
ಮರಗಳೇ
ನಾಡಿನ ಮಕ್ಕಳು
ಮರಗಳೇ ನಾಡಿನ ಮಕ್ಕಳು ಎಂಬುದ |
ಹೇಳುವ ನಾವೂ ಎಲ್ಲರಿಗೆ ||
ಇಂದಿನ ಕುಡಿಗಳ ಬೆಳೆಸಲು ನಮಗೆ |
ಬೇಕೂ ಮಳೆಯೂ ಬೆಳೆಗಳಿಗೆ ||ಪ||
ಸಾಗರ ನಾರಿ ಸೂರ್ಯನ ಸೇರಿ |
ಮೋಡದ ಮಕ್ಕಳ ಹಡೆಯುವಳು ||
ಮಕ್ಕಳು ಮೋಡಗಳ ತಬ್ಬೀ ಮರಗಳು |
ಮಳೆಗಳ ಮುತ್ತನು ಸುರಿಸುವವು ||1||
ಮುತ್ತಿನ ಮಳೆಗಳು ಭೂಮಿಯ ಸೇರಿ |
ಬೆಳೆಗಳ ಹಸನೂಗೊಳಿಸುವುದು ||
ಹಸನಾದ ಬೆಳೆಗಳು ಹಸಿರಾದ ಮರಗಳು | ನಾಳಿನ ಮಕ್ಕಳ ಜೀವಗಳು ||2||
ಮರಗಳ ಕಡಿಯಲು ಮಳೆ ಬೆಳೆ ಸತ್ತೂ |
ಮಕ್ಕಳ ಜೀವಾ ನಲುಗುವುದು ||
ನಾಳೆಗೆ ಮಳೆ ಬೆಳೆ ಬೇಕು ಎಂದರೆ |
ಮರಗಳ ಬೆಳೆಸಿS ಮಕ್ಕಳಂತೆ ||3||
ಮರ-ಮಳೆ-ಬೆಳೆಗಳ ಕೂಡಿಸಿ ಬೆಳೆಸಿ |
ಉಳಿಸೀ ಜಗವನು ಮಕ್ಕಳಿಗೆ ||
ಮರಗಳೇ ಮಕ್ಕಳು ಮಕ್ಕಳೇ ಮರಗಳು |
ಇದುವೇ ನಾಳಿನS ಜೀವಮಂತ್ರ ||4||
ಮರಗಳೇ ನಾಡಿನ ಮಕ್ಕಳು ಎಂಬುದ |
ಹೇಳುವ ನಾವೂ ಎಲ್ಲರಿಗೆ ||
ಇಂದಿನ ಕುಡಿಗಳ ಬೆಳೆಸಲು ನಮಗೆ |
ಬೇಕೂ ಮಳೆಯೂ ಬೆಳೆಗಳಿಗೆ ||ಪ||
-ಕೃಷ್ಣಮೂರ್ತಿ ಹೆಬ್ಬಾರ

Nice