವಕವಾಗಿಯೇ ಅಲ್ಲಲ್ಲ ಇಲ್ಲಿ, ‘ಇತ್ತ ನೋಡು ಈ ಕಡೆ ಲಕ್ಷ ಕೊಡು’ ಎಂದು ಜಯಂತರ ಗಮನ ಸೆಳೆಯುತ್ತಿದ್ದರಂತೆ!
ಜಯಂತರಿಗೆ ಯಶವಂತ್, ಗಂಗಾಧರ ಚಿತ್ತಾಲರೆಂದರೆ, ವಿಶೇಷ ಪ್ರೀತಿ, ಕಕ್ಕುಲಾತಿ. ನಾವು ಚಿತ್ತಾಲರ ಸಾಹಿತ್ಯ ವಿದ್ವತ್ತಿನ ಅಭಿಮಾನಿಗಳೇನೋ ಹೌದು. ಆದರೆ ಅದಕ್ಕಿಂತ ಮಿಗಿಲಾಗಿ ನಾವು ಅವರ ಮನೆಯ ಶುಚಿ-ರುಚಿ, ಊಟ ಅವರ ‘ಚೆಂದನೆಯ ಮಹಿಳಾ ಕಾರ್ಯದರ್ಶಿಯ ಅಘೋಷಿತ ಅಭಿಮಾನಿಗಳು’ ಎಂದು ಸಂತೃಪ್ತಿಯ ತುಂಟ ನಗು ಬೀರುವ ಜಯಂತರ ಪೋಲಿ ಮಾತು ಅವರ ಹುಡುಗಾಟಿಕೆಗೆ ಸಾಕ್ಷಿ.
ಯಶವಂತ್ ಚಿತ್ತಾಲರು ‘ಶಿಖರ ಪ್ರತಿಭೆ’ ಯಲ್ಲ ಅವರು ‘ಸಾಗರ ಪ್ರತಿಭೆ’. ಶಿಖರ ಪ್ರತಿಭೆ ಎಂದರೆ, ತಾವಷ್ಟೇ ಬೆಳೆಯುತ್ತ ಸಾಗುವುದು, ಸಾಗರ ಪ್ರತಿಭೆಯೆಂದರೆ, ಎಲ್ಲರನ್ನೂ ಕೂಡಿಕೊಂಡು/ ಸೇರಿಕೊಂಡು ಬೆಳೆಯುವುದು. ಎನ್ನುವ ಜಯಂತ್, ಚಿತ್ತಾಲರು ಸ್ಥಾನ-ಮಾನ ಸನ್ಮಾನ, ಸಾಧನೆಗಳ ಬರಿ ಸಾಹಿತ್ಯ ಚರಿತ್ರೆಗೆ ಸೇರುವವರಲ್ಲ. ಅವರು ಮನುಷ್ಯ ಚರಿತ್ರೆ ಅಂದರೆ ಮಾನವೀಯ ಇತಿಹಾಸಕ್ಕೆ ಸೇರುವವರು ಅವರ ಸಾಹಿತ್ಯ ಸಂವಾದ, ಓದು ಅವರಿಗೆ ನಾವು ನೀಡುವ ನೈಜ ಶೃದ್ಧಾಂಜಲಿ ಅಶ್ರುತರ್ಪಣೆ ಎನ್ನುತ್ತಾರೆ.
ಜಯಂತ್ ಕಾಯ್ಕಿಣಿಯವರನ್ನು ಉತ್ತರಕನ್ನಡ ಜಿಲ್ಲೆಯ 18 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದ್ದಾಗ ಮಹಾಬಲ ಮೂರ್ತಿಕೂಡ್ಲಕೆರೆಯವರ ನಂಜಿನ ಹೇಳಿಕೆ ಖಂಡಿಸಿ, ನಾವು ನಮ್ಮ ಪತ್ರಿಕೆಯಲ್ಲಿ ಬರೆದೆವು.
ಆ ಬಗ್ಗೆ ಮುಂದೊಂದುದಿನ ಪ್ರತಿಕ್ರಿಯಿಸಿದ ಜಯಂತ್, ‘ಕನ್ನೇಶ್ ಎಲ್ಲರ ಎದುರೇ ಹೇಳ್ತೆ ಕೇಳು ‘ಕೆಲವರು ಸುದ್ದಿಯಾಗಲಿ ಅಂತಲೇ ಕಿತಾಪತಿ ಮಾಡ್ತಾರೆ. ಅವರಿಗೆ ಹೆಂಗಾದ್ರೂ ಪ್ರಚಾರ ಬೇಕು. ಈ ಪ್ರಮೋದ್ ಮುತಾಲಿಕ್‍ನಂಗೆ. ಆತ ಸುದ್ದಿ-ಪ್ರಚಾರಕ್ಕಾಗಿ ಏನಾದ್ರೂ ಮಾಡ್ತಾ’
ಎನ್ನುತ್ತಾ ‘ಅಂಥವರ ಬಗ್ಗೆ ಎಲ್ಲಾ ಬರ್ದು ನಿನ್ನ ಟೈಮು, ಶ್ರಮ, ನ್ಯೂಸ್‍ಪ್ರಿಂಟ್ ಎಲ್ಲಾ ಯಾಕ್ ಹಾಳ್‍ಮಾಡ್ಕೂಳ್ತೆ? ಎಂದು ಪ್ರೀತಿಯಿಂದ ಗದರಿದರು.
ಈ ಸೂಕ್ಷ್ಮ ಸೆಕ್ಯುರಿಟಿ ಇರುವ ನೌಕರರಿಗೆ, ಹಣ-ಅಧಿಕಾರ ಸಂಪಾದನೆನೇ ಧ್ಯೇಯ-ನಿಷ್ಠೆ-ಗುರಿ ಮಾಡಿಕೊಂಡವರಿಗೆ ಅರ್ಥವಾಗುತ್ತೊ? ಗೊತ್ತಿಲ.್ಲ ನಮ್ಮಂಥವರಿಗಂತೂ ಅವರ ಅಂತ:ಕರಣ ಆಪ್ತ-ಇಷ್ಟ ಆಗುತ್ತೆ.