ಸಿದ್ದಾಪುರ
ತಾಲೂಕಿನ ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ ಹೇರೂರು ತೇರಮನೆ-ಕಂಚಿಮನೆ ಕೂಡು ರಸ್ತೆಗೆ ಅಕ್ರಮವಾಗಿ ತಡೆಮಾಡಿರುವುದನ್ನು ತೆರವುಗೊಳಿಸುವಂತೆ ಕಂಚೀಮನೆ, ಅತ್ತಿಮುರುಡು, ಕೊಚಗೇರಿ ಮತ್ತಿತರ ಗ್ರಾಮೀಣ ಪ್ರದೇಶದ ಜನತೆ ಹೇರೂರಿನಲ್ಲಿ ಕಪ್ಪು ಪಟ್ಟಿ ಧರಿಸಿ ಮೌನ ಮೆರವಣಿಗೆ ನಡೆಸಿ ನಂತರ ಗ್ರಾಪಂ ಪಿಡಿಒ ಸುಬ್ರಹ್ಮಣ್ಯ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.
ಹಲವು ವರ್ಷಗಳಿಂದ ಈ ರಸ್ತೆ ಇದ್ದು ಏಕಾಏಕಿಯಾಗಿ ರಸ್ತೆಗೆ ಹೊಂಡ ಹೊಡೆದು ಸಂಚಾರ ಸ್ಥಗಿತಗೊಳಿಸಿದ್ದನ್ನು ಖಂಡಿಸಿ ಗ್ರಾಪಂ ಎದುರು ಜನತೆ ಪ್ರತಿಭಟಿಸಿದರು.
ಶಾಂತಿ ಸುವ್ಯವಸ್ಥೆಯನ್ನು ಸಾರ್ವಜನಿಕರು ಮಾತ್ರ ಕಾಪಾಡುವುದಲ್ಲ. ಆಡಳಿತ ನಡೆಸುವವರು ಕಾಪಾಡಬೇಕಾಗಿದೆ. ರಸ್ತೆ ವಿಚಾರದಲ್ಲಿ ಸ್ಥಳೀಯ ಆಡಳಿತ ನಿಷ್ಕ್ರೀಯವಾಗಿರುವುದಲ್ಲದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಕೂಡಲೇ ಸ್ಥಗಿತಗೊಳಿಸಿರುವ ರಸ್ತೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲಮಾಡಿಕೊಡಬೇಕು ಇಲ್ಲದಿದ್ದರೆ ಉಗ್ರಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಆಗ್ರಹಿಸಿ ಪಿಡಿಒ ರಿಗೆ ಮನವಿ ಸಲ್ಲಿಸಿದರು.
ರಸ್ತೆ ಸ್ಥಗಿತಗೊಳಿಸಿದ ಹೇರೂರು ತೇರಮನೆ ಸ್ಥಳಕ್ಕೆ ತಹಸೀಲ್ದಾರ ಗೀತಾ ಸಿ.ಜಿ.ಭೇಟಿ ನೀಡಿ ಪರಿಶೀಲಿಸಿ ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿದರು, ಅವರು ಇಲ್ಲಿ ಲಘುವಾಹನ ಸಂಚಾರಕ್ಕೆ ಅನುಕೂಲವಾಗುವಂತೆ 10ಅಡಿ ಅಗಲ ರಸ್ತೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲಮಾಡಿಕೊಡುವಂತೆ ಗ್ರಾಪಂ ಪಿಡಿಒ ಅವರಿಗೆ ಮೌಖಿವಾಗಿ ಆದೇಶ ನೀಡಿದರು.