

……ಬುದ್ಧನಿಗೆ ಶರಣಾಗು
ಎಲೇ ಹುಲುಮಾನವ
ಯಾಕೆ ಅಂಜುತ್ತಿ ಮಾನ, ಪ್ರಾಣ, ತ್ಯಾಗ, ಭೋಗವೆಂದೆಲ್ಲಾ
ಅಸ್ತ್ರಗಳಿಲ್ಲದೇ, ಮೈಮೇಲೆ ಬಿದ್ದ ಇಲಿಯನ್ನೂ
ಹೊಡೆಯಲಾರದ ಅಸಾಯಕ ನೀನು,
ಯಮನೋವು ಕೊಟ್ಟು, ಆನೆಯಂಥ ಆನೆ,
ಸಿಂಹಗಳನ್ನೇ ಯಕಶ್ಚಿತ್ ಪ್ರಾಣಿ ಮಾಡುವ
ಸೊಳ್ಳೆ ಮುಂದೆ ನಿನ್ನದೆಂಥ ಶೌರ್ಯ?
ನಿನ್ನನ್ನು ಮುತ್ತುವ ನೊಣಕ್ಕೆ ಹೆದರುತ್ತಿ
ಸೊಳ್ಳೆ ಮುಂದೆ ನೀನು ನಿಷ್ಫ್ರಯೋಜಕ
ಇನ್ನು ಆನೆ, ಸಿಂಹ, ಹುಲಿ, ಚಿರತೆ
ಅವುಗಳ ಮುಂದೆ ನೀನ್ಯಾವ ಲೆಕ್ಕ?
ಕತ್ತಿ ಸಿಕ್ಕೊಡನೆ ಕಚಕಚನೆ ಕೊಚ್ಚುವ ಹೇಡಿವೀರ ನೀನು
ನಿನ್ನ ಅಮಾನುಷ ಕತ್ತಿಗೆ ಬಲಿಯಾದ ಮರಗಳೆಷ್ಟು
ಲೆಕ್ಕ ಉಂಟೇನು? ಮನುಷ್ಯರೆಷ್ಟು?
ಅಂಕುಶ, ಲಗಾಮು ಸಿಕ್ಕವೆಂದು ಆನೆ, ಕುದುರೆಗಳಿಗೆ
ಕೊಟ್ಟ ಹಿಂಸೆಯೇನು ಕಡಿಮೆಯೇ?
ನಿನ್ನ ಸ್ವಾರ್ಥಕ್ಕೆ ಅವುಗಳ ಮೇಲೆ ಕೂತು
ಸವಾರಿ ಮಾಡಿದೆ
ಆನೆ, ಒಂಟೆ, ಕುದುರೆ, ಕತ್ತೆ ಎಷ್ಟೆಲ್ಲಾ ಪ್ರಾಣಿಗಳು
ಗಡಿದಾಟಿದವು, ಕಾದಾಡಿದವು, ಸಾಮ್ರಾಜ್ಯ ಗೆದ್ದವು
ಅವುಗಳ ಶ್ರಮದ ಗೆಲುವಿನ ಕಿರೀಟ ಹೊತ್ತ ದ್ರೋಹಿ ನೀನು.
ಎತ್ತು ಆಕಳನ್ನು ಬಳಸಿದೆ
ಅವು ಪವಿತ್ರವೆಂಬ ಸುಳ್ಳು ಹೇಳಿದೆ, ಪೂಜೆ ಮಾಡಿದೆ
ದುಡಿಮೆ, ಹಾಲು, ಗಂಜಲ, ಗೊಬ್ಬರ, ವ್ಯಾಪಾರ, ವಹಿವಾಟು
ಎಲ್ಲದಕ್ಕೂ ಅವನ್ನೇ ಬಳಸಿಕೊಂಡೆ!
ಭಾರತ ಮಾತಾಕಿ ಜೈ ಎಂದೆ
ತಾಯ್ನಾಡಿನ ಮೊಲೆಯ ಹಾಲು ನೀರನ್ನೂ ಮಾರಿಕೊಂಡೆ
ಸದಾ ವತ್ಸಲೇ ಎನ್ನುತ್ತಲೇ ಅದಿರೆಂಬ ಕನ್ನಡಮ್ಮನ
ಹೊಟ್ಟೆಯನ್ನೇ ಬಗೆದೆ.
ಅಬ್ ಕೀ ಬಾರ್ ಎನ್ನುತ್ತಲೇ ಸಿಂಹಾಸನ ಏರಿದೆ
ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ ನಿಲ್ಲಿಸಲಾಯಿತೇನೋ ನಿನಗೆ?
ಬೇಲಿ ಹಾಕಿಕೊಂಡೆ, ಗಡಿ ಮಾಡಿಕೊಂಡೆ, ಬೇಡಿ ಹಾಕಿಕೊಂಡೆ
ಹಂದಿ ಹಿಡಿಯಲಾಯಿತೆ ನಿನ್ನಿಂದ…?
ಸುಂದರ ಹೆಣ್ಣು, ಬೊಗಳುವ ನಾಯಿ, ಫ್ಯಾನು
ಎ.ಸಿ, ಕಾರು-ಬಾರು, ಎಲ್ಲದಕ್ಕೂ ಮಾಲಿಕ ನೀನು
ನಿನ್ನಿಂದ ಪ್ರಳಯ, ಸುನಾಮಿ, ರೋಗ, ರುಜಿನ
ತಡೆಯುವುದು ಹಾಗಿರಲಿ….
ಹೆತ್ತ ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕಟ್ಟುವ
ನೀಚ ನೀನು.
ತಾಯಿ, ಅಕ್ಕ-ತಂಗಿ ಎಲ್ಲವೂ
ನಿನಗೆ ಮಾರಾಟದ ಸರಕು,
ನಿಲ್ಲಿಸು ನಿನ್ನ ವಕ್ರತನ
ಬುದ್ಧನಿಗೆ ಶರಣಾಗು, ನಡುರಾತ್ರಿ ಎದ್ದುಬಿಡು
ಓಡಿಹೋಗು, ಆಸೆಯೆಂಬ ಮಾಯೆ ಬಿಟ್ಟು ತೊಲಗು
ಬುದ್ಧಂ ಶರಣಂ ಗಚ್ಚಾಮಿ ಎನ್ನು,
-ಸಮಾಜಮುಖಿ ಕನ್ನೇಶ್ ಕೋಲಶಿರ್ಸಿ, ಸಿದ್ಧಾಪುರ (ಉ.ಕ) (9740598884)

