

ಹಸಿರು ಸ್ವಾಮೀಜಿ ಎಂದೇ ಪ್ರಸಿದ್ಧರಾದ ಉತ್ತರ ಕನ್ನಡದ ಶಿರಸಿ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಶ್ರೀಸ್ವರ್ಣವಲ್ಲೀಯಲ್ಲಿ ಮಂಗಳವಾರ ಶ್ರೀವೇದ ವ್ಯಾಸ ಪೂಜೆ ನಡೆಸಿ 29ನೇ ಚಾತುರ್ಮಾಸ್ಯ ವ್ರತಾಚರಣೆ ಸಂಕಲ್ಪ ಕೈಗೊಂಡರು.
ವಿಕಾರಿ ಸಂವತ್ಸರದ ಆಷಾಢ ಪೌರ್ಣಿಮೆಯಿಂದ ಸೆ.13ರ ಭಾದ್ರಪದ ಪೌರ್ಣಿಮೆ ತನಕ ಶ್ರೀಮಠದಲ್ಲಿ ಪವಿತ್ರ ಚಾತುರ್ಮಾಸ್ಯ ವ್ರತಕ್ಕೆ ಶಿಷ್ಯರ ಸಮ್ಮುಖದಲ್ಲಿ ಸಂಕಲ್ಪ ಕೈಗೊಂಡರು. ಶ್ರೀಗಳು ವೇದವ್ಯಾಸರ ಪೂಜೆ ಬಳಿಕ ಸಮಸ್ತ ಶಿಷ್ಯರ ಪರವಾಗಿ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ದಂಪತಿಗಳಿಂದ ಪಾದುಕಾ ಪೂಜೆ ಸ್ವೀಕರಿಸಿದರು. ನಾಡಿನ ಹಲವಡೆಯಿಂದ ಆಗಮಿಸಿದ್ದ ಭಕ್ತರು ಮಹಾ ಮಂಗಳಾರತಿ, ತೀರ್ಥಪ್ರಸಾದ ಪ್ರಸಾದ ಭೋಜನ ಸ್ವೀಕರಿಸಿ ಪುನೀತರಾದರು.
ಶ್ರೀಮಠದಲ್ಲಿ ಸಮಸ್ತ ಶಿಷ್ಯರಿಂದ ಚಾತುರ್ಮಾಸ್ಯದ ಅವಧಿಯಲ್ಲಿ ಪ್ರತಿ ದಿನ ವಿವಿಧ ಸೀಮೆಗಳಿಂದ ಪಾದುಕಾ ಪೂಜೆ, ಭಿಕ್ಷಾ ಸೇವೆಗಳು, ಕುಂಕುಮಾರ್ಚನೆಗಳು ನಡೆಯಲಿದೆ. ಯಕ್ಷಗಾನ, ತಾಳಮದ್ದಲೆ ಸ್ವಸಹಾಯ ಸಮಾವೇಶ, ಮಹಾಭಾರತ ಪ್ರವಚನಗಳಂಥ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.
20ರಿಂದ ಸಂಕಷ್ಟಿ ದ್ವಾದಶ ಸಂಕಲ್ಪ
ಸಿದ್ದಾಪುರ:ಜು.16- ತಾಲೂಕಿನ ಇಟಗಿ ಕಲಗದ್ದೆಯಲ್ಲಿರುವ ಯಕ್ಷಗಾನ ಶ್ರೀ ನಾಟ್ಯ ವಿನಾಯಕ ದೇವಸ್ಥಾನದಲ್ಲಿ ಜು.20ರಿಂದ ಸಂಕಷ್ಟಿ ದ್ವಾದಶ ಎಂಬ ಪೂಜಾ ಕಾರ್ಯಕ್ರಮ ಆರಂಭಗೊಳ್ಳಲಿದೆ.
ಒಂದು ವರ್ಷ ಪರ್ಯಂತ ಹನ್ನೆರಡು ಸಂಕಷ್ಟಿಗಳಿಗೆ ಅಭಿಷೇಕ, ಅರ್ಚನೆ, ಅಲಂಕಾರ, ಗಣ ಹವನ, ಭಕ್ತಾದಿಗಳಿಗೆ ಪ್ರಸಾದ ಭೋಜನ, ಗೃಹಸ್ಥರಿಂದ ಉಪನಿಷತ್ ಪಾರಾಯಣ, ಅಷ್ಟಾಂಗ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಹುದು. ವಿವರಗಳಿಗೆ 9448756263ಗೆ ಎಂದು ದೇವಸ್ಥಾನದ ಮೊಕ್ತೇಸರ ವಿನಾಯಕ ಹೆಗಡೆ ಕಲಗದ್ದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾದರಿ ಚುನಾವಣೆ-
ನಾಣಿಕಟ್ಟಾ ಕಾಲೇಜಿನಲ್ಲಿ ವಿದ್ಯಾರ್ಥಿಸಂಸತ್ತಿಗೆ ಚುನಾವಣೆ
ರಮಾನಂದ ಟಿ ಗೌಡ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ
ಸಿದ್ದಾಪುರ ತಾಲೂಕಿನ ನಾಣಿಕಟ್ಟಾದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ನಡೆಯಿತು. ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಚುನಾವಣೆಯ ಎಲ್ಲಾ ಪ್ರಕ್ರಿಯೆಗಳನ್ನು ನಡೆಸಲಾಯಿತು.
ಅಧಿಸೂಚನೆ ಹೊರಡಿಸುವುದರಿಂದ ಪ್ರಾರಂಭಗೊಂಡು ನಾಮಪತ್ರ ಸಲ್ಲಿಕೆ, ಪರಿಶೀಲನೆ, ಅಭ್ಯರ್ಥಿಗಳಿಗೆ ಚಿಹ್ನೆ ನೀಡುವುದು, ಮತ ಪತ್ರ ಮುದ್ರಣ, ಮತಗಟ್ಟೆ ಅಧಿಕಾರಿಗಳ ನೇಮಕ, ಚುನಾವಣೆ, ಮತ ಎಣಿಕೆ ಎಲ್ಲವನ್ನೂ ಕ್ರಮಬದ್ಧವಾಗಿ ನಡೆಸಲಾಯಿತು.
