ಸಿದ್ಧಾಪುರ(ಉ.ಕ.) ಮುತ್ತಿಗೆ ಗೋಳಗೋಡಿನ ವಸಂತ ಶಾನಭಾಗರ ಕೊಲೆ ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪ ಎಸಗಿದ ಸಿದ್ದಾಪುರ ವೃತ್ತ ನಿರೀಕ್ಷಕ ಜೊಯ್ ಅಂತೋನಿಯವರನ್ನು ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತ್ತು ಮಾಡಿರುವುದು ಸುದ್ದಿಯಾಗಿದೆ.
ಗೋಳಗೋಡು ಪಾಟಾಳಿ ವಸಂತ ಶಾನಭಾಗರನ್ನು ಅಪಹರಿಸಿ ಹತ್ಯೆ ಮಾಡಿದ ದಾಯಾದಿ ಅಪ್ಪ ಮಗ ಕೊಲೆಯ ನಂತರ ತಲೆಮರೆಸಿಕೊಂಡಿದ್ದರು. ಕಳೆದ ಏಫ್ರಿಲ್ 24 ರಂದು ವಸಂತರನ್ನು ಅಪಹರಿಸಿ ಕೊಲೆಮಾಡಿದ್ದರು.
ಏಫ್ರಿಲ್ 28 ರಂದು ನಾಪತ್ತೆ ದೂರು, ನಂತರ ಅಪಹರಣದ ದೂರು ಹೀಗೆ ಸ್ಥಳಿಯರು ಎರಡೆರಡು ಬಾರಿ ಮಾಹಿತಿ, ಕ್ಲೂ ನೀಡಿದ್ದಾಗ್ಯೂ ಜೊಯ್ ಈ ಪ್ರಕರಣವನ್ನು ಗಂಭೀರ ಪ್ರಕರಣವೆಂದು ಪರಿಗಣಿಸಿರಲಿಲ್ಲ.
ನಂತರ ಸ್ಥಳಿಯರ ದೂರು, ಬೇನಾಮಿ ಮಾಹಿತಿ ಮೇರೆಗೆ ಉತ್ತರಕನ್ನಡ ಎಸ್.ಪಿ.ವಿನಾಯಕ್ ಪಾಟೀಲ್ ಈ ಪ್ರಕರಣವನ್ನು ಮುಂಡಗೋಡ್ ಪಿ.ಆಯ್. ರಿಗೆ ಹಸ್ತಾಂತರಿಸಿದ್ದರು.
ನಂತರ ಬೆಂಗಳೂರು ಕನಕಪುರದ ಲೋಕಿ ಬಂಧನ, ಆನಂತರ ವಿನಯ್ ಮತ್ತು ವೆಂಕಟೇಶ್ ಶಾನಭಾಗರ ಬಂಧನ ಆಗಿತ್ತು.
ಈ ಪ್ರಕರಣದಲ್ಲಿ ರಾಜಕೀಯ ಲಾಭಿ
(ಶಿರಸಿ ರಾಜಕಾರಣಿಗಳು? ಜಾತಿ ರಕ್ಷಣೆ!)ಗೆ ಮಣಿದು ಕೊಲೆಗಾರರನ್ನು ಬಚಾವು ಮಾಡಿದ್ದರು ಎನ್ನುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಜೊಯ್ ತಲೆದಂಡವಾಗಿದೆ ಎನ್ನಲಾಗುತ್ತಿದೆ.
ಹಿನ್ನೆಲೆ-
ಕಳೆದ ಏಫ್ರಿಲ್ 24 ರಂದು ಗೋಳಗೋಡಿನ ಪಾಟಾಳಿ ವಸಂತ ಶಾನಭಾಗ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ವಸಂತ ಸಂಬಂದಿಗಳಿಂದ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಏಫ್ರಿಲ್ 28 ರಂದು ದೂರುದಾಖಲಾಗುತ್ತದೆ.
ದೂರು ದಾಖಲಾಗುತ್ತಲೇ ಇದೊಂದು ನಾಪತ್ತೆ ಪ್ರಕರಣ ಎಂದು ಮಾಮೂಲಿ ಪುಕ್ಕಟ್ಟೆ ಸುದ್ದಿಯಾಗಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ.
ಇದಾದ ಮೇಲೆ ಸ್ಥಳಿಯರು ಮತ್ತೊಂದು ದೂರಿನಲ್ಲಿ ಅಪಹರಣ ಎಂದು ನಮೂದಿಸದಿದ್ದರೆ ಪೊಲೀಸರು ಈ ಪ್ರಕರಣವನ್ನು 5 ವರ್ಷಗಳ ನಂತರ ದಾಖಲೆಯಲ್ಲೂ ದೊರೆಯದ ಪೈಲ್ ಒಳಗೆ ಸೇರಿಸಿಬಿಡುತ್ತಿದ್ದರು.
ಆದರೆ ಫಿರ್ಯಾದುದಾರರು ಮತ್ತು ಅವರೊಂದಿಗಿದ್ದ ಸ್ಥಳಿಯರು ಸಿದ್ಧಾಪುರ ಪೊಲೀಸರ ಮೇಲೆ ಒಂದು ಸಣ್ಣ ಅನುಮಾನವಿಟ್ಟುಕೊಂಡೇ ದಾಖಲೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠರಿಗೆ ರವಾನಿಸಿದ್ದರು.
ಆಗ ಕಂಗಾಲಾದವರೇ ಪಿ.ಆಯ್. ಅಂಥೋನಿ ಜೊಯ್. ಯಾಕೆಂದರೆ ಉತ್ತರಕನ್ನಡ ಎಸ್.ಪಿ. ಪಾಟೀಲ್ ಇದೇ ಸಿದ್ಧಾಪುರದ ಪೊಲೀಸ್ ಮುಖ್ಯಾಧಿಕಾರಿ ಅಂತೋನಿ ಗೆ ಕುಳಿತಲ್ಲಿಂದಲೇ ಮಾಹಿತಿ ಇಲ್ಲಿದೆ, ಇಲ್ಲಿದೆ ಹುಡುಕಿ ಎಂದರು.
ಅಂತೋನಿ ಎಸ್.ಪಿ. ಸಾಹೇಬರಿಗೆ ಒಂದು ಮಾಹಿತಿ ನೀಡಿ, ತಡಬಡಾಯಿಸತೊಡಗಿದ್ದರು.
ಆದರೆ ಜೊಯ್ ಅಂತೋನಿಯವರಿಗೆ ಒಂದು ಧೈರ್ಯ ವಿತ್ತು. ಶಿರಸಿ ರಾಜಕಾರಣಿಗಳು ತನ್ನ ನೆರವಿಗಿರುವಾಗ ತಾನು ಸೇಫ್ ಎಂದೇ ಭಾವಿಸಿದ್ದರು. ಆದರೆ ಜೂನ್ ತಿಂಗಳಲ್ಲಿ ಪಾಟೀಲ್ ಸಾಹೇಬರು ತನಿಖಾಧಿಕಾರಿ ಜೊಯ್ ರನ್ನು ಬದಲಿಸಿ ಮುಂಡಗೋಡು ಸಿ.ಪಿ.ಐ. ಚಲವಾದಿಯರನ್ನು ನೇಮಿಸಿದರು ನೋಡಿ, ಸಿದ್ಧಾಪುರ ಪೊಲೀಸ್ ಠಾಣೆಗೆ ಮಂಕು ಕವಿಯಿತು.
ನಿನ್ನೆ ಅಮಾನತ್ತಾದ ಜೊಯ್ ಅಂತೋನಿ ತಲೆ ಮೇಲೆ ಕತ್ತಿ ತೂಗುತ್ತಿರುವುದು ಅಂದೇ ಸಿದ್ಧಾಪುರ ಪೊಲೀಸರಿಗೆ ಕಂಡಿತ್ತು.
ಶಿವಾನಂದ ಚಲವಾದಿ ತನಿಖೆ ಕೈಗೆತ್ತಿಕೊಳ್ಳುತ್ತಲೇ ಏ.24 ರಂದು ನಾಪತ್ತೆಯಾಗಿದ್ದ ಎಂದು 28 ಏಫ್ರಿಲ್ 2019 ರಂದು ದಾಖಲಾಗಿದ್ದ ದೂರು ನೀಡಿದ್ದ ವ್ಯಕ್ತಿಗಳನ್ನು ವಿಚಾರಿಸಿದಾಗ ಅವರಲ್ಲಿ ಹೇಳಲಾರದ ಸತ್ಯ ಅಡಗಿ ಕೂತಿರುವುದು ತಿಳಿಯಿತು.
ಈ ವಾಸನೆ ಗ್ರಹಿಸಿದ್ದ ಎಸ್.ಪಿ. ಸಾಹೇಬರು ಮತ್ತೆ ಪೊಲೀಸರನ್ನು ಗೋಳಗೋಡಿಗೆ ಓಡಿಸಿದರು. ಆಗ ಫಿರ್ಯಾದುದಾರರೊಂದಿಗೆ ಒಂದಿಬ್ಬರು ವಸಂತ ಶಾನಭಾಗರನ್ನು ಅಪಹರಿಸಿದವರು ವಿನಯ ಮತ್ತು ವೆಂಕಟೇಶ್ ಎನ್ನುವ ಸತ್ಯವನ್ನು ಹೇಳಿಬಿಟ್ಟರು.
ಈ ಸತ್ಯ ಜೊಯ್ ಅಂತೋನಿಯವರಿಗೂ ಗೊತ್ತಿತ್ತು!
ಆದರೆ ಜೊಯ್ ಈ ಪ್ರಕರಣದ ತನಿಖೆ ಮುಂದುವರಿಯುವುದನ್ನು ಬಯಸಿರಲಿಲ್ಲ! ಈ ಸತ್ಯ ಸಿದ್ಧಾಪುರ ಠಾಣೆಯಿಂದಲೇ ಹೊರಬಿದ್ದು ರಾಜಕಾರಣಿಗಳು, ಎಸ್.ಪಿ. ಪಾಟೀಲರ ಮನೆಯವರೆಗೂ ತಲುಪಿತ್ತು.
ರಾಜಕಾರಣಿಗಳು,ಕಳ್ಳರೊಂದಿಗೆ ಆಟ ಆಡುವುದನ್ನು ಕಲಿತಿದ್ದ ಜೊಯ್ ಸಿದ್ಧಾಪುರದ ಜನರು, ರಾಜಕಾರಣ ಹೀಗಿದೆ ಎಂದು ಕಲಿಯುವುದರಲ್ಲಿ ಸೋತಿದ್ದರು. ಶಿವಾನಂದ ಚಲವಾದಿ ಸ್ಥಳಿಯರಿಂದಲೇ ಮಾಹಿತಿ ಕಲೆ ಹಾಕಿ ಬೆಂಗಳೂರಿನ ಲೋಕಿ ಹಿಡಿದರು.
ಈ ಮಾಹಿತಿ ಬಹಿರಂಗವಾಗುವ ಮೊದಲೇ ಸುದ್ದಿ ತಿಳಿದ ಕೊಲೆಗಾರರು ಕಂಗಾಲಾದರು.
ಒನ್ಸಗೇನ್, ಈ ವಿಚಾರ ಸಿದ್ಧಾಪುರ ಪೊಲೀಸರಿಗೆ ತಿಳಿದಿತ್ತು!
24 ರಂದೇ ಕೊಲೆಯಾಗಿತ್ತು-
ವಿಚಿತ್ರವೆಂದರೆ, ಕೊಲೆಗಾರರಲ್ಲೊಬ್ಬ ಲೋಕಿ ವಿನಯ್ ಮತ್ತು ವೆಂಕಟೇಶ್ ವಸಂತ ಶಾನಭಾಗರನ್ನು ಏಫ್ರಿಲ್ 24 ರಂದೇ ಅಪಹರಿಸಿ ಅಂದೇ ಮುಸ್ಸಂಜೆ ವೇಳೆಗೆ ಕತ್ತು ಕೊಯ್ದು ಮುಗಿಸಿದ್ದಾರೆ. ಎಂದು ಬಾಯ್ಬಿಡುವ ಮೊದಲೇ ಇದೇ ಅಪ್ಪ ವೆಂಕಟೇಶ್ ಮತ್ತು ಮಗ ವಿನಯ್ ಈ ರಹಸ್ಯವನ್ನು ರಾಜಕಾರಣಿಗಳು ಮತ್ತು ಪೊಲೀಸರಿಗೆ ಭಾಗಶ:ಹೇಳಿದ್ದರು ಎಂದರೆ ಎಲ್ಲರೂ ನಂಬುತ್ತಾರೆ. ಯಾಕೆಂದರೆ ಅದಕ್ಕೆ ದಾಖಲೆ ದೊರೆತಿದೆ.
ಆದರೆ, ಈ ರಹಶ್ಯವನ್ನು ಎಸ್.ಪಿ. ಪಾಟೀಲ್ ಎದುರು ಜೊಯ್ ಬಾಯಿಬಿಟ್ಟಿರಲಿಲ್ಲ. ಹೀಗೆ ಕೊಲೆಮಾಡಿದವರೇ ಉಸುರಿದ ಸತ್ಯಗಳು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಲುಪಿದರೂ ಜೊಯ್ ಅಂತೋನಿ ನಂಬಿರಲಿಲ್ಲ. ಯಾಕೆಂದರೆ ಜೊಯ್ ನಂಬಿದ್ದು ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಬೆರೆಯವರಿಗೆ ತಿಳಿಯುವುದಿಲ್ಲ ಎಂದು.
ಆದರೆ ಆಗಿದ್ದೇ ಬೇರೆ-
ಎಸ್.ಪಿ. ವಿನಾಯಕ್ ಪಾಟೀಲರಿಗೆ ಇಂಚಿಂಚು ಸತ್ಯವನ್ನು ತಲುಪಿಸುತಿದ್ದ ಸ್ಥಳಿಯರಿಗೆ ಸಿದ್ಧಾಪುರಲ್ಲೇನೋ ಎಡವಟ್ಟು ನಡೆಯುತ್ತಿರುವ ಅನುಮಾನ ಬಂದಿತ್ತು.
ಅಂತೂ ಶಿವಾನಂದ ಚಲವಾದಿ ಒಬ್ಬೊಬ್ಬರನ್ನೇ ಬಾಯಿ ಬಿಡಿಸುತ್ತ ವೆಂಕಟೇಶ್ ಮತ್ತು ವಿನಯ ಇರುತಿದ್ದ ಶಿರಸಿ ಬಾಡಿಗೆ ಮನೆಗೆ ಹೋದರೆ ಅಲ್ಲಿ ಏನೂ ಇರಲಿಲ್ಲ.
ಏಫ್ರಿಲ್ 24 ರಂದು ವಸಂತರನ್ನು ಅಪಹರಿಸಿ ಕುರಿ ಕತ್ತರಿಸುವಂತೆ ತುಂಡರಿಸಿದ್ದ ಅಪ್ಪ ಮಗ ಆಸ್ತಿ, ದುಡ್ಡಿನ ಪಾಲಿನಲ್ಲಿ ಕೆಲವಂಶ ಹಂಚಿ ಬಚಾವಾಗಬಹುದು ಎಂದೇ ಏಫ್ರಿಲ್ ತಿಂಗಳು ಕಳೆಯುವವ ವರೆಗೂ ಶಿರಸಿಯಲ್ಲೇ ಓಡಾಡಿಕೊಂಡಿದ್ದರು.
ಆದರೆ ಕೆಲವು ಆಂತರಿಕ ಸತ್ಯಗಳು ಯಾವಾಗ ಈ ಅಪ್ಪ ಮಕ್ಕಳ ಕಿವಿಗೆ ಬಿತ್ತೋ ಆಗ ಮೊಬೈಲ್ ಆಫ್ ಮಾಡಿ ಕಂಬಿ ಕಿತ್ತರು.
ಇಂಥ ವಿಚಾರಗಳೆಲ್ಲ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಯುತ್ತಲೇ ಕೊಲೆಗಾರರಿಗೆ ಬಲೆಬೀಸಿ ಅಂತೋನಿಯವರ ಮೇಲೆ ಕಣ್ಣಿಟ್ಟು ಕೂತು ಬಿಟ್ಟರು ಎಸ್.ಪಿ. ಪಾಟೀಲ್.
ಕೊಲೆಗಾರರು ಅಂದರ್ ಆಗುತ್ತಲೇ ಮೊದಲೇ ಸಿದ್ಧವಾಗಿದ್ದ ಅಮಾನತ್ತು ಆದೇಶವನ್ನು ಜಾರಿ ಮಾಡಿ ಬಿಟ್ಟರು. ಇಷ್ಟೆಲ್ಲಾ ನಡೆದಿದ್ದು ಮೂರು ತಿಂಗಳಲ್ಲಿ ಈಗ ಸ್ವಾರ್ಥ, ಆಸ್ತಿ, ಆಸೆಗಾಗಿ ಕೊಲೆಮಾಡಿದ ಅಪ್ಪ ಮಗನೊಂದಿಗೆ ಉಡಾಳ ಲೋಕಿ ಜೈಲು ಪಾಲಾಗಿದ್ದಾನೆ. ಅಮಾಯಕ ವಸಂತ ಶಾನಭಾಗ ಭೀಕರವಾಗಿ ಕೊಲೆಯಾಗಿ ಬದುಕು ಮುಗಿಸಿದ್ದಾನೆ. ಇವೆಲ್ಲದಕ್ಕೂ ಸಾಕ್ಷಿಯಾದ ಜೊಯ್ ಅಂತೋನಿ ಅಮಾನತ್ತಾಗಿದ್ದಾರೆ.
ಅವರೂ ಒಳ್ಳೆಯವರೆ- ವಸಂತ ಶಾನಭಾಗ ಎನ್ನುವ ಅವಿವಾಹಿತ ಅಮಾಯಕನನ್ನು ಕುರಿ ಕೊಯ್ದಂತೆ ಕತ್ತರಿಸಿದ ವಿನಯ್ ಮತ್ತು ಆತನ ತಂದೆ ವೆಂಕಟೇಶ್ ವಿಲಾಸಿಗಳು, ಹವ್ಯಕರಾದರೂ ಹೆಂಡ, ಖಂಡ, ಹೆಂಗಸರ ಸಾವಾಸದಿಂದ ಸೊಂಪಾಗಿದ್ದರು, ಜೊತೆಗೆ ತಮ್ಮ ಕೆಲಸದ ಆಳುಗಳನ್ನೂ ಪ್ರೀತಿಯಿಂದಲೇ ನೋಡಿಕೊಳ್ಳುತಿದ್ದರು ಎನ್ನುತ್ತಾರೆ ಸ್ಥಳಿಯರು. ಕೆಲವು ವರ್ಷಗಳಿಂದ ಸ್ವೇಚ್ಛೆಯಿಂದಲೇ ಬದುಕಿದ್ದ ವಿನಯ್ ಮತ್ತು ವೆಂಕಟೇಶ್ ತಮ್ಮ ಸಕಲ ವ್ಯವಹಾರಗಳಿಗೆ ಸ್ಫಂದಿಸದ ಮನೆ ಸೊಸೆ ವಿನಯ್ ಹೆಂಡತಿಯನ್ನೇ ಬರಿ ಕೈಲಿ ತವರುಮನೆಗೆ ಓಡಿಸಿದ್ದರು ಎನ್ನುವ ಮಾಹಿತಿ ಇದೆ. ಒಳಹೊರಗೆ ಸಭ್ಯರಂತಿದ್ದು ಎಲ್ಲರನ್ನೂ ಪಳಗಿಸುತಿದ್ದವರು ರಕ್ತಸಂಬಂಧಿ ವಸಂತ ಶಾನಭಾಗರನ್ನೂ ಪಳಗಿಸಿ ಗುತ್ತಿಗುಡ್ಡ ತೋರಿಸಲು ಯೋಜಿಸಿ ಅದು ಸಾಧ್ಯವಾಗದಿದ್ದಾಗ ಇಂಥ ಹೀನ ಕೆಲಸಕ್ಕಿಳಿದರು. ಅವರ ಪಾಪಕ್ಕೆ ಅವರು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾರೆ ಆದರೆ ಬೆಂಗಳೂರಿನ ಲೋಕಿ ಮತ್ತು ಹ್ಯಾಂಡ್‍ಸಮ್ ಸ್ಮಾರ್ಟ್ ಅಧಿಕಾರಿ ಜೊಯ್ ಕುತ್ತಿಗೆಗೂ ಉರುಳು ಹಾಕೇ ಮುದ್ದೆ ಮುರಿಯುತಿದ್ದಾರೆ. ಆದರೆ ಇವರೆಲ್ಲರ ಹಿಂದೆ ಆಟ ಆಡಿದ ರಾಜಕಾರಣ ಮಾತ್ರ ಈಗಲೂ ಮುಗುಂ ಆಗಿದೆ.