

ಸಿದ್ಧಾಪುರ ಪ.ಪಂ., ಶಿರಸಿಕ್ಷೇತ್ರದ ಬಿ.ಜೆ.ಪಿ. ಜನಪ್ರತಿನಿಧಿಗಳ ಉಪಟಳ ನಿಯಂತ್ರಣಮಾಡಿ ನ್ಯಾಯ ಒದಗಿಸಲು ಮುಖ್ಯಮಂತ್ರಿಗಳಿಗೆ ಪತ್ರ
ಸಿದ್ಧಾಪುರ ಸೇರಿದಂತೆ ಶಿರಸಿ ಕ್ಷೇತ್ರ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳು ಬಿ.ಜೆ.ಪಿ.ಶಾಸಕರು ಮತ್ತು ಸಂಸದರ ಅಣತಿಯಂತೆ ಕೆಲಸಮಾಡುವುದರಿಂದ ಮುಸ್ಲಿಂ ಬಾಂಧವರಿಗೆ ತೊಂದರೆಯಾಗುತ್ತಿದೆ ಎಂದಿರುವ ಸಿದ್ಧಾಪುರದ ಹಿರಿಯ ಸಾಮಾಜಿಕ ಕಾರ್ಯಕರ್ತ ಮೀರಾಸಾಬ್ ಈ ಬಗ್ಗೆ ಮುಖ್ಯಮಂತ್ರಿಗಳೇ ಮಧ್ಯೆ ಪ್ರವೇಶಿಸಿ ನ್ಯಾಯ ದೊರಕಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪತ್ರ ಬರೆದಿರುವ ಮೀರಾಸಾಬ್ ಸಿದ್ಧಾಪುರದ ಉರ್ದುಶಾಲೆ ಇರುವ ಪ್ರದೇಶದಲ್ಲಿ ಸಂತೆ ಮಾರುಕಟ್ಟೆಗಾಗಿ ಜಾಗ ಬಿಡಲಾಗಿದೆ.
ಆದರೆ ಶಾಸಕ, ಸಂಸದರು ಮತ್ತವರ ಆಪ್ತರು ಸೇರಿ ಅಲ್ಲಿ ಸಂತೆ ಮಾರುಕಟ್ಟೆಯನ್ನು ನಿರ್ಮಿಸಿಲ್ಲ.
ಉರ್ದುಶಾಲೆಗೆ ಕಟ್ಟಡ ನಿರ್ಮಾಣಕ್ಕಾಗಿ 30 ಲಕ್ಷ ರೂಪಾಯಿ ಸರ್ಕಾರಿ ಅನುದಾನ ಮಂಜೂರಿಯಾಗಿ ಬಂದಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಪಕ್ಷಪಾತ ಮಾಡಿ ಆ ಹಣ ಮರಳಿಸಿದ್ದಾರೆ.
ಸಿದ್ಧಾಪುರ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಸ ಸಂಗ್ರಹಣೆ ಮತ್ತು ಅದರ ವಿಂಗಡಣೆ ನಂತರ ಸಾವಯವ ಗೊಬ್ಬರ ತಯಾರಿಕೆಗೆ ದೊಡ್ಡಪ್ರಮಾಣದ ಹಣ ಬರುತ್ತಿದೆ ಆದರೆ ಅದು ಎಲ್ಲಿ, ಹೇಗೆ? ವಿನಿಯೋಗ ಆಗುತ್ತಿದೆ ಎನ್ನುವುದಕ್ಕೆ ದಾಖಲೆ, ವಾಸ್ತವಗಳ ನಡುವೆ ವ್ಯತ್ಯಾಸವಿದೆ. ಸಾರ್ವಜನಿಕ, ಸರ್ಕಾರಿ ಅವಶ್ಯಕತೆಯ ಬಳಕೆಯ ಪೌರಕಾರ್ಮಿಕರ ವಸತಿ ಸಂಕಿರಣ ಮತ್ತು ಉರ್ದುಶಾಲೆ ಪ್ರದೇಶದಲ್ಲಿ ನಿಶ್ಚಿತ ಉದ್ದೇಶ ಕಾನೂನು ರೀತಿ-ರಿವಾಜು ಮೀರಿ ಅನ್ಯ ಕೆಲಸಗಳು ನಡಯುತ್ತಿವೆ.
ಈ ಕೆಲಸಗಳ ಹಿಂದೆ ಬಿ.ಜೆ.ಪಿ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ಅವ್ಯವಹಾರ ಹೊರಗೆಳೆಯಬೇಕು ಎಂದು ಮುಖ್ಯಮಂತ್ರಿಗಳನ್ನು ಕೋರಿರುವ ಮೀರಾಸಾಬ್ ಪೌರ ಕಾರ್ಮಿಕರು, ಪರಿಶಿಷ್ಟರ ವಿಚಾರದಲ್ಲಿ ಪ.ಪಂ. ನಲ್ಲಿ ಪಕ್ಷಪಾತ ಮಾಡಲಾಗುತ್ತಿದೆ. ನೌಕರರಿಗೆ ಸರ್ಕಾರಿ ಅನುಕೂಲ ಒದಗಿಸಲು ಹಿಂದೇಟು, ಅವರ ಸೇವಾ ದಾಖಲಾತಿಗಳ ಕಣ್ಮರೆ ಸೇರಿದಂತೆ ಪಟ್ಟಣ ಪಂಚಾಯತ್ ವ್ಯವಸ್ಥೆಯಲ್ಲಿ ಕಾನೂನುಬಾಹೀರ, ಬಹುಜನ, ಪರಿಶಿಷ್ಟರು, ಅಲ್ಪಸಂಖ್ಯಾತರ ವಿರೋಧಿ ಆಡಳಿತ ನಡೆಯುತ್ತಿದೆ.
ಈ ಬಗ್ಗೆ ಸರ್ಕಾರದಿಂದ ಕೂಲಂಕುಶ ತನಿಖೆ ಮಾಡಿ ಬಾಧಿತರಿಗೆ ನ್ಯಾಯ ಒದಗಿಸುವುದು ಮತ್ತು ಬಿ.ಜೆ.ಪಿ. ಜನಪ್ರತಿನಿಧಿಗಳಿಂದಾಗಿರುವ ಪಕ್ಷಪಾತ, ಅನ್ಯಾಯ ಸರಿಪಡಿಸಿ ಈ ವ್ಯವಸ್ಥೆ ಸರಿಪಡಿಸುವ ಮೂಲಕ ಶಾಸಕರು, ಸಂಸದರು ಮತ್ತು ಅವರ ಹಿತೈಶಿಗಳು ಸಿದ್ಧಾಪುರ ಪ.ಪಂ. ಶಿರಸಿ ಕ್ಷೇತ್ರ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಸುತ್ತಿರುವ ಅಂಧಾದರ್ಬಾರ್ ನಿಯಂತ್ರಿಸುವಂತೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ವಿನಂತಿಸಿದ್ದಾರೆ.

