

ಸಿದ್ಧಾಪುರ,ಜು.11- ತಾಲೂಕಿನಲ್ಲಿ ಕಳೆದ 30 ಗಂಟೆಗಳಲ್ಲಿ 60 ಮಿ.ಮೀ. ಮಳೆ ಬಿದ್ದಿದ್ದು ಈ ಮಳೆಯ ಪರಿಣಾಮ ಹೊಸೂರಿನ ಗೌರಿ ದ್ಯಾವಾ ನಾಯ್ಕ ಎನ್ನುವವರ ಮನೆ ಕುಸಿದಿದೆ.
ಹಸ್ವಂತೆಯಲ್ಲಿ ಕೊಟ್ಟಿಗೆ ಮನೆಗೆ ಹಾನಿಯಾಗಿದೆ.
ಕಳೆದ ವರ್ಷದ ಮಳೆಗೆ ಹೋಲಿಸಿದಾಗ ಈ ವರ್ಷ ಈವರೆಗೆ ಆದ ಮಳೆಯ ಪ್ರಮಾಣ ಕಡಿಮೆಯಾಗಿದೆ. ಈ ವರ್ಷ ಈವರೆಗೆ 1040.6 ಮಿ.ಮೀ. ಮಳೆಯಾಗಿದೆ.
ಶಾಲೆಗೆ ರಜೆ- ಬುಧವಾರ ಮತ್ತು ಗುರುವಾರ ಬೆಳಿಗ್ಗೆ ಸುರಿದ ಮಳೆಯ ಕಾರಣಕ್ಕೆ ನಗರದ ಖಾಸಗಿ ಶಾಲೆಯೊಂದಕ್ಕೆ ರಜೆ ಘೋಶಿಸಲಾಗಿತ್ತು. ಮಧ್ಯಾಹ್ನದ ನಂತರ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು ವಿಶೇಶ.
ವಿಶ್ವವಿದ್ಯಾಪೀಠಕ್ಕೆ ಸಹಕರಿಸಲು ಕೋರಿಕೆ
ಸಿದ್ದಾಪುರ;ಜು.11- ಗೋಕರ್ಣ ಅಶೋಕೆಯ ಮೂಲಮಠ ತಾಯಿಯಿದ್ದಂತೆ. ಅಲ್ಲಿ ಪ್ರಾರಂಭಿಸಲಾಗುತ್ತಿರುವ ವಿಶ್ವವಿದ್ಯಾಪೀಠ ಮಗುವಿನಂತೆ. ಮಗುವಿಗೆ ತಾಯಿ ಪೋಷಕಳಾದರೆ ತಾಯಿಗೆ ಮಗು ಪ್ರೇರಕ ಎಂದು ಮೂಲಮಠ ನಿಯೋಜಿತ ಅಧ್ಯಕ್ಷ ಪಡೀಲು ಮಹಾಬಲೇಶ್ವರ ಭಟ್ಟ ಹೇಳಿದ್ದಾರೆ.
ಅವರು ಇಲ್ಲಿಯ ಶ್ರೀಗುರುಜ್ಯೋತಿಯಲ್ಲಿ ಕರೆಯಲಾಗಿದ್ದ ಸಿದ್ದಾಪುರ ವಲಯ ಗುರಿಕ್ಕಾರರ ಸಭೆಯಲ್ಲಿ ಮುಖ್ಯ ವಕ್ತಾರರಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಆದಿಗುರು ಶಂಕರಾಚಾರ್ಯರು ಮೂರುಸಲ ಭೇಟಿ ನೀಡಿ ವಾಸಮಾಡಿದ ಪವಿತ್ರ ತಾಣದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿ ಕಾರ್ಯಯೋಜಿಸಿದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಶ್ರೀಗಳು ತಮ್ಮ ಗುರುಭವನವನ್ನೇ ಅದಕ್ಕೆ ಸಮರ್ಪಿಸಿದ್ದಾರೆ. ಶಂಕರರ ಕುರಿತಾದ ಥೀಂ ಪಾರ್ಕ್ ಸಹ ಇಲ್ಲಿ ತಲೆಯೆತ್ತಲಿದೆ. ಮಠೀಯ ವ್ಯವಸ್ಥೆಯಲ್ಲಿ ಸಾವಿರಾರು ಗುರಿಕ್ಕಾರರು ಕರ್ತವ್ಯ ನಿರ್ವಹಿಸುತ್ತಿದ್ದು ಅವರು ಶ್ರೀಮಠದ ಕಾರ್ಯಯೋಜನೆಗಳಿಗೆ ಪಂಚಾಗವಿದ್ದಂತೆ. ಮೂಲಮಠ, ವಿಶ್ವವಿದ್ಯಾಪೀಠಕ್ಕಾಗಿ ಸಹ ಗುರಿಕ್ಕಾರರು ಶ್ರಮಿಸುವಂತಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿ ಶಂಕರಾಚಾರ್ಯರಿಂದ ಅವಿಚ್ಛಿನ್ನವಾಗಿ ನಡೆದುಬಂದ ಗುರುಪರಂಪರೆಯ ವಿವರಣೆ ನೀಡಿದರು.
ಜು.13 ರಂದು ಪತ್ರಿಕಾ ದಿನಾಚರಣೆ
ಸಿದ್ದಾಪುರ,ಜು.11-
ಸ್ಥಳೀಯ ಪ್ರಶಾಂತಿ ಶಾಲೆಯ ಸಾಯಿಕಿರಣ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ, ಗುರುಮನೆ ದತ್ತಿನಿಧಿ ಪುರಸ್ಕಾರ ಹಾಗೂ ಪತ್ರಿಕಾ ವಿತರಕರಿಗೆ ಸನ್ಮಾನ ಜು13ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.
ವಿಜಯವಾಣಿ ಪತ್ರಿಕೆಯ ಹುಬ್ಬಳ್ಳಿ ಸ್ಥಾನಿಕ ಸಂಪಾದಕ ಮೋಹನ ಹೆಗಡೆ ಕಾರ್ಯಕ್ರಮ ಉದ್ಘಾಟಿಸುವರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಭಟ್ಟ ಹೊಸೂರು ಅಧ್ಯಕ್ಷತೆವಹಿಸುವರು. ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಭಟ್ಕಳ,ಸಿದ್ದಾಪುರ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ಪ್ರಶಾಂತಿ ಪ್ರೌಢಶಾಲಾ ಅಧ್ಯಕ್ಷ ಆರ್.ಜಿ.ಪೈ ಮಂಜೈನ್ ಉಪಸ್ಥಿತರಿರುತ್ತಾರೆ.
ಹಿರಿಯ ಯಕ್ಷಗಾನ ಕಲಾವಿದ ಹಾಗೂ ಯಕ್ಷಗಾನ ವೇಷಭೂಷಣ ತಯಾರಕ ಭಾಸ್ಕರ್‍ರಾವ್‍ರಿಗೆ ಗುರುಮನೆ ದತ್ತಿನಿಧಿ ಪುರಸ್ಕಾರ, ಪತ್ರಿಕಾ ವಿತರಕರಾದ ಮಾರುತಿ ಹಾಲದಕಟ್ಟಾ ಹಾಗೂ ವಸಂತ ಮಡಿವಾಳ ಹೊಸೂರು ಅವರನ್ನು ಸನ್ಮಾನಿಸಲಾಗುತ್ತದೆ. ತಾಲೂಕಿನ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನೀರಿಂಗಿಸುವಿಕೆ ಹಾಗೂ ಪರಿಸರದ ಮಹತ್ವ ಕುರಿತು ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ,ಸಿದ್ದಾಪುರ(ಉ.ಕ)
ದಿನಾಂಕ :11-07-2019 ರ ಸಿದ್ದಾಪುರ ಪೇಟೆಧಾರಣೆ
ಅ.ನಂ. ಹುಟ್ಟುವಳಿಯ ಹೆಸರು ಧಾರಣೆಗಳು (ಪ್ರತಿಕ್ವಿಂಟಲ್ಲಿಗೆ)
ಕನಿಷ್ಠ ಗರಿಷ್ಠ ಮಾದರಿ
1 ರಾಶಿs 30279 33309 32899
2 ತಟ್ಟಿಬೆಟ್ಟೆ 20399 27699 25899
3 ಕೆಂಪಗೋಟು 20099 21102 20270
4 ಬಿಳಿಗೋಟು 15899 17648 16499
5 ಚಾಲಿ 20869 21599 21499
6 ಕೋಕಾ 12899 19699 17619
7 ಕಾಳುಮೆಣಸು30689 31109 30869
ನೆಲೆಮಾಂವ್‍ನಲ್ಲಿ ಅಘನಾಶಿನಿ ಕಣಿವೆ ಉಳಿಸಿ ಸಮಾವೇಶ
ಜಿಲ್ಲೆಯ ಪರಿಸರ ರಕ್ಷಣೆಗೆ ಹೋರಾಡಲು ಜನಪ್ರತಿನಿಧಿಗಳಿಗೆ ಗಂಗಾಧರೇಂದ್ರ ಕರೆ
ಸಿದ್ಧಾಪುರ,ಜು.11-ಉತ್ತರಕನ್ನಡ ಜಿಲ್ಲೆಯ ಕೆನರಾ ವೃತ್ತದ ಅರಣ್ಯ ಪ್ರದೇಶವನ್ನು ಶರಾವತಿ ಅಭಯಾರಣ್ಯಕ್ಕೆ ಸೇರಿಸಿದ ಆದೇಶವನ್ನು ರದ್ದು ಮಾಡುವುದು ಸೇರಿದಂತೆ ಇತರ ಐದು ನಿರ್ಣಯಗಳನ್ನು ಅಘನಾಶಿನಿ ಕಣಿವೆ ಉಳಿಸಿ ಸಮಾವೇಶ ಅಂಗೀಕರಿಸಿದೆ.
ಶಿರಸಿ ರಾಗಿಹೊಸಳ್ಳಿ ಬಳಿ ಅಪಘಾತ
ಪುಂಡಲೀಕ ಶಾನಭಾಗ ಸಾವು,ಮೂವರಿಗೆ ಗಾಯ
ಇಂದು ಮಧ್ಯಾಹ್ನ ಶಿರಸಿ-ಕುಮಟಾ ರಸ್ತೆಯ ರಾಗಿಹೊಸಳ್ಳಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಲ್ಲಿಯ ಪುಂಡಲೀಕ ಶಾನಭಾಗ ನಿಧನರಾಗಿದ್ದಾರೆ. ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಈ ಅಪಘಾತದಲ್ಲಿ ಪುಂಡಲೀಕ ಸ್ಥಳದಲ್ಲೇ ಮೃತರಾಗಿದ್ದಾರೆ. ಚಾಲಕ ಯೋಗೀಶ್ ಶಾನಭಾಗ, ಅವರ ಪತ್ನಿ ಮಹಾಲಕ್ಷ್ಮೀ ಗಾಯಗೊಂಡರೆ ಇವರೊಂದಿಗಿದ್ದ ನಾರಾಯಣ ಶಾನಭಾಗ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಿದ್ಧಾಪುರದಿಂದ ಹೊರಟ ರಿಡ್ಜ್ ಕಾರು ಕುಮಟಾ ಕಡೆಯಿಂದ ಬರುತಿದ್ದ ಲಾರಿಗೆ ಮೂಕಾಮುಕಿ ಢಿಕ್ಕಿಯಾಯಿತು ಎನ್ನಲಾಗಿದೆ. ವಾಹನ ಮಾರಾಟಗಾರ ಯೋಗೀಶ್ ಕುಟುಂಬದ ಜೊತೆಗೆ ಗೋಕರ್ಣಕ್ಕೆ ಹೊರಟಿದ್ದರು ಎಂದು ಮಾಹಿತಿ ಲಭಿಸಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ರವಾನಿಸಲಾಗಿದ್ದು ಪುಂಡಲೀಕ ಶಾನಭಾಗರ ಶವವನ್ನು ಸಿದ್ಧಾಪುರಕ್ಕೆ ತರಲಾಗಿದೆ. ಮೃತರು, ಗಾಯಗೊಂಡವರೆಲ್ಲಾ ಸಿದ್ಧಾಪುರದವರಾಗಿದ್ದು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
