

(ಹುಚ್ಚಪ್ಪ ಮಾಸ್ತರ ಕುರಿತ ಒಂದು ಪದ್ಯ)
ಕಾಡಿನ ಮಕ್ಕಳ ಕತ್ತಲ ಕಣ್ಣಿಗೆ
ಹೊಸ ಲೋಕದ ಮಿಂಚ
ತಂದವರು..
ಕಲ್ಲು-ಮುಳ್ಳು, ಗಡ್ಡೆ-ಗೆಣಸು
ಬಿಲ- ಬಯಲಲೇ
ಬಸವಳಿದವರಿಗೆ
ಅಕ್ಷರ ಲೋಕದ ಬೆಳಕ
ತೋರಿ ಅರಿವಿನ
ಗೆರೆ ಮೂಡಿಸಿದವರು..
ಮಲೆ ಮಕ್ಕಳಂತೆಯೇ
ಚಿತ್ತಾರ, ಸೋಬಾನೆ
ಹಬ್ಬ- ಹರಿದಿನಗಳಿಗೂ
ಜೀವ ಕಳೆ ಬಂತು; ನಿಮ್ಮ
ತಾವಿನ ಗುರುತಲ್ಲಿ.
‘ಹಿರೇಮನೆ’ಯ
ಹಿರೀಕರಾಗಿ ನೀವು
ಕೊಟ್ಟ ಪ್ರೀತಿಗೆ, ನಿಮ್ಮ
ಮಮತೆಯ ರೀತಿಗೆ
ರೆಕ್ಕೆ ಬಿಚ್ಚಿ ನಲಿದ
ಕಾಡ ಹಕ್ಕಿಗಳೆಷ್ಟೋ…
ಮೌಢ್ಯ ಮೀರಿ
ಮಿಡಿದ ಮನಸಿಗೆ,
ಬಹಿಷ್ಕಾರ, ಬೆದರಿಕೆಯ
ಬಳುವಳಿಯೇ ಬಂದರೂ
ಬೆದರದೆ ತಣ್ಣಗೆ
ನಿಮ್ಮ ಪಾಡಿಗೆ ನೀವು
ಸವೆಸಿದಿರಿ ‘ಮಾಸ್ತರ’ ದಾರಿ..
ಹರೆಯ ಇಳಿದರೂ
ಏರುತ್ತಲೇ ಇರುವ
ನಿಮ್ಮ ಕಾಳಜಿಗೆ,
ಬೆಳಕ ತೋರುವ ಪರಿಗೆ
ನಿಮಗೆ ನೀವೇ ಸಾಟಿ.
ಜೀವ ಕಾರುಣ್ಯವ
ಸೋಕಿಸಿ;
ಹಾಡು-ಹಸೆಗೆ,
ಕಾಡ ಕೂಸಿಗೆ
ಚೆಲುವು- ಗೆಲುವು ತಂದ
ನಿಮಗೆ ಸಾವಿರದ ಶರಣು!
*ಶಶಿ ಸಂಪಳ್ಳಿ*
(‘ಮುತ್ತುಗ’ ಕವನ ಸಂಕಲನದಿಂದ)
