

ಮಲೆನಾಡಿನಾದ್ಯಂತ ನಡೆಯುವ ಆರಿದ್ರ ಮಳೆ ಹಬ್ಬದ ಸಂಬ್ರಮದ ಖುಷಿಗೆ ಇಂದು ಇಲ್ಲಿಯ ಕೋಲಶಿರ್ಸಿ ಮತ್ತು ಹೊಸೂರು ಗ್ರಾಮಗಳು ಸಾಕ್ಷಿಯಾದವು.
ಹೊಸೂರಿನಲ್ಲಿ ಪ್ರತಿವರ್ಷದಂತೆ ಈ ವರ್ಷ ಕೂಡಾ ಮುಸ್ಸಂಜೆಯಿಂದ ಆರಿದ್ರ ಹಬ್ಬದ ಸಂಬ್ರಮ ಕಳೆಕಟ್ಟಿದರೆ, ಕೋಲಶಿರ್ಸಿಯಲ್ಲಿ ವಾಡಿಕೆಯಂತೆ ಮಧ್ಯಾಹ್ನ ಆರಿದ್ರ ಮಳೆ ಹಬ್ಬದ ಬಿಂಗಿ ನಡೆಯಿತು.
ದೊಡ್ಡ ಗ್ರಾಮವಾಗಿರುವ ಕೋಲಶಿರ್ಸಿಯಲ್ಲಿ ಜನನ, ಮರಣಗಳಾದರೆ ಆಯಾ ಕುಟುಂಬಗಳು ಧಾರ್ಮಿಕ ಕೆಲಸದಲ್ಲಿ ಪಾಲ್ಗೊಳ್ಳದಿರುವುದು ಇಲ್ಲಿಯ ರಿವಾಜು.
ಈ ವರ್ಷ ಕೆಲವು ಕುಟುಂಬಗಳಲ್ಲಿ ಇದೇ ಸಮಯದಲ್ಲಿ ಜನನ ಮರಣಗಳಾಗಿದ್ದರಿಂದ ಕೆಲವು ಪ್ರಮುಖರು, ಕುಟುಂಬಗಳ ಪಾಲ್ಗೊಳ್ಳುವಿಕೆ ಇಲ್ಲದೆ ಹಬ್ಬ ನಡೆಯಿತು. ಪ್ರತಿವರ್ಷದ ಪೂಜಾ ಕಾರ್ಯಕ್ರಮ, ಅತಿಥಿ ಸತ್ಕಾರಗಳು ಯತೋಚಿತವಾಗಿ ನಡೆದರೂ ದೇವರ ಮೂರ್ತಿ ಹೊರುವವರ ಅನುಪಸ್ಥಿತಿ, ಕೆಲವರ ಗೈರು ಹಾಜರಿಯಿಂದ ಹಬ್ಬದ ಉತ್ಸಾಹ ಕಡಿಮೆಯಾಗಿತ್ತು.
ಆದರೆ ದೇವರ ಪೂಜೆ, ಗಾಡಿಗರ ಸಂಪ್ರದಾಯ, ಮುತ್ತೈದೆಯರು, ಮಕ್ಕಳ ಆರಾಧನೆ, ಕೆಂಡ (ಕೊಂಡ) ಹಾಯುವಿಕೆ ಎಲ್ಲಾ ನಡೆದು ಬಹುತೇಕ ಗ್ರಾಮಸ್ಥರ ಪಾಲ್ಗೊಳ್ಳುವಿಕೆಯಲ್ಲಿ ಆಚರಣೆಯ ವಿಧಿ ವಿಧಾನಗಳು ನಡೆದವು.
ಸುರಿಯುವ ಮಳೆಯ ನಡುವೆ ಬಿಂಗಿ ಕುಣಿದ ಮಕ್ಕಳು, ಯುವಕರ ಆಸಕ್ತಿ ಮೇರೆ ಮೀರುವಂತಿತ್ತು.





