
ನನ್ನವ್ವ-ನನ್ನಮಗಳು
ಧೋಗುಡುವ ಶ್ರಾವಣದ ಮಳೆ
ಮನೆ ಮುಂದಿನ ಮೊಣಕಾಲಿನ ನೀರಲಿ
ಕುಪ್ಪೆ ಹಾರುತ್ತಿರುವ ಮಗಳು ಕಾಲು ಕೆಸರು
ಚುರುಕು ಕಾಲಿನ ಮಗಳ ಜತೆ ನೆನಪಾಗಿ
ಬಂದವಳು ಅಮ್ಮ
ಹೀಗೆಯೇ ಚುರುಕು ಆಕೆ
ಕಂಬಳಿಕೊಪ್ಪೆಯ ಹೊದ್ದು ಮೊಣಕಾಲಿನ ಮೇಲೆಕಟ್ಟಿದ ಸೀರೆ
ಕೆಸರಿನಲ್ಲಿ ಎತ್ತಲಾಗದ ಕಾಲನ್ನು ಎತ್ತಿಡುತ್ತ
ನೀರನ್ನು ಚಿಮ್ಮುತ್ತ ಸಸಿ ನೆಡುತ್ತ
ನಡೆಯುವ ನನ್ನವ್ವ ಕುಂಟೆಬಿಲ್ಲೆ ಚಿಮ್ಮವ ಬಾಲೆಯಾಗುತ್ತಾಳೆ.
ಇವಳ ಚುರುಕು ನೋಡಿ ಪುಟಬಾಲ್
ಆಟಗಾರರೂ ನಾಚಬೇಕು
ನನ್ನಪ್ಪನ ಸಿಟ್ಟು ಸೆಡವುಗಳ ನಡುವೆ
ಕೈ ಊರದೇ ಹೊಯ್‍ಗೆ ಗದ್ದೆಯಲ್ಲಿ ಸಸಿನೆಟ್ಟು ಮುಗಿಯುವುದರೊಳಗೆ ಕೈಕಾಲುಗಳಲ್ಲಿ
ಎರೆ ಮಣ್ಣು ತಿಂದು ಚಿತ್ರ-ವಿಚಿತ್ರ ಚಿತ್ತಾರ. .
ರಾತ್ರಿಯಿಡೀ ನಿದ್ದೆ ಬಾರದ ಅಮ್ಮನ
ದನಿಯಲಿ ಸಣ್ಣನೆಯ ನರಳಾಟ
ಗದ್ದೆಯಲಿ ಅಪ್ಪನಿಗೆ ಸರಿಸಮನಾಗಿ ದುಡಿದು
ದನಕರುಗಳಿಗೆ ಹಸಿರುಹುಲ್ಲು ಕೊಯ್ದು… ನಮಗಾಗಿ
ಕಳಲೆ, ಅಣಬೆ, ಏಡಿ, ಮೀನು; ಕೆಸುವಿನ ಸೊಪ್ಪು ತಂದು
ಬಡಿಸುತ್ತಿದ್ದವು ಅವ್ವನ ದಣಿವರಿಯದ ಚಿತ್ತಾರದ ಕೈಗಳು
ನಗರದ ಕಾಂಕ್ರೆಟ್ ಕಾಡಿನಲ್ಲಿ ಕಳಲೆ ಅಣಬೆ ಕೆಸುವಿನ ಸೊಪ್ಪು ಏಡಿ ಮೀನುಗಳನ್ನು ಅರಸಿ ಆರಿಸಿ ತಿನ್ನವಾಗ
ಒಗರಾಗಿ ರುಚಿಯಾಗಿ ಊಟದ ತಟ್ಟೆಯ
ಜತೆ ಅಮ್ಮ ಆಗಾಗ ಹಸಿರು
ಈಗ ನನ್ನ ಮಗಳು ಮಳೆಯಲ್ಲಿ ತೊಯ್ದು ತೊಪ್ಪೆಯಾಗಿಕೆಸರಲಿ ದಣಿವರಿಯದೇ.
.ಆಟವಾಡಿ. .ಬಂದವಳಿಗೆಸ್ನಾನ ಮಾಡಿಸಿ ಮೈ ಒರೆಸಿ ನೋಡುತ್ತೇನೆ..ಉಗುರು ..ಕಾಲುಗಳ ಬಾತಿನಲ್ಲಿ
ಅಲ್ಲಲ್ಲಿ ಎರೆಹುಳುಗಳು ಚಿತ್ತಾರ ಬಿಡಿಸಿವೆ.
*ಎಂ.ಎಚ್. ನಾಯ್ಕ ಕಾನಗೋಡ್
9886253409
