
ಶಾಸಕ ಬಿ.ನಾರಾಯಣ ರಾವ್ ಶನಿವಾರ ವಿಶ್ವಾಸ ಮತ ಯಾಚನೆಯ ಮೇಲೆ ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಈ ಮನುಷ್ಯನನ್ನು ನಾನು ಮೊದಲು ನೋಡಿದ್ದು 2003ರಲ್ಲಿ.
ಲೋಕಸಭಾ ಚುನಾವಣೆಗೆ ತಾಲೀಮು ನಡೆಸುತ್ತಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ದೆಹಲಿಯಲ್ಲಿ ಇಡೀ ದೇಶದ ಕಾಂಗ್ರೆಸ್ ಬ್ಲಾಕ್ ಮತ್ತು ಜಿಲ್ಲಾಧ್ಯಕ್ಷರ ಸಭೆ ಕರೆದಿದ್ದರು.( ಸಾಮಾನ್ಯವಾಗಿ ಪಕ್ಷದಲ್ಲಿ ಈ ಮಟ್ಟದ ಪದಾಧಿಕಾರಿಗಳ ಸಭೆ ಕರೆಯುವುದೇ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿಯೂ ಅದೇ ಕೊನೆಯ ಸಭೆ).
ಆ ಸಭೆಯಲ್ಲಿ ಭಾಗವಹಿಸಿದ್ದ ದಕ್ಷಿಣದ ರಾಜ್ಯಗಳ ಪದಾಧಿಕಾರಿಗಳಿಗೆ ದೊಡ್ಡ ತೊಡಕಾಗಿದ್ದು ಭಾಷೆ.
ಹಿಂದಿಯಲ್ಲಿ ನಡೆಯುತ್ತಿದ್ದ ಕಲಾಪದಲ್ಲಿ ಇವರೆಲ್ಲ ಮೂಕರು ಮತ್ತು ಕಿವುಡರು.
ಈ ಅವಕಾಶವನ್ನೇ ಬಳಸಿಕೊಂಡು ಗಮನಸೆಳೆದವರು ಬಿ.ನಾರಾಯಣ ರಾವ್.
“ಕಾಂಗ್ರೆಸ್ ಪಕ್ಷದ ಮುಖ್ಯ ಬಲ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಜಾತಿಗಳು. ಅವರ ಬೆಂಬಲ ಇಲ್ಲದೆ ಇದ್ದಾಗ ಕಾಂಗ್ರೆಸ್ ಸೋತಿದೆ. ಅವರ ಬಲ ಕಳೆದುಕೊಳ್ಳಬೇಡಿ’ ಎಂದು ನಿಜಾಮರ ನಾಡಿನ ನಿರರ್ಗಳ ಹಿಂದಿಯಲ್ಲಿ ಸೋನಿಯಾಗಾಂಧಿ ಅವರನ್ನು ನಾರಾಯಣ ರಾವ್ ಎಚ್ಚರಿಸಿದ್ದರು.
ಸೋನಿಯಾಗಾಂಧಿ ಬೆರಗಿನಿಂದ ಬಿಟ್ಟ ಕಣ್ಣಲ್ಲೇ ನಾರಾಯಣ ರಾವ್ ಅವರನ್ನು ನೋಡುತ್ತಲೇ ಇದ್ದದ್ದು ನನಗೆ ಈಗಲೂ ಸ್ಪಷ್ಟವಾಗಿ ನೆನಪಿದೆ.
ಇಂತಹ ಸಭೆಗಳಲ್ಲಿ ಸಾಮಾನ್ಯವಾಗಿ ಮೆರೆಯುವ ಹಿಂದಿವಾಲಾಗಳ ನಡುವೆ ನಮ್ಮ ಕನ್ನಡಿಗನೊಬ್ಬ ಎಲ್ಲರ ಗಮನಸೆಳೆದರಲ್ಲಾ ಎಂಬ ಖುಷಿ ನನಗೆ.
ಅದೇ ಖುಷಿಯಲ್ಲಿ ಆ ಘಟನೆಯನ್ನು ಆ ವಾರದ ನನ್ನ ಅಂಕಣದ ಕೊನೆಯಲ್ಲಿನ ವಾರೆನೋಟದಲ್ಲಿ ಬರೆದು ಮುಂದಿನ ಚುನಾವಣೆಯಲ್ಲಿ ಟಿಕೆಟ್ ಗ್ಯಾರಂಟಿ? ಎಂದು ಕಿಚಾಯಿಸಿದ್ದೆ.
(ನಮ್ಮ ಕಿಲಾಡಿ ನಾರಾಯಣ ರಾವ್ ಅಂಕಣದಲ್ಲಿನ ತಮಗೆ ಸಂಬಂಧಿಸಿದ ಭಾಗವನ್ನು ದೊಡ್ಡದಾಗಿ ಪೋಸ್ಟರ್ ಮಾಡಿಸಿ ತಮ್ಮಕಚೇರಿಯಲ್ಲಿ ಹಾಕಿದ್ದರಂತೆ. ಆದರೂ ಬಡಪಾಯಿ ನಾರಾಯಣ ರಾವ್ ಶಾಸಕರಾಗಲು ಅದರ ನಂತರ ಹದಿನೈದು ವರ್ಷ ಬೇಕಾಯಿತು)
ಮೊನ್ನೆ ಅವರ ಮಾತು ಕೇಳಿ ಇದೆಲ್ಲ ನೆನಪಾಯ್ತು. (ಶಾಸಕ ನಾ.ರಾ. ಬಗ್ಗೆ ಪತ್ರಕರ್ತ ಅಮ್ಮಿನಮಟ್ಟು ಬರೆದದ್ದು)
