

Sum ಸುಮ್ನೆ…
ಹಾಯ್, ಚಿನ್ನಮ್ಮಾ, ಹೇಗಿದ್ದೀಯಾ?
ಮಳೆಗಾಲದ ಅಬ್ಬರ ಸರಿದು ಬಿರುಬೇಸಿಗೆಯ ಬಿಸಿಲು ಸುರಿಯತೊಡಗಿದರೆ ಸರಿಯಾಗಿ ಆರು ವರ್ಷವಾಯಿತಲ್ಲವೇ ನನಗೆ ನೀನು ಪರಿಚಯವಾಗಿ?
ಈ ಆರು ವರ್ಷದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡ ಕಾಲ ಓಡುತ್ತಲೇ ಇದೆ, ಎಲ್ಲವನ್ನೂ ಬದಲಿಸುತ್ತಾ… ನಿನ್ನೆಡೆಗಿನ ನನ್ನ ಪ್ರೀತಿಯೊಂದನ್ನು ಬಿಟ್ಟು.
ಎಲ್ಲೋ ಅಲೆಯುತ್ತಾ ಶುದ್ಧ ಅಲೆಮಾರಿಯಂತಿದ್ದವನ ಮನಸ್ಸಲ್ಲಿ ಗೂಡು ಕಟ್ಟೋ ಹಂಬಲ ತುಂಬಿದವಳು ನೀನು. ಬರಡಾಗಿದ್ದ ನನ್ನೆದೆಯಲ್ಲಿ ಪ್ರೀತಿಯ ಸ್ವಾತಿಮಳೆ ಸುರಿಸಿದವಳು ನೀನು. ಇಗ ನೋಡು, ನನ್ನೆದೆಯಲ್ಲಿ ನಿನ್ನ ಪ್ರೀತಿಯ ಸಮೃದ್ಧ ಫಸಲು. ನಿನ್ನ ಜೊತೆಗೆ ಕಳೆದ ಪ್ರತಿ ಕ್ಷಣವೂ ಸಂಭ್ರಮ.
ಮೊದಲ ಮಳೆಯ ಮಣ್ಣ ಮಧುರ ಘಮ. ಮೂಗಿಗಡರಿದಾಗಲೆಲ್ಲಾ ನನ್ನ ತುಟಿಗಳು ಗುನುಗುವುದು ರಫಿಯ ಅದೇ-
‘ಬಹಾರೋ ಪೂಲ್ ಬರಸಾವೋ ಮೇರಾ ಮೆಹಬೂಬ್ ಆಯಾ ಹೈ’
ಎಂಬ ಹಚ್ಚ ಹಳೆಯ ಸಾಂಗು.
ಕಣ್ಣ ಮುಂದೆ ಬರುವುದು ಅದೇ ನೀಲಿ ಹೂವಿನ ಬಿಳಿಯ ಬಣ್ಣದ ಚೂಡಿದಾರಿನ ಹುಡುಗಿ. ನಿನ್ನ ಬಿಳಿ ವೇಲಿನ ಪ್ರಿಲ್ಲು, ಮುಗ್ಧ ನಗು, ಬೆರಗು ಹುಟ್ಟಿಸುವ ಕಂಗಳು. ಈ ಚಿತ್ರಣ ಎಂದಿಗೂ ಬದಲಾಗದೇನೋ….
ಈಗಲೂ ಸಿದ್ಧಾಪುರದಲ್ಲಿ ಮಳೆ ಬಂದಾಗ ನನ್ನ ಕಣ್ಣುಗಳು ಹುಡುಕುವುದು ದೂರದಲ್ಲೆಲ್ಲೊ ನನಗೆಂದೇ ಛತ್ರಿ ಹಿಡಿದುಕೊಂಡು ಬರುವ ನಿನ್ನನ್ನೇ….
ಕಿವಿಗಳು ಕಾತರಿಸುವುದು ‘ಒಂದು ಛತ್ರಿ ತರೋಕಾಗಲ್ವೇನೋ Stupid’ ಎಂಬ ನಿನ್ನ ಬೈಗುಳವನ್ನೇ…. ಹೌದೂ…ನೀನು ಹಾಗೆ ಬೈಯುತ್ತಿದ್ದದು ನನ್ನ ಹೈಟಿಗೆ ಛತ್ರಿ ಹಿಡಿಯಲಾಗದ ನಿನ್ನ ಕೈ ನೋವಿಗಾ? ಕುಳ್ಳಮ್ಮಾ!!
ಅದು ನಮ್ಮ ಕಾಲೇಜಿನ ಮೊದಲ ದಿನವಾ?
ಎಂ.ಜಿ.ಸಿ.ಯಲ್ಲಿ ಕಂಡು ಬಿಟ್ಟ ಕಣ್ಣು ಬಿಟ್ಟಂತೆ ಕಕ್ಕಾಬಿಕ್ಕಿಯಾಗಿ ನೋಡುತ್ತಾ ನಿಂತು ಬಿಟ್ಟಿದ್ದೆ ನಿನ್ನನ್ನು, ನಿನ್ನ ಬೆರಗು ಕಣ್ಣುಗಳನ್ನು. ಆಹಣತೆಗಣ್ಣಿನ ಹುಡುಗಿ ನನ್ನ ಕ್ಲಾಸ್‍ರೂಮಿಗೇ ಬಂದು, ನನ್ನಂತೆಯೇ ಕೊನೆಯಿಂದ 2ನೇ ಡೆಸ್ಕ್‍ನಲ್ಲಿ ಬಂದು ಕೂರುತ್ತಾಳೆ ಎಂದು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ.
ನಾನು ಪ್ರತಿ ಬಾರಿ ನೋಡಿದಾಗೆಲ್ಲಾ ನಿನ್ನ ಕಣ್ಣ ಕಾಡಿಗೆ ನನ್ನ ನೋಡಿ ಗೇಲಿ ಮಾಡಿ ನಕ್ಕಂತೆ ಅನ್ನಿಸುತ್ತಿತ್ತು.
ಅಂತದ್ದೇನಿತ್ತು ಹುಡುಗೀ………ಆ ನಿನ್ನ ಕಂಗಳಲ್ಲಿ??
ನಿನ್ನನ್ನು ಮಾತನಾಡಿಸಲೇ ಬರೋಬ್ಬರಿ ನಾಲ್ಕು ತಿಂಗಳು ತೆಗೆದು ಕೊಂಡ ನಾನು ಅದೊಂದು ದಿನ ನಿನಗೆ ಪ್ರಪೋಸ್ ಮಾಡಿಯೇ ಬಿಟ್ಟೆ.
ಅಬ್ಬಾ…, ಆದರೆ ನೀನು…..?
‘ಏಯ್ ಹೋಗೋ, ತಮಾಷೆ ಮಾಡಬೇಡ’ ಎಂದು ರಾತ್ರಿಯಿಡೀ ಕನ್ನಡಿಗೆ ಮುಖಕೊಟ್ಟು ಪ್ರಾಕ್ಟೀಸ್ ಮಾಡಿದ್ದ ನನ್ನ ಪ್ರಯತ್ನವೇ ವ್ಯರ್ಥವಾಗುವಂತೆ ನಕ್ಕುಬಿಟ್ಟೆಯಲ್ಲಾ… ……..ನಿನಗೆ ನಿಜಕ್ಕೂ ತಮಾಷೆ ಎನ್ನಿಸಿತ್ತೇನೇ?
ಮೊನ್ನೆ ನನ್ನ ಹಳೆಯದೊಂದು ಡೈರಿಯ ಪುಟ ತಿರುವುತ್ತಿರುವಾಗ ಅದರಲ್ಲಿ ಒಂದು ಪುಟ್ಟ ನವಿಲುಗರಿ ಹಾಗೂ ನೀನು ಒತ್ತಾಯದಿಂದ ನನ್ನ ಪರ್ಸಿನೊಳಗೆ ತುರುಕಿದ್ದ ‘ಮದರ್ ಮೇರಿ’ಯ ಫೋಟೋ ಸಿಕ್ಕು ಸುಮ್ಮನೇ ಹಳೆಯದೆಲ್ಲಾ ನೆನಪಾಯಿತು.
ಅದಕ್ಕೇ ಈ ಸಂಕಟದ ಪತ್ರ.
ಈಗೀಗ ಅನ್ನಿಸುತ್ತಿದೆ, ಒಂದು ಕಿವಿ ಗಡಚಿಟ್ಟುವ ರೊಯ್…. ಎಂದು ಅರಚುವ ಹಳೆಯದೊಂದು ಸುಜುಕಿ ಬೈಕಲ್ಲಿ ನಿನ್ನನ್ನು ಕೂರಿಸಿ ಕೊಂಡು, ದೂರಕ್ಕೆ ಎಲ್ಲಿಗಾದರೂ ಹಾರಿಸಿಕೊಂಡು ಹೋಗಿಬಿಡಬೇಕೆಂದು.
ಅನಿಸುತಿದೆ….ಯಾಕೋ ಇಂದು… ಕೊಲ್ಲು ಹುಡುಗಿ……..
ಒಮ್ಮೆ ಹಾಗೆ ಹೋಗೋಣವಾ? ಯಾರಿಗೂ ಹೇಳದೇ?
ಸೂರ್ಯ ಮುಳುಗೋ ಹೊತ್ತಲ್ಲಿ ನಮ್ಮೂರ ಹೊಳೆದಂಡೇಲಿ ಸಿಕ್ತೀಯಾ? ಇಬ್ಬರೂ ಕೈಕೈ ಹಿಡಿದು ತುಸುದೂರ ನಡೆಯೋಣ. ಅಂದೇ ನಿನಗೆ ಇನ್ನೊಮ್ಮೆ ‘ಐ ಲವ್ ಯು’ ಎಂದು ಬಿಡುತ್ತೇನೆ, ನಿನ್ನ ಮುಂದೆ ಮಂಡಿಯೂರಿ ಕುಳಿತು. ನೀರಿನ ಮೇಲೆ ಬೀಳುವ ಸಂಜೆ ನೇಸರನ ಕೆಂಬಣ್ಣ ಕೂಡಾ ತುಸು ನಾಚಿಕೊಳ್ಳಲಿ ನಿನ್ನೊಂದಿಗೆ…
ಒಲವಾ….ಮೊದಲ ಜಳಕ ಅದು ನೆನೆದರೆ ಪುಳಕ…
…ಅಲ್ಲೇ ಇರುವ ದಿಬ್ಬದ ಮೇಲೆ ಕುಳಿತು ಮಾತಾಡೋಣ,
ಕವಿತೆಯಾಗೋಣ….ನಾಡಿದ್ದು ನಿನ್ನ ಬರ್ತ್‍ಡೇಗೆ ಏನು ಗಿಪ್ಟ್ ಕೊಡಬೇಕೆಂದುತುಂಬಾನೇ ಯೋಚಿಸಿದೆ.
ನಿನಗೊಂದು ಚಂದದ ಸೀರೆಯನ್ನು ಕೊಡುವ ಹಂಬಲ ಹುಟ್ಟಿಕೊಂಡಿದೆ. ಮುದ್ದಿನ ತಂಗಿಯೂ ಅದಕ್ಕೆ ನೀರೆರೆದಿದ್ದಾಳೆ. ಆದರೆ ನಿನಗೇ ಗೊತ್ತು. ನನಗೊಂದು ಕರ್ಚೀಪುತರುವುದಿದ್ದರೂ ಅಮ್ಮನೆ ತರಬೇಕು. ಅಂತಹದ್ದರಲ್ಲಿ ನಾನು ನಿನಗೆ ಸೀರೆ ತರಲು ಹೋಗುವುದಾ!! ಅದೂ ಒಬ್ಬನೇ?! ಅಮ್ಮನನ್ನೇ ಕರೆದುಕೊಂಡು ಬಂದುಬಿಡಲಾ ಸೀರೆ ಅಂಗಡಿಗೆ?
ನಿನ್ನ ಮುದ್ದಿನ ಸೊಸೆಗೊಂದು ಚಂದದಸೀರೆತರೋಣ ಬಾ ಅಂತ! ಮುಂದಿನ ವರ್ಷ ಹಾಗೇ ಮಾಡುತ್ತೇನೆ ಆಯ್ತಾ?ಈವರ್ಷಕ್ಕಂತೂ ಅಷ್ಟುಧೈರ್ಯ ನನ್ನಲ್ಲಿಲ್ಲ.
ಹೇಳುವುದು ಮರೆತಿದ್ದೆ. ನಿನಗಿಷ್ಟ ಎಂದೇ ಪಾರಿಜಾತದ ಗಿಡವೊಂದನ್ನು ನೆಟ್ಟು ಬೆಳೆಸುತ್ತಿದ್ದೇನೆ.ಅದು ಹೂಬಿಡುವ ಮುನ್ನವೇ ಬಂದುಬಿಡು ಆಯ್ತಾ?
ಇವತ್ತಿಗಿಷ್ಟು ಸಾಕು, ಮಳೆಗಾಲ ಮುಗಿಯಲಿನ್ನೂ ಬಹಳಷ್ಟು ಸಮಯವಿದೆ. ಮನಸ್ಸಿನಲ್ಲಿ ನೆನಪುಗಳು ಮೆರವಣಿಗೆಹೊರಟಾಗಲೆಲ್ಲಾ ಹೀಗೇ ಬರೆಯುತ್ತಲೇ ಇರುವೆ.
ಭವಿಷ್ಯದ ಹೊಸ ಕನಸುಗಳು ಇಂದಿನಿಂದಲೇ ಆರಂಭವಾಗಲಿ…
-ಅವಿನಾಶ್ ಹೊಳೆಮರೂರ್
