

ಅವನಂದರೆ ಹಾಗೆ….
ಸುಡು ಬಿಸಿಲಿನ ಝಳದಲ್ಲೂ
ಮಬ್ಬಿನ ಮುಂಜಾನೆಯಂತೆ…
ಮಂಜಿನ ಹನಿ ಸುರಿಸಿ
ತಂಗಾಳಿಯಾ ತಂಪ ಕರೆಸಿ
ಮಲ್ಲಿಗೆಯ ಘಮಲು ಸೂಸಿ
ಮನಸ್ಸಿಗೆ ಮುದ ನೀಡುವ
ಕಲಾವಿದ ಅವನು..!
ಅವನೆಂದರೆ ಹಾಗೆ…
ಆಸೆಗಳ ಬೇಲಿ ಕಸಿದು
ಕನಸುಗಳಿಗೆ ಕರಗದ
ಭಾವ ತುಂಬಿ…
ಬಣ್ಣದ ಗೆಜ್ಜೆ ಕಟ್ಟಿ ಮೆರೆಸುವ
ಕನಸುಗಾರ ಅವನು..!
ಅವನೆಂದರೆ ಹಾಗೆ..
ಒರಟು ಬಂಡೆಯ
ಕಲ್ಲಿನ ಹೃದಯದೊಳಗೆ
ಉಸಿರೆ’ನ್ನುವ ಪ್ರೀತಿಯ
ಹೂ ಅರಳಿಸಿ…
ಕಳ್ಳ ಗೋಪಿ ಕೃಷ್ಣನಂತೆ
ಒಲವಿನ ಬಲೆಯೊಳಗೆ ಬಂಧಿಸುವ
ಮುದ್ದು ಚೆಲುವ ಅವನು..!
ಅವನೆಂದರೆ ಹಾಗೆ..
ಕರಿ ನೆರಳಲೂ ಚಿತ್ರವ ಬಿಡಿಸಿ
ನವರಸಗಳಿಗೂ ರಸಿಕ’ತೆ ತುಂಬಿಸಿ
ರಂಜಿಸಿ ರಮಿಸಿ ತನ್ನೆಡೆಗೆ ಸೆಳೆದು
ಮನವ ಗೆದ್ದ ಚೋರನಂತೆ ಅವನು..!!
.ರೇಖಾ.ಡಿ
