

(ಸಿದ್ದಾಪುರ.ಜೂ,07-) ತಾಲೂಕಿನ ರೇಷ್ಮೆ ಇಲಾಖೆಯಲ್ಲಿ ಹಲಗೇರಿ ವಲಯದ ವಲಯಾಧಿಕಾರಿಯಾಗಿ ಸೇವೆಸಲ್ಲಿಸಿ ಮೇ 31ರಂದು ನಿವೃತ್ತಿಹೊಂದಿದ ಉಮೇಶ ಟಪಾಲರಿಗೆ ರೇಷ್ಮೆ ಬೆಳೆಗಾರರು(ರೈತರು) ಸನ್ಮಾನಿಸಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ ಅಪರೂಪದ ಕಾರ್ಯಕ್ರಮ ನಡೆದಿದೆ.
ಗುರುವಾರ ಇಲ್ಲಿಯ ಟಿ.ಎಂ.ಎಸ್. ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ರೇಷ್ಮೆಬೆಳೆ ಉತ್ತಮ ಪ್ರಗತಿ ಹೊಂದಲು ಶ್ರಮಿಸಿದ ಉಮೇಶ ಟಪಾಲರನ್ನು ಹಾಗೂ ಅವರ ಸಹಧರ್ಮಿಣಿ ವಿಜಯಾ ನಾಯ್ಕರನ್ನು ರೈತರು ಸ್ವಯಂ ಪ್ರೇರಿತರಾಗಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉಮೇಶ ಟಪಾಲ ಕಳೆದ 25ವರ್ಷಗಳಿಂದ ನಿರಂತರವಾಗಿ ರೈತರ ನಿಕಟಸಂಪರ್ಕದಲ್ಲಿದ್ದು ರೇಷ್ಮೆ ಬೆಳೆಗಾರರ ಉಧ್ಯಮ ಪ್ರಗತಿಹೊಂದಲು ಶ್ರಮಿಸಿದ್ದೇನೆ. ಪ್ರಾರಂಭದಲ್ಲಿ ಕಡಿಮೆ ಇದ್ದ ರೈತರ ಸಂಖ್ಯೆ ಹೆಚ್ಚಾಗುವಂತೆ, ರೇಷ್ಮೆಕೃಷಿ ಲಾಭದಾಯಕವಾಗುವಂತೆ ಸೇವೆ ಮಾಡಿದ್ದೇನೆ. ರೇಷ್ಮೆ ಕೃಷಿ ಕ್ಷೀಣವಾಗುತ್ತಿರುವ ಸಂದರ್ಭದಲ್ಲೂ ನಮ್ಮ ಭಾಗದಲ್ಲಿ ಹೊಸ ಹೊಸ ತಾಂತ್ರಿಕತೆಗಳನ್ನು ಅಳವಡಿಸಿ ಕಡಿಮೆ ಖರ್ಚಿನಲ್ಲಿ ರೈತರಿಗೆ ಅಧಿಕಲಾಭ ಬರುವಂತೆ ನೋಡಿಕೊಂಡಿದ್ದೇನೆ. ನಿವೃತ್ತಿಯ ನಂತರವೂ ಇನ್ನೆರಡು ವರ್ಷಗಳಕಾಲ ಪ್ರತಿಫಲಾಪೇಕ್ಷೆ ಇಲ್ಲದೆ ರೈತರಿಗೆ ನೆರವು ನೀಡಲು ಸಿದ್ದನಿದ್ದೇನೆ ಎಂದರು.
ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ರೇಷ್ಮೆ ಇಲಾಖೆಯ ಉಪನಿರ್ಧೇಶಕಿ ವಿ.ವರಲಕ್ಷ್ಮಿ , ನಿವೃತ್ತ ನೌಕರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್, ಪರಾಗ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಶಿವಳಮನೆ ಸಿಇಒ ಪ್ರಶಾಂತ ಜೋಷಿ ಉಮೇಶ ಟಪಾಲರ ಸೇವೆಯನ್ನು ಶ್ಲಾಘಿಸಿದರು.
ಕಮಲಾಕರ ನಾಯ್ಕ ಹೇರೂರು ವೇದಿಕೆಯಲ್ಲಿದ್ದರು. ಅಧ್ಯಕ್ಷತೆ ವಹಿಸಿದ್ದ ರೈತಸಂಘದ ಅಧ್ಯಕ್ಷ ವೀರಭದ್ರ ನಾಯ್ಕ ಮಾತನಾಡಿ ಉಮೇಶ ಟಪಾಲರು ಸೇವೆಯಲ್ಲಿದ್ದಾಗ ರಜೆಇದ್ದರೂ ಅದನ್ನು ಪಡೆಯದೆ ರೈತರೊಂದಿಗೆ ಸಹಕರಿಸಿದ್ದಾರೆ. ಇದು ಅವರ ಕರ್ತವ್ಯ ಪರತೆಯನ್ನು ಸೂಚಿಸುತ್ತದೆ ಎಂದರು. ಹೆಗ್ಗರಣಿ ರೇಷ್ಮೆ ವಲಯಾಧಿಕಾರಿ ಆರ್. ಟಿ. ಭಟ್ಟ ಸ್ವಾಗತಿಸಿ ನಿರೂಪಿಸಿದರು. ಪ್ರಭಾರ ತಾಲೂಕಾ ರೇಷ್ಮೆ ಅಧಿಕಾರಿ ಆರ್. ಎನ್. ಶಾನಭಾಗ ವಂದಿಸಿದರು.

