

ಭೂಮಿಯ ಮೇಲಿನ ಗೋಸ್ವರ್ಗ ನೋಡಿದಾಗ ಅತ್ಯಂತ ಸಂತಸವಾಗುತ್ತದೆ. ಗೋಸ್ವರ್ಗದ ಉತ್ತಮ ಪರಿಸರ, ವಾತಾವರಣ ಮನಕ್ಕೆ ಮುದನೀಡುತ್ತದೆ ಎಂದು ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ ಹೇಳಿದ್ದಾರೆ.
ಅವರು ಸಿದ್ಧಾಪುರ ಭಾನ್ಕುಳಿ ಶ್ರೀರಾಮದೇವಮಠ ಆವಾರದ ಸಹಸ್ರಗೋವುಗಳ ಸ್ವಚ್ಛಂದ ಸಾಮ್ರಾಜ್ಯ ಗೋಸ್ವರ್ಗಕ್ಕೆ ಭೇಟಿ ನೀಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಗೋಸ್ವರ್ಗದಲ್ಲಿಯ ವ್ಯವಸ್ಥೆ, ಸ್ವಚ್ಛತೆ, ಗೋವುಗಳನ್ನು ಸಾಕುವ ರೀತಿಯನ್ನು ಯಾರೂ ಮೆಚ್ಚುವಂತಿದೆ. ಯಾವುದೇ ಬಂಧನವಿಲ್ಲದೆ ಗೋಮಾತೆಯರು ಸರ್ವತಂತ್ರ ಸ್ವತಂತ್ರವಾಗಿ ಇಲ್ಲಿ ವಿಹರಿಸುವುದನ್ನು ಕಂಡಲ್ಲಿ ಮೈಮನಗಳು ಪುಳಕಿತವಾಗುತ್ತವೆ. ಶ್ರೀರಾಮಚಂದ್ರಾಪುರಮಠ ಮಹಾಸಂಸ್ಥಾನದ ಶ್ರೀರಾಘವೇಶ್ವರಭಾರತೀ ಶ್ರೀ ಇಂತಹ ಒಂದು ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದು ಸ್ವಾಗತಾರ್ಹ.
ಕನ್ನಡ ಸೇನೆಯ ವತಿಯಿಂದ ಮಹಾಗೋಗ್ರಾಸ ಸೇವೆಯನ್ನು ಅವರು ಈ ಸಂದರ್ಭದಲ್ಲಿ ಸಮರ್ಪಿಸಿದರು. ಕನ್ನಡ ಸೇನೆಯ ಪ್ರಧಾನ ಕಾರ್ಯದರ್ಶಿ ಮುನಿರಾಜ ಗೌಡ, ಕನ್ನಡ ಸೇನೆಯ ಗೋವಾ ರಾಜ್ಯದ ಪ್ರತಿನಿಧಿ ರತ್ನಾಕರ ಪೂಜಾರಿ, ಸಂಘಟನೆಯ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಯಕ್ಷಗಾನ ಪ್ರದರ್ಶನ
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ದಂಟಕಲ್‍ನ ಯಕ್ಷಚಂದನ ಸಂಯೋಜನೆಯಲ್ಲಿ ಯಕ್ಷಸಂಜೆ ಕಾರ್ಯಕ್ರಮ ಜೂ.22ರ ಸಂಜೆ 7ಕ್ಕೆ ಗಾಳಿಜಡ್ಡಿಯ ಉಮಾಪತಿ ಹೆಗಡೆ ರಂಗಮಂದಿರದಲ್ಲಿ ನಡೆಯಲಿದೆ.
ಗಧಾಯುದ್ಧ ಎನ್ನುವ ಆಖ್ಯಾನದಲ್ಲಿ ಸತೀಶ ಹೆಗಡೆ ದಂಟ್ಕಲ್, ನಂದನ ಹೆಗಡೆ(ಭಾಗವತಿಕೆ), ಶಂಕರ ಭಾಗ್ವತ ಯಲ್ಲಾಪುರ, ಶರತ್ ಜಾನಕೈ(ಮದ್ದಳೆ), ಪ್ರಸನ್ನ ಹೆಗ್ಗಾರ(ಚಂಡೆ), ಪಾತ್ರವರ್ಗದಲ್ಲಿ ಸುಹಾಸಿನಿ ಹೆಗಡೆ, ಶುಭಾ ರಮೇಶ ಭಟ್ಟ,ಎಂ.ಆರ್.ಹೆಗಡೆ, ಕಾರ್ತಿಕ ಹೆಗಡೆ ದಂಟ್ಕಲ್,ಸಿತಿನ್ ಹೆಗಡೆ ದಂಟ್ಕಲ್,ಮೈತ್ರಿ ಸಂಪೇಸರ, ಸಹನಾ ಹೆಗಡೆ ಹೂಡೇಹದ್ದ, ಸುನೀಲ ಹೂಡೇಹದ್ದ,ಅಭಯ ಹೊಸಗದ್ದೆ, ರಕ್ಷಿತಾ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಎಂ.ಜಿ.ಹೆಗಡೆ ಗೆಜ್ಜೆ, ತಾಪಂ ಅಧ್ಯಕ್ಷ ಸುಧೀರ್ ಗೌಡರ್, ರವೀಂದ್ರ ಹೆಗಡೆ ಹಿರೇಕೈ, ಅಶೋಕ ಹೆಗಡೆ ಹಿರೇಕೈ ಪಾಲ್ಗೊಳ್ಳುವರು.
ಇಲ್ಲಿವೆ ಪಶ್ಚಿಮಘಟ್ಟದ ನೂರಾರು ಪ್ರಭೇದ
ನಿಸರ್ಗ,ವೈವಿಧ್ಯತೆ, ಹೋರಾಟದ ಮನೋಭಾವದ ಸಿದ್ಧಾಪುರದಲ್ಲಿ ಈ ತಾಲೂಕಿನ ಸಾಧಕರ ಕತೆ ಹೇಳುವ ಒಂದೇ ಒಂದು ವಿಶಿಷ್ಟ ದಾಖಲಾತಿಯ ವ್ಯವಸ್ಥೆ ಇಲ್ಲ. ಆದರೆ, ಈ ಭಾಗದ ಅಪರೂಪದ ಸಸ್ಯಪ್ರಭೇದಗಳ ವಿಶೇಷತೆ ಪರಿಚಯಿಸುವ ವೃಕ್ಷ ಉದ್ಯಾನವನ ಸಿದ್ದಾಪುರ ನಗರದಲ್ಲೇ ನಿಂತಿದೆ.
ಉದ್ಯಾನವನ, ಬಿದಿರಿನ ಪ್ಲಾಂಟೇಶನ್ ಸೇರಿ 75 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಟ್ರೀಪಾರ್ಕ್‍ನಲ್ಲಿ ನೂರಕ್ಕೂ ಹೆಚ್ಚು ಸಸ್ಯವೈವಿಧ್ಯವಿದೆ.
ಅವಸರದ ಕಾಲದಲ್ಲಿ ನಿರ್ಮಾಣವಾದ ಈ ಟ್ರೀಪಾರ್ಕ್ ಮಕ್ಕಳಿಗೆ ಆಟಕ್ಕೆ, ಹಿರಿಯರಿಗೆ ವಿಹಾರಕ್ಕೆ ಅನುಕೂಲವಾಗುತ್ತಿದೆ.
ಈ ವಿಶಿಷ್ಟ ವೃಕ್ಷ ಉದ್ಯಾನವನ್ನು ನಿರ್ಮಾಣ ಮಾಡಿ 10 ವರ್ಷ ಕಳೆದರೂ ಈ ಉದ್ಯಾನವನದ ಬಗ್ಗೆ ಪ್ರಚಾರವಿಲ್ಲ. ಉತ್ತಮ ಉದ್ದೇಶದಿಂದ ಅರಣ್ಯ ಇಲಾಖೆ ಪ್ರಾರಂಭಿಸಿದ ಈ ಉದ್ಯಾನವನ ಸ್ಥಳಿಯ ವಿಶೇಶದಂತೆ ನಿರ್ಮಾಣವಾಗಿದೆ.
