
…………..ಈ ಮೆಲೋಡ್ರಾಮಾ ನೋಡಿದ ನಾರಾಯಣ, ಚಂದ್ರುಗಳೆಲ್ಲಾ ನಗಲೂ ಆಗದೆ, ಅಳಲೂ ಸಾಧ್ಯವಾಗದೆ ಸಹಕರಿಸಿದ್ದಾರೆ.
ಬಹುಶಃ ಈ ಘಟನೆಯ ಸಂದರ್ಭದಲ್ಲೇ ಸುನೀಲ್ ನಾಯಕ್ ಸರ್, ಪ್ರತಿದಿನ ಒಬ್ಬೊಬ್ಬರನ್ನೇ ಕರೆದೊಯ್ದು 14-15 ಬಾರಿ ರವಿಚಂದ್ರನ್‍ರ ‘ಚಿಕ್ಕೆಜಮಾನ್ರು’ ರಿಮೇಕ್ ಕನ್ನಡ ಸಿನೆಮಾ ನೋಡಿದ್ದಾರೆ.
ಈ ಚಿತ್ರ ವೀಕ್ಷಣೆ ವಿಷಯ ಆಗ ಟಾಕ್ ಆಫ್ ದಿ ಹಾಸ್ಟೇಲ್ ಆಗಿತ್ತು.
ಹಾಸ್ಟೇಲ್‍ನ ರೂಮುಗಳಲ್ಲಿ ಒಂದೆಡೆ ಮೂರು ಗೋಡೆಯ ಸಿಮೆಂಟ್ ರ್ಯಾ ಕ್ ಕಂಪಾರ್ಟ್‍ಮೆಂಟ್‍ಗಳಾದರೆ ಐದು ಜನರಿಗೆ ಎರಡು ಕಾಟು! (ಕ್ವಾಟ್)ಗಳು! ಅವುಗಳಿಗೆ ತಾಕಿಕೊಂಡಂತೆ ಮೊದಲು ಹಗ್ಗದ ಅಥವಾ ಕಬ್ಬಿಣದ ನ್ಯಾಲೆಗಳು,
ಮೊದಲ ನ್ಯಾಲೆಯಲ್ಲಿ ಅಂಗಿಗಳನ್ನು ನೇತುಹಾಕಿದ ಹ್ಯಾಂಗ ರ್ ಗಳ ಸಾಲಾದರೆ, ಎರಡನೆಯ ನ್ಯಾಲೆ ಹ್ಯಾಂಗರ್ ರಹಿತ ಅಂಗಿ-ಬಟ್ಟೆಗಳ ನ್ಯಾಲೆ. ಮೂರನೇ ನ್ಯಾಲೆಯಲ್ಲಿ ಕಡ್ಡಾಯವಾಗಿ ಎನ್ನುವಂತೆ ಟಾವೆಲ್‍ಗಳ ಸರದಿ, ನಾಲ್ಕನೇ ನ್ಯಾಲೆ ಅಥವಾ ಕೆಲವೊಮ್ಮೆ ಕೊನೇ ನ್ಯಾಲೆಯಲ್ಲಿ ನಿಕ್ಕ ರ್ ಗಳ ಸಾಲು, ಈ ಕೊನೆಯ ನ್ಯಾಲೆಯ ನಿಕ್ಕರ್ ಜೋಡಣೆ ಕಂಪಾರ್ಟ್‍ಮೆಂಟ್‍ಗೆ ‘ಜೇನುಗೂಡು’! ಎಂದು ಹೆಸರು.
ಈ ಜೇನುಗೂಡುಗಳ ಸಾಲಿನಲ್ಲಿ ಎಲ್ಲರೂ ತಮ್ಮ 2+1 ನಿಕ್ಕರುಗಳನ್ನು ಒಣಗಿಸುವುದು. 21ನೇ ರೂಮಿನಲ್ಲಿ ಅನಧೀಕೃತವಾಗಿ ಸುನೀಲ್ ಸರ್ ರೂಮ್ ಪಾರ್ಟನರ್ ಆಗಿದ್ದ ಕೋಣೆಯಲ್ಲಿ ಒಂದೊಳ್ಳೆದಿನ ವಿಚಿತ್ರ ಪ್ರಸಂಗ ಒಂದು ನಡೆದು ಹೋಯಿತು.
ಎಲ್ಲರಂತೆ ಸುನೀಲ್ ಸರ್ ಕೂಡಾ ತಮ್ಮ ಜೇನುಗೂಡನ್ನು ಕೊನೆಯ ನ್ಯಾಲೆಯಲ್ಲಿ ತೂಗುಹಾಕಿದ್ದರು.
ಬಣ್ಣ, ಗಾತ್ರ, ವಿಭಿನ್ನ ವಿಶೇಷಗಳ ನಿಕ್ಕರ್ ಕಂಪಾರ್ಟ್‍ಮೆಂಟ್‍ನಲ್ಲಿದ್ದ ಸುನೀಲ್‍ಸರ್‍ರ ಜೇನುಗೂಡು ಗಾಯಬ್,
ಸುನೀಲ್ ನಾಯಕ ಒಬ್ಬೊಬ್ಬರನ್ನೇ ಕರೆದು ಪರೀಕ್ಷಿಸಿದ್ದಾರೆ. ಆದರೆ, ಸುನೀಲ್‍ರ ಜೇನುಗೂಡು ಯಾರು ಹಾಕಿಕೊಂಡಿದ್ದಾರೆ? ಎಂದು ಗೊತ್ತಾಗಲೇ ಇಲ್ಲ.
ಆ ನಂತರ ತಿಳಿದ ರಹಸ್ಯವೆಂದರೆ, ಸುನೀಲ್ ನಾಯಕ ವಿದ್ಯಾರ್ಥಿಯೊಬ್ಬನ ನಿಕ್ಕರ್ ಹಾಕಿಕೊಂಡು ಗಲಿಬಿಲಿ ಉಂಟು ಮಾಡಿದ್ದರು. ಈ ವಿಚಾರ ಅಷ್ಟಾಗಿ ತಿಳಿಯದ ಒಂದೆರಡು ಜನರಿಗೆ ಸುನೀಲ್ ನಾಯಕ ಕಾಲೇಜ್‍ನಲ್ಲಿ ಕರೆದು ‘ಏ ಬೋಳಿ ಮಕ್ಕಳಾ ನಿಮ್ಮ ನಿಕ್ಕರ್ ನಾನೇ ಹಾಕಿಕೊಂಡು ಬಂದಿದ್ದೇನೆಂದು ಸಮಾಚಾರ ಲೀಕ್ ಮಾಡಿದರೆ ನಿಮ್ಮೆಲ್ಲರನ್ನು ಕೊಲೆ ಮಾಡುತ್ತೇನೆ!’ ಎಂದು ಬೆದರಿಕೆ ಹಾಕಿದ್ದರಂತೆ!
ಈ ಬಗ್ಗೆ ಸುನೀಲ್ ಸರ್‍ರ ರೂಂಮೇಟ್‍ಗಳ್ಯಾರೂ ವಿಷಯ ಬಿಟ್ಟುಕೊಡಲಿಲ್ಲ. ಆದರೆ, ಸುನೀಲ್ ನಾಯಕ ಮಾತ್ರ ಈ ವಿಚಾರವನ್ನು ಅನೇಕ ವಿದ್ಯಾರ್ಥಿಗಳಿಗೆ ಹೇಳಿ ಸ್ವಯಂ ಮುಖಭಂಗಕ್ಕೊಳಗಾಗಿದ್ದರು.
ಎಂ.ಎ.ಬಂಗಾರದ ಪದಕ ವಿಜೇತ ಸುನೀಲ್ ಸರ್ ತಾನು ಕೆ.ಎ.ಎಸ್.ಗೆ ಓದುತ್ತಿರುವುದಾಗಿ ಹೇಳುತ್ತಾ ಒಂದೇ ಪ್ರಶ್ನೆಗೆ ಕನಿಷ್ಠ 50ರಿಂದ100 ಪಾಂಯ್ಟ್‍ಗಳ ಉತ್ತರ ಬರೆಸುತ್ತಿದ್ದರು. ಅವರ ರಭಸ, ವೇಗಕ್ಕೆಲ್ಲಾ ಹೊಂದಿಕೊಳ್ಳದ ನಾವು ಒಂದೊಂದು ಪಾಂಯ್ಟ್ ಬಿಟ್ಟು ಬರೆಯುತ್ತಾ ಸಾಗಿದರೂ ಕನಿಷ್ಠ 50 ಪಾಂಯ್ಟ್ ಬರೆದಾಗಿರುತ್ತಿದ್ದವು.
ಈ ತೊಂದರೆ, ರಗಳೆಗಳಿಗೆ ಅಂಜಿ ನಾನಂತೂ ಪಿ.ಯು.ಸಿ. ನಂತರ ಡಿಗ್ರಿಯಲ್ಲಿ ಎಕನಾಮಿಕ್ಸ್ ಗೆ ತೀಲಾಂಜಲಿ ಕೊಟ್ಟು ಬಿಟ್ಟೆ. ಇದೇ ಅವಧಿಯಲ್ಲಿ ನಮಗೆ ಸಾಥಿಯಾದವರು ಚಿಕ್ಕಮಗಳೂರಿನ ಸುರೇಶ್, ಹಾನ್‍ಗಲ್‍ನ ರವೀಂದ್ರ ಮತ್ತು ಕಂಬನಿ ಅಲಿಯಾಸ್ ಚಂದ್ರಪ್ಪ ಲಮಾಣಿ.(ಈಗಿನ ಯೋಗ ಚಂದ್ರು)
ಈ ಮೂವರು ಲಮಾಣಿಗಳು. ಇವರಲ್ಲಿ ಚಂದ್ರು ಪಿ.ಯು. ನಂತರ ನಮಗೆ ಕ್ಲಾಸ್‍ಮೇಟಾದವನು. ರವೀಂದ್ರ ಮತ್ತು ಸುರೇಶ್ ನಮ್ಮ ಪಿ.ಯು. ಕ್ಲಾಸ್+ಹಾಸ್ಟೇಲ್‍ಮೇಟ್‍ಗಳು. ಇವರಲ್ಲಿ ರವೀಂದ್ರ ತಿಂಗಳಲ್ಲಿ ಒಂದುವಾರ ಗೌಂಡಿ ಕೆಲಸ ಮಾಡಿಕೊಂಡು ಸಂಪಾದಿಸಿಕೊಂಡು ಬಂದು ಧೂಮ್ ಮಚಾಯಿಸುತ್ತಿದ್ದ.
ಸುರೇಶ್ ಮಿ. ಡಿಫರೆಂಟ್ ಎಂದು ತೋರಿಸಿಕೊಳ್ಳಲು ಹೆಣಗುತ್ತಿದ್ದ. ಈ ಸುರೇಶ್‍ನ ನೇಚರ್, ಸ್ಟೈಲ್‍ಗಳು ವಿಭಿನ್ನ ವಿಚಿತ್ರವಾಗಿದ್ದವು. ಈತನ ಅಣ್ಣ ಸರ್ಕಾರಿನೌಕರಿಯಲ್ಲಿದ್ದು ಈತನಿಗೆ ನೆರವಾಗುತ್ತಿದ್ದುದರಿಂದ ಈತ ತುಸು ಅಹಂಕಾರಿಯಂತೆಯೂ ಕಾಣುತಿದ್ದ. ಇವನನ್ನು ಕಂಡರೆ ನಮ್ಮ ಹಿರಿಯ ಹಾಸ್ಟೇಲ್‍ಮೇಟ್‍ಗಳಿಗೆ ಒಂಥರಾ ರೇಜಿಗೆ. ಮೊದಲ ವರ್ಷದ ಸಂಕ್ರಾಂತಿವೇಳೆ ಈ ಸುರೇಶ್‍ನಿಗೆ ಹುಡುಗಿಯೊಬ್ಬಳ ಹೆಸರಿನಿಂದ ಒಂದು ಶುಭಾಷಯ ಪತ್ರ ಬಂದಿತ್ತು.!
ಆ ಶುಭಾಷಯ ಪತ್ರವನ್ನು ಥರಾವರಿ ಪರೀಕ್ಷಿಸಿದ ಸುರೇಶ್ ತನಗೆ ಶುಭಾಷಯ ಕೋರಿದ ಚೆಲುವೆ ಯಾರಿರಬಹುದೆಂದು ದಿನವಿಡೀ ಚಿಂತಿಸಿ ವಿಚಿತ್ರ ಸಂತೋಷ, ಸಂಭ್ರಮಪಟ್ಟಿದ್ದ.
ಕೊನೆಗೆ ಚರ್ಚೆಯಾಗಿ ಹೊರಬಂದ ಸತ್ಯವೆಂದರೆ…….
19ನೇ ರೂಮಿನಲ್ಲಿದ್ದ ಕೆಲವು ಹಿರಿಕಿರಿಯ ಸ್ನೇಹಿತರು ಸುರೇಶ್‍ನನ್ನು ಮಾಮಾ ಮಾಡಲು ವಿಚಿತ್ರ ಗ್ರೀಟಿಂಗ್ಸ್ ಒಂದನ್ನು ಖರೀದಿಸಿ, ಹುಡುಗಿಯ ಫ್ರಾಮ್ ವಿಳಾಸ ಬರೆದು ರವಾನಿಸಿದ್ದ ರಹಸ್ಯ ಬಹಿರಂಗವಾಯಿತು. ವಿಪರ್ಯಾಸವೆಂದರೆ, ಸುರೇಶ ನಮ್ಮ ರೂಂಮೇಟ್‍ಗಳನ್ನು ವಿಶೇಷವಾಗಿ ಗಣೇಶ ಮತ್ತು ನನ್ನನ್ನು ಈ ಮಹಾ ಅಪರಾಧಕ್ಕೆ ಹೊಣೆಗಾರರನ್ನಾಗಿ ಮಾಡಿ ನಮ್ಮಿಬ್ಬರಿಗೂ ತಲಾ ಎರಡೆರಡು ಏಟು ಬಿಗಿದು ತನ್ನ ಸಿಟ್ಟು ಹೊರಹಾಕಿದ್ದ.
ಶುಭಾಷಯ ಪತ್ರ ಪಡೆದು ವಿಚಿತ್ರ ಸಂಕಟಕ್ಕೊಳಗಾಗಿದ್ದ ಸುರೇಶ್‍ನ ಸ್ಥಿತಿಯೊಂದಿಗೆ ವಿನಾಕಾರಣ ಹೊಡೆಸಿಕೊಂಡ ನಮ್ಮ ಅವಸ್ಥೆ ಒಂಥರಾ ಸಂಕಟದ ಮೋಜಾಗಿತ್ತು!
ಒಟ್ಟೂ ಪಿ.ಯು.ಸಿ. ಮೊದಲ ವರ್ಷ ಪೂರೈಸುವಾಗ ನಮ್ಮ ಬದುಕು ಕಭಿ ಖುಷಿ ಕಭಿ ಗಮ್‍ನಂತಾಗಿತ್ತು.
ನಾವು ಮೊದಲ ಪಿ.ಯು. ನಲ್ಲಿದ್ದಾಗ ಸಂತೊಳ್ಳಿಯ ಸಿ.ಜೆ. ಗೌಡರ್, ಮುಂಡಗೋಡಿನ ಕೃಷ್ಣ ನಿಂಬಕ್ಕನವರ್, ಎಮ್.ಎಚ್. ನಾಯ್ಕ, ಗಣಪತಿ ಕೆಳಗಿನಮನೆ ಸೇರಿದಂತೆ ಕೆಲವರು ನಮ್ಮ ಹಾಸ್ಟೇಲ್‍ನ ಹಿರಿಯ ವಿದ್ಯಾರ್ಥಿಗಳಾಗಿದ್ದರು.
ಸಿ.ಜೆ.ಗೌಡರ್‍ರಿಗೆ ಆಗ ಚುನಾವಣಾ ಖಯಾಲಿ ಇತ್ತು. ಅಂದಿನ ರವಿ ಶಿರೋಡ್ಕರ್‍ರ ಕಾಲೇಜ್ ಕ್ಯಾಬಿನೇಟ್‍ನಲ್ಲಿ ಸಿ.ಜೆ. ಕ್ಯಾಬಿನೇಟ್ ಸಚಿವರಾಗಿದ್ದರು. ಅವರ ಕ್ಲಾಸಿನ ಕೆಲವು ವಿಚಿತ್ರ ಹುಡುಗರನ್ನು ಚಿಂಪಾಂಜಿ, ಲೀಫಾಕ್ ಎಂದು ಕರೆದರೆ ಕೆಲವು ವಿಚಿತ್ರ ನಡವಳಿಕೆಯ ಹುಡುಗಿಯರನ್ನು ‘ವಾಸ್’ ಎಂದು ಛೇಡಿಸುತ್ತಿದ್ದರು.ಇವರ ಈ ಲೇವಡಿತನ ಬಹುತೇಕ ತಮಾಸೆ, ಕಾಲೆಳೆಯುವುದಕ್ಕೆ ಸೀಮತವಾಗಿತ್ತು.
ಸಿ.ಜೆ. ಕಾಲೇಜಿನಲ್ಲಿ ಸೀರಿಯಸ್ ಆಗಿದ್ದು ಹಾಸ್ಟೇಲ್ ತಂಡದ ಮುಖಂಡನಂತಿದ್ದರು. ಸಿ.ಜೆ.ಯೊಂದಿಗೆ ಕೃಷ್ಣ, ಗಣಪತಿ ಸೇರಿದಂತೆ ಕೆಲವರಿರುತ್ತಿದ್ದರು. ಸಿ.ಜೆ.ಯೊಂದಿಗೆ ಅವರ ಸ್ನೇಹಿತರೂ ನಮ್ಮ ಸೀನಿಯರ್‍ಗಳಾಗಿದ್ದ ಕೆಲವರೆಲ್ಲಾ ಸೇರಿ ಕನ್ನಡದಲ್ಲಿ ಮಾತನಾಡುವ ಕನ್ನಡ ಭಾಷಣ, ಕನ್ನಡ ಗೀತೆ ಹಾಡುವ ಮೂಲಕ ತಮ್ಮ ಕನ್ನಡಾಭಿಮಾನ ಮೆರೆಯುತ್ತಿದ್ದರು.
ಆ ಅವಧಿಯಲ್ಲಿ ಕಾರವಾರದ ಸ್ಥಳೀಯ ವಿದ್ಯಾರ್ಥಿಗಳಿಗೆ ಸಹಕರಿಸುವ ಹಿರಿಯ ಉಪನ್ಯಾಸಕರ ತಂಡ ಒಂದಾದರೆ, ನಮ್ಮಂಥ ಅನ್ಯಭಾಗದ ಅನ್ಯಭಾಷೆಯ ಹತಭಾಗ್ಯ ವಿದ್ಯಾರ್ಥಿಗಳ ತಂಡಕ್ಕೆ ಹೊಸದಾಗಿ ಆಯ್ಕೆಯಾಗಿ ಬಂದ ಉಪನ್ಯಾಸಕರು, ಜೊತೆಗೆ ಅಂಕೋಲಾ ಮೂಲದ ಕೆಲವು ಕನ್ನಡಾಭಿಮಾನಿ ಉಪನ್ಯಾಸಕರ ನೆರವು, ಪ್ರೋತ್ಸಾಹಗಳಿರುತ್ತಿದ್ದವು.
ನನ್ನ ಗಮನಕ್ಕೆ ಬಂದಂತೆ ಅಂದು ಹಿರಿಯ ಉಪನ್ಯಾಸಕರಾಗಿದ್ದ ಎ.ಜಿ. ಗಾಂವಕರ್, ವಿ.ಎನ್. ನಾಯಕ ಸೇರಿದಂತೆ ಕೆಲವು ಉಪನ್ಯಾಸಕರು ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡುತಿದ್ದರು.
ಆಗಾಗ ಎ.ಜೆ. ಗಾಂವಕರ್ ಮನೆಗೆ ಹೋಗಿ ಬರುವ ಅಭ್ಯಾಸ ಇಟ್ಟುಕೊಂಡಿದ್ದ ಕೆಲವರಲ್ಲಿ ಮಾರುತಿ ಪ್ರವೇಶಾತಿಯ ವೇಳೆ ಹಾಗೂ ಮೊದಲ ಪಿ.ಯು. ದ್ವಿತೀಯ ಪಿ.ಯು. ಸಮಯದಲ್ಲೆಲ್ಲಾ ಗಾಂಗಕರ್ ಸರ್ ಸಹಕರಿಸುತ್ತಿರುವ ಬಗ್ಗೆ ಮಾರುತಿ ಆಗಾಗ ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದ.
ಈ ಸಮಯಕ್ಕಿಂತ ತುಸು ಮೊದಲು ಸಿದ್ಧಾಪುರದ ಮಹಾಲಿಂಗಣ್ಣ, ಗೋಕಾಕ್‍ನ ಪರಶುರಾಮ ಸೇರಿದಂತೆ ಕೆಲವು ಹಿರಿಯ ಸ್ನೇಹಿತರೆಲ್ಲಾ ಓದು ಮುಗಿಸಿ ಕಾರವಾರದಲ್ಲೇ ಅಧ್ಯಯನ, ವಿದ್ಯಾರ್ಥಿ ಸಂಘಟನೆ ಅರೆಕಾಲಿಕ ಖಾಸಗಿ ಉದ್ಯೋಗಗಳನ್ನೆಲ್ಲಾ ಮಾಡಿಕೊಂಡಿದ್ದರು.
ಇವರೆಲ್ಲರ ಸ್ನೇಹ, ಸಾಂಗತ್ಯಗಳ ಲಾಭವೆಂದರೆ, ಕಲಿಕೆಯ ಸಮಯದಲ್ಲಿ ಅನಿವಾರ್ಯವಾಗಿ ಪಾರ್ಟ್‍ಟೈಮ್ ಕೆಲಸ ಮಾಡಬೇಕಾದ ಅನಿವಾರ್ಯತೆಯ ಸಂದರ್ಭದಲ್ಲಿ ಕಾರವಾರದ ಉದ್ಯಮಿಗಳು, ಈ ಹಿರಿಯ ಸ್ನೇಹಿತರೆಲ್ಲಾ ಸೇರಿ ‘ನೆರವು’ ಸಹಾಯ ಮಾಡುತ್ತಿದ್ದರು. ಈ ಸಮಯದಲ್ಲಿ ಮಂಜಣ್ಣ ಪೈ ಕುಟುಂಬದ ಹೋಟೆಲ್‍ನಲ್ಲಿ ಕೆಲಸಮಾಡುತ್ತಿದ್ದ ಕೆಲವರು ಕಾರವಾರದ ಹೋಟೆಲ್‍ಗಳು, ಬಾರ್, ವೈನ್‍ಶಾಪ್ ಸೇರಿದಂತೆ ಅನೇಕಕಡೆ ಕಲಿಕೆಯ ಅವಧಿಯಲ್ಲೇ ದುಡಿಮೆ ಮಾಡುತ್ತಿದ್ದರು.
ಆ ಸಮಯದಲ್ಲಿ ಪೂರ್ಣಿಮಾ ಹೋಟೆಲ್‍ಗೆ ತಾಕಿಕೊಂಡ ‘ಭಾರತ್ ಕೆಫೆ’ ಕಾಜುಭಾಗ ರಸ್ತೆಯ ‘ಗೋವರ್ಧನ್’ ಹೋಟೆಲ್‍ಗಳಿಂದ ನಾವು 2ರಿಂದ5 ರೂಪಾಯಿ ವೆಚ್ಚದಲ್ಲಿ ಊಟಕ್ಕೆ ಸಾಂಬಾರ್, ಮೀನು ಫ್ರೈ ತರುತ್ತಿದ್ದೆವು. ಈ ಸಮಯದಲ್ಲೆಲ್ಲಾ ನಮ್ಮ ಅಕಾಲದ ಹಸಿವನ್ನು ತಣಿಸುತಿದ್ದುದು ಕಾಮತ್ ಬ್ರದರ್ಸ್ ಗೂಡು ಅಂಗಡಿ.
ಆ ಗೂಡು ಅಂಗಡಿಯ ಜವಾಬ್ಧಾರಿಯನ್ನು ಕಾಮತ್‍ಗಳ ಹಿರಿಯ ಅಣ್ಣ ಅವನ ತಂಗಿ ಜೊತೆಗೆ ಕಿರಿಯ ಮೂಕ ತಮ್ಮ ನೋಡಿಕೊಳ್ಳುತ್ತಿದ್ದರು. ಕಾಮತ್ ಅಣ್ಣ ಅಥವಾ ಅಕ್ಕ ಅಂಗಡಿಯ ನಡುವೆ ಕೂತೋ, ನಿಂತೋ ತಮ್ಮನಿಗೆ ಸನ್ನೆ ಮಾಡಿದರೆ ಆ ಮೂಕ ಮಹಾಷಯ ಕರಾರುವಕ್ಕಾಗಿ ಈ ಅಣ್ಣ, ಅಕ್ಕ ಹೇಳಿದ ವಸ್ತುಗಳನ್ನೇ ತಂದುಕೊಟ್ಟು ಗಿರಾಕಿಗಳ ದಿಗ್ಭ್ರಮೆಗೆ ಕಾರಣನಾಗುತ್ತಿದ್ದ.
ಈ ಕಾಮತ್ ಅಣ್ಣ-ತಂಗಿಯರು ಪರಸಪ್ಪ ಅಲಿಯಾಸ್ ಪರಶುರಾಮ ಎಂಬ ನಮ್ಮ ಹಿರಿಯ ಸ್ನೇಹಿತನ ನಿಯತ್ತು, ಕ್ರಿಯಾಶೀಲತೆಯನ್ನು ಹೊಗಳುತ್ತಿದ್ದರು.
ನಮ್ಮ ಆಹಾರ, ಆಹಾರೇತರ ಅಗತ್ಯಗಳಿಗಾಗಿ ಅವಲಂಬಿಸಿದ್ದ ಕಾಮತ್‍ರ ಅಂಗಡಿಯನ್ನು ಅದ್ಯಾವುದೋ ಗಳಿಗೆಯಲ್ಲಿ ನಾರಾಯಣ ಹೆಗಡೆ ‘ನಾನ್ ಟಾಕಿಂಗ್ ಬ್ರದರ್ಸ್’ ಅಂಗಡಿ ಎಂದು ನಾಮಕರಣ ಮಾಡಿದ್ದ.
ಈ ನಾಮಕರಣದ ನಂತರ ನಮ್ಮ ಠೋಳಿಯ ಹುಡುಗರೆಲ್ಲಾ ಕಾಮತ್ ಸಹೋದರರ ಅಂಗಡಿಯನ್ನು ನಾನ್ ಟಾಕಿಂಗ್ ಬ್ರದರ್ಸ್ ಅಂಗಡಿ ಎಂದೇ ಕರೆಯುತ್ತಿದ್ದೆವು. ಈ ಅಂಗಡಿಗೆ ಅಕಾಲದ ಹಸಿವೆಯ ನಮ್ಮಂಥ ಹತಭಾಗ್ಯರು,ಅಲ್ಲಿಯ ಚಿಂಪಾಜಿ,ಲೀಫಾಕ್ ಗಳೂ ಸೇರಿದ ಮೋಜುಗಾರ ಹುಡುಗರೂ ಒಟ್ಟೊಟ್ಟಿಗೇ ಸೇರುತಿದ್ದೆವು.
(ಹಾಸ್ಟೆಲ್ ಲೈಫ್ ನಿಂದ)
