

ಇರುವೆ ಮತ್ತು ಮನುಷ್ಯ
ಅವನಿಗೆ ಕೆಂಪಿರುವೆಗಳ ಮೇಲೆ ಸಿಟ್ಟು
ಅವುಗಳ ಕೊಟ್ಟೆಗೆ ಕೋಲಲ್ಲಿ ಇರಿದಿದ್ದ…
ಅವು ಪೊತ್ತೆ ಪೊತ್ತೆಯಾಗಿ ಉದುರುವಾಗ
ಬಿದ್ದು ಸಾಯಲಿ… ಎಲ್ಲವನ್ನೂ
ಹೊಸಕಿ ಹಾಕುತ್ತೇನೆ ಅಂದಿದ್ದ
ಹಣ್ಣಿನಮೇಲೆ ಕಣ್ಣು…
ಮರ ತನ್ನದೇ
ಎನ್ನುವ ಗತ್ತು…
ಈ ಇರುವೆಗಳು
ಏನುಮಾಡುತ್ತವೆ ಎನ್ನುತ್ತ
ಕೈಗೆ ಸಿಕ್ಕವನ್ನು ಹೊಸಕಿ ಹಾಕಿ ಬೆನ್ನು
ಮುದುರಿ… ತಲೆಗೆ ಬಟ್ಟೆ ಸುತ್ತಿ
ಕೈ ಚಾಚಿದರೆ ಮೈಎಲ್ಲ ಉರಿ ಉರಿ
ಹಣ್ಣು ಕೊಯ್ಯಲಿಲ್ಲ
ಊಂಹೂಂ ಆಗದು ಇವುಗಳ ಕಾಟ
ಎಂದು ಸಿಟ್ಟಾಗಿ ಕೆಳಕ್ಕೆ ಇಳಿದ
ಮೈಎಲ್ಲ ತಿಕ್ಕಿ ಮೇಲೆ ನೋಡಿದರೆ
ಕೆಂಪಿರುವೆಗಳ ಗೂಡೇ ಗೂಡು
ಅದು ಅವುಗಳ ಮನೆ,
ಅವುಗಳ ಕೇರಿ
ಅವುಗಳ ಊರು ಎಲ್ಲ ಎಂದು
ಅರಿವಾಗಲೇ ಇಲ್ಲ…
ಕೈಯಲ್ಲಿ ಕತ್ತಿ ಹಿಡಿದು
ಹೂಂಕರಿಸಿ…
ಕಡಿದೇ ಕಡಿದ
ಹಣ್ಣಿನ ಮರ ಚರಚರ ಮುರಿದು
ಕೆಳಗೆ ಬಿತ್ತು…
ಈಗ ಕೆಂಪಿರುವೆಗಳಿಗೆ
ಆಪತ್ತು ಎಂದು ನಕ್ಕ
ಮರುದಿನ ನೋಡಿದರೆ… ಆಚೆ ಮರದಲ್ಲಿ
ಕೆಂಪಿರುವೆಗಳ ಸಾಲು ಸಾಲು
ಇಲ್ಲಿ ಮಾತ್ರ ಚಲ್ಲಾಪಿಲ್ಲಿಯಾಗಿ ಬಿದ್ದ
ಮರದ ಎಲೆ ಕೊಂಬೆ ಹಣ್ಣುಗಳ ‘ಅವಶೇಷ’.
-ತಮ್ಮಣ್ಣ ಬೀಗಾರ.
9480474629
