

ಸಿದ್ಧಾಪುರದಲ್ಲಿ ಹೆಸರುಮಾಡಿ, ಆರೋಪ,ಆಪಾದನೆಗಳಿಗೆ ಗುರಿಯಾಗಿ ವರ್ಗಾವಣೆಯಾಗಿದ್ದ ಪಿ.ಎಸ್.ಐ. ನಿತ್ಯಾನಂದ ಗೌಡ ಮತ್ತೆ ಸುದ್ದಿಯಾಗಿದ್ದಾರೆ.
ಕಳೆದ ವಾರ ಕೋಟ ಪೊಲೀಸ್ ಠಾಣೆಯಿಂದ ಅಕ್ರಮ ಜಾನುವಾರು ಸಾಗಾಣಿಕೆ ಪ್ರಕರಣ ಭೇದಿಸಿ, ಇಲಾಖೆಯ ಅಧೀನ ಸಿಬ್ಬಂದಿಗಳ ಅಮಾನತ್ತಿಗೆ ಕಾರಣವಾದವರು ಬೇರೆ ಯಾರೂ ಅಲ್ಲ. ಅದೇ ಸಿದ್ಧಾಪುರದ ಹಳೆ ಪಿ.ಎಸ್.ಐ. ನಿತ್ಯಾನಂದ ಗೌಡ.
ನಿತ್ಯಾನಂದ ಗೌಡ ಜನರು, ಜನಪ್ರತಿನಿಧಿಗಳೊಂದಿಗೆ ಅಗೌರವದಿಂದ ನಡೆದುಕೊಳ್ಳುತ್ತಾರೆ ಎನ್ನುವ ಗುರುತರವಾದ ಆಪಾದನೆ ಮೇಲೆ ಇಲ್ಲಿಂದ ವರ್ಗಾವಣೆಯಾದವರು.
ಮರಳಿ ದಕ್ಷಿಣ ಕನ್ನಡಕ್ಕೆ ಅಕಾಲದಲ್ಲಿ ತೆರಳಿದ್ದ ನಿತ್ಯಾನಂದ ಗೌಡ ನಿಜಕ್ಕೂ ಇಲ್ಲಿಯ ಆರೋಪಕ್ಕೆ ಗುರಿಯಾದಂತೆ ಅಪ್ರಾಮಾಣಿಕರೋ, ಗರ್ವಿಯೋ ಬೇರೆ ವಿಚಾರ. ಆದರೆ ಈಗಿನ ಜಾನುವಾರು ಸಾಗಾಟ ಪ್ರಕರಣದಲ್ಲಿ ಪೊಲೀಸರ ಶಾಮೀಲಾತಿ ಭೇದಿಸಿರುವ ಪ್ರಕರಣದಲ್ಲಿ ನಾಲ್ಕೈದು ಪೇದೆಗಳು ಅಮಾನತ್ತಾಗುವಲ್ಲಿ ಶ್ರಮಿಸಿದವರು ನಿತ್ಯಾನಂದ ಗೌಡ.
ನಿತ್ಯಾನಂದ ಗೌಡರ ತನಿಖೆಯಿಂದ ಮಲೆನಾಡು,ಕರಾವಳಿಯಲ್ಲಿ ಸಾಗಿಸಲಾಗುತಿದ್ದ ಜಾನುವಾರು ಅಕ್ರಮ ದಂಧೆಗೆ ಪೊಲೀಸರೇ ನೆರವಾಗಿರುವುದನ್ನು ಭೇದಿಸಿದ ಪಿ.ಎಸ್.ಐ. ನಿತ್ಯಾನಂದ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಪ್ರಶಂಸೆ ಕೇಳಿ ಬಂದಿದೆ. ಇದೇ ವೇಳೆ ಪೊಲೀಸರು ಜಾನುವಾರು ಸಾಗಾಟ, ಕೋಮುಗಲಭೆಗಳಿಗೆ ಪರೋಕ್ಷವಾಗಿ ಬೆಂಬಲಿಸುವ ಸತ್ಯ ಹೊರಹಾಕಿರುವ ಬಗ್ಗೆ ಅವರಿಗೆ ಶ್ಲಾಘನೆ ದೊರೆತಿದೆ.
ನಿತ್ಯಾನಂದ ಗೌಡ ಕೋಮುವಾದಿಯೋ? ಬ್ರಷ್ಟರೋ ಸತ್ಯ ಯಾರಿಗೂ ಸ್ಫಷ್ಟವಿಲ್ಲ. ಆದರೆ ಅವರ ದಕ್ಷತೆಗೆ ಮಾತ್ರ ಆಗಾಗ ಪ್ರಶಂಸೆ ವ್ಯಕ್ತವಾಗುತ್ತಿರುವುದು ವಾಸ್ತವ. ಸಿದ್ಧಾಪುರದಲ್ಲಿ ಹೆಸರು ಮಾಡಿದ್ದ ನಿತ್ಯಾನಂದ ಗೌಡ ಮತ್ತು ಸಿ.ಪಿ.ಐ. ಜೊಯ್ ಅಂಥೋನಿ ಇಲ್ಲಿಂದ ಆಪಾದನೆ ಹೊತ್ತು ವರ್ಗಾವಣೆಯಾಗಿರುವುದು ಮಾತ್ರ ಮರೆಯದ ದುರಂತ.
ಜಿಲ್ಲಾಧಿಕಾರಿಗಳಿಂದ ಪ್ರಗತಿ ಪರಿಶೀಲನೆ
ನೀರಿಂಗಿಸುವ ಸ್ಥಳೀಯ ಜ್ಞಾನಕ್ಕೆ ಆದ್ಯತೆಗೆ ಸಲಹೆ
ಕೇವಲ ಕೆರೆಗಳ ಅಭಿವೃದ್ಧಿ ಮಾಡುವುದು ಮಾತ್ರವಲ್ಲ. ನೀರಿನ ಮೂಲದ ಸಂರಕ್ಷಣೆ, ಪುನರುಜ್ಜೀವನ, ಜಲ ರಕ್ಷಣೆ ಜನಜಾಗೃತಿ, ಹಸಿರೀಕರಣ ಮುಂತಾದವು ಇದರ ಹಿಂದಿನ ಉದ್ದೇಶ. ಇದರ ಜೊತೆಗೆ ನದಿಮೂಲದ ಸಂರಕ್ಷಣೆಗೂ ಗಮನ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಡಾ|ಹರೀಶಕುಮಾರ ಹೇಳಿದರು.
ಅವರು ಸೋಮವಾರ ಸಂಜೆ ತಾಪಂ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಬಳಿ ಕೆರೆಗಳ ಅಭಿವೃದ್ಧಿ ಕುರಿತಂತೆ ಪ್ರಶ್ನಿಸಿದಾಗ ಅವರ ಉತ್ತರಕ್ಕೆ ಪ್ರತಿಕ್ರಿಯಿಸಿ ಈಗಾಗಲೇ ರೇಲ್ವೆ, ವಿದ್ಯುತ್ ತಂತಿ ಮಾರ್ಗ, ರಸ್ತೆ ಮುಂತಾಗಿ ಹಲವು ಕಾರಣಗಳಿಂದ ಅರಣ್ಯ ಕಡಿಮೆಯಾಗುತ್ತಿದೆ. ಮರಗಿಡಗಳನ್ನು ಹೆಚ್ಚಿಸುವ ಕೆಲಸವಾಗಬೇಕು. ರೆವಿನ್ಯೂ ಜಾಗಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕಿದೆ. ಪದೇ ಪದೇ ಬೋರ್‍ವೆಲ್ ತೆಗೆಸುವ ಬದಲು ಇರುವ ಬೋರ್ ಗಳಿಗೆ ನೀರಿಂಗಿಸುವಂತಾಗಬೇಕು. ಸ್ಥಳೀಯವಾಗಿ ವಯಸ್ಸಾದವರಿಂದ ಅವರ ತಿಳುವಳಿಕೆ ಬಳಸಿಕೊಂಡು ಜಲಮೂಲ ಉಳಿಸುವ ಕೆಲಸಮಾಡಿ. ಬೆಂಗಳೂರಿನಲ್ಲಿ ಕೂತವರು ಇವನ್ನ ರೂಪಿಸಬೇಕೆಂದಿಲ್ಲ. ಯಾವುದು ಇಲ್ಲಿ ಉಪಯೋಗವಾಗುತ್ತದೋ ಅದನ್ನು ಮಾಡಿ. ಸರಕಾರಿ ಕಚೇರಿಗಳ ಬಾವಿಗಳಲ್ಲೂ ನೀರಿಂಗಿಸುವ ವ್ಯವಸ್ಥೆ ಮಾಡಿ ಎಂದರು.
