

ಜಿಲ್ಲೆಯ ನೆಲ-ಜಲಕ್ಕಾಗಿ ಹೋರಾಡಲು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಕರೆ
ಉತ್ತರಕನ್ನಡ ಜಿಲ್ಲೆಯ ಕೆನರಾ ವೃತ್ತದ ಅರಣ್ಯ ಪ್ರದೇಶವನ್ನು ಶರಾವತಿ ಅಭಯಾರಣ್ಯಕ್ಕೆ ಸೇರಿಸಿದ ಆದೇಶವನ್ನು ರದ್ದು ಮಾಡುವುದು ಸೇರಿದಂತೆ ಇತರ ಐದು ನಿರ್ಣಯಗಳನ್ನು ಅಘನಾಶಿನಿ ಕಣಿವೆ ಉಳಿಸಿ ಸಮಾವೇಶ ಅಂಗೀಕರಿಸಿದೆ.
ಬುಧವಾರ ಸಿದ್ಧಾಪುರ ತಾಲೂಕಿನ ನೆಲೆಮಾಂವಿನಲ್ಲಿ ಸ್ವರ್ಣವಲ್ಲಿ ಗಂಗಾಧರೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಜನಜಾಗೃತಿ ಸಮಾವೇಶದಲ್ಲಿ ಈ ನಿರ್ಣಯಗಳನ್ನು ಅಂಗೀಕರಿಸಿದ್ದು, ಜನಪ್ರತಿನಿಧಿಗಳು ಸಲ್ಲದ ಕಾರಣಗಳಿಗೆ ರಾಜೀನಾಮೆ ಕೊಡುವುದನ್ನು ಬಿಟ್ಟು ನೆಲ-ಜಲ ಸಂರಕ್ಷಣೆಯಂಥ ಉಪಯುಕ್ತ ವಿಚಾರಗಳಿಗೆ ಬದ್ಧರಾಗಿ ರಾಜೀನಾಮೆ ಕೊಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿರುವ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಲೆನಾಡಿನ ಪರಿಸರ ರಕ್ಷಣೆಯ ಅವರ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ನೆಲೆಮಾಂವಿನಲ್ಲಿ ವೃಕ್ಷಾರೋಪಣ ಮಾಡಿ ಸಭೆಯ ಸಾನ್ನಿಧ್ಯ ವಹಿಸಿದ್ದ ಸ್ವಾಮಿಗಳು ಶರಾವತಿ ಅಭಯಾರಣ್ಯಕ್ಕೆ ಕೆನರಾ ವೃತ್ತದ ಅರಣ್ಯ ಸೇರ್ಪಡೆಯಿಂದ ಉತ್ತರ ಕನ್ನಡದ ಜನಜೀವನಕ್ಕೆ ತೊಂದರೆಯಾಗುತ್ತದೆ. ಇಲ್ಲಿಯ ಜನಪ್ರತಿನಿಧಿಗಳು ಬೆಂಗಳೂರು,ದೆಹಲಿ ಮಟ್ಟದಲ್ಲಿ ಜಿಲ್ಲೆ, ಪಶ್ಚಿಮಘಟ್ಟದ ಪರಿಸರ ರಕ್ಷಣೆಗೆ ಕೆಲಸ ಮಾಡಬೇಕು ಎಂದು ತಾಕೀತು ಮಾಡಿರುವ ಅವರು ಕಾಳಿ, ಅಘನಾಶಿನಿ, ಬೇಡ್ತಿ ನದಿಗಳ ತಿರುವು ಯೋಜನೆ ಕೈಬಿಡಬೇಕು. ಸ್ಥಳಿಯ ಸಂಸ್ಥೆಗಳಲ್ಲಿ ಈ ಬಗ್ಗೆ ಠರಾವು ಮಾಡುವುದು ಸೇರಿದಂತೆ ಜಿಲ್ಲೆಯ ಪರಿಸರ ರಕ್ಷಣೆಗೆ ಕಠಿಬದ್ಧರಾಗಿರಲು ಸ್ಥಳಿಯರಿಗೆ ವಿನಂತಿಸಿದ್ದಾರೆ.

