

ಅಘನಾಶಿನಿ ಕೊಳ್ಳದ ವ್ಯಾಪ್ತಿಯ ಸಿದ್ಧಾಪುರ ತಾಲೂಕಿನ ಒಟ್ಟೂ 26 ಗ್ರಾಮಗಳನ್ನು ಶಿವಮೊಗ್ಗ ಶರಾವತಿ ಅಭಯಾರಣ್ಯ ವ್ಯಾಪ್ತಿಗೆ ಸೇರ್ಪಡೆ ಮಾಡುವ ಪ್ರಸ್ತಾಪದ ಪ್ರಕ್ರೀಯೆ ನಡೆಯುತ್ತಿದೆ ಎಂದು ಕ್ಯಾದಗಿ ವಲಯ ಅರಣ್ಯಾಧಿಕಾರಿ ಹರೀಶ್ ತಿಳಿಸಿದ್ದಾರೆ.
ಇಂದು ಇಲ್ಲಿಯ ತಾ.ಪಂ. ಸಭಾಭವನದಲ್ಲಿ ನಡೆದ ಮಾಸಿಕ ಕೆ.ಡಿ.ಪಿ. ಸಭೆಗೆ ಮಾಹಿತಿ ನೀಡಿದ ಅವರು ಈ ವಿಷಯ ತಿಳಿಸಿದರು.
ಸಭೆಗೆ ಅರಣ್ಯ ಇಲಾಖೆಯ ಮಾಹಿತಿ ನೀಡಿದ ಅವರು ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ಗೆ 400 ಗಿಡಗಳಂತೆ ವಿತರಿಸಿದ್ದೇವೆ. ಈಗಲೂ ರೈತರಿಗೆ ಒಂದು ರೂಪಾಯಿ ಮತ್ತು 3 ರೂಪಾಯಿ ಬೆಲೆಯ ಗಿಡಗಳನ್ನು ಸಸ್ಯ ಉದ್ಯಾನಗಳಿಂದ ನೀಡುತಿದ್ದೇವೆ.
ಕಾಡುಪ್ರಾಣಿ ಹಾವಳಿಯ ಹಾನಿಗೆ ಪರಿಹಾರ ವಿತರಿಸಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರೀಯಿಸಿದ ತಾ.ಪಂ. ಅಧ್ಯಕ್ಷ ಸುಧೀರ್ ಗೌಡರ್ ವನ್ಯಮೃಗ ಹಾವಳಿಗೆ ಇಲಾಖೆ ನೀಡುವ ಪರಿಹಾರ ಅಲ್ಪ, ಅಕೇಶಿಯಾ ಮರಗಳಿಂದಾಗಿ ಕಾಡು ನಾಶವಾಗಿ ವನ್ಯಪ್ರಾಣಿಗಳ ಹಾವಳಿ ವಿಪರೀತವಾಗಿದೆ ಎಂದರು.
ಮಂಗಗಳಿಂದ ಅಡಿಕೆ, ಬಾಳೆ ಬೆಳೆಗಳಿಗೆ ಆಗುತ್ತಿರುವ ಹಾನಿ, ತೊಂದರೆ ತಪ್ಪಿಸಲು ಇಲಾಖೆ ಕ್ರಮ ಜರುಗಿಸಬೇಕು ಎಂದು ವಿವೇಕ ಭಟ್ ಕೋರಿದರು.
ಮಂಗನ ಹಾವಳಿ ತಡೆ, ಪರಿಹಾರ ಕಷ್ಟ, ಆದರೆ ಕಾಡುಕೋಣಗಳ ಹಾವಳಿ ತಡೆಯಲು ಮನವಿ ನೀಡಿದರೆ ಐಬಿಎಕ್ಸ್ ಹಾಕುವ ಮೂಲಕ ಕಾಡುಕೋಣಗಳ ತೊಂದರೆ ತಪ್ಪಿಸಬಹುದು ಎಂದು ವಿವರಿಸಿದರು.
