

ಹೆಲ್ಮೆಟ್ ಧರಿಸಿದ್ದ ಕಾರಣಕ್ಕೆ ಶಿಕ್ಷಕರೊಬ್ಬರು ಅಪಾಯದ ಅಪಘಾತದಿಂದ ಬಚಾವಾದ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಸೋಮುವಾರ ಸಿದ್ದಾಪುರ ಕಾನಗೋಡಿನ ಬಳಿ ನಡೆದ ಖಾಸಗಿ ಬಸ್ ಮತ್ತು ದ್ವಿಚಕ್ರವಾಹನ ಅಪಘಾತದಲ್ಲಿ ಅದೃಷ್ಟವಶಾತ್ ಬಚಾವಾದವರು ಕಾನಗೋಡಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ರಾಜಕುಮಾರ ನಾಯ್ಕ.
ಈ ಆರ್.ಆರ್.ನಾಯ್ಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಈಗ ಚೇತರಿಸಿಕೊಂಡಿದ್ದಾರೆ. ಹೆಲ್ಮೆಟ್ ಧರಿಸಿರದಿದ್ದರೆ ತಲೆಗೆ ಬಿದ್ದ ಏಟು ಪ್ರಾಣಾಂತಿಕವಾಗುವ ಅಪಾಯದ ಸಾಧ್ಯತೆಗಳಿದ್ದವು. ಸಮಯಪ್ರಜ್ಞೆ ಮತ್ತು ಹೆಲ್ಮೆಟ್ ನಿಂದಾಗಿ ಅಪಾಯದಿಂದ ಪಾರಾದ ರಾಜಕುಮಾರ ನಾಯ್ಕ ಆರೋಗ್ಯವಾಗಿದ್ದಾರೆ.
ಮರಬಿದ್ದು ಅರಣ್ಯ ಇಲಾಖೆ ಸಿಬ್ಬಂದಿಮೃತ್ಯು
ಕರ್ತವ್ಯ ನಿರತ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಮರದ ಕೆಳಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ 10 ರ ಸುಮಾರಿಗೆ ಸಿದ್ದಾಪುರದ ಮಾವಿನಗುಂಡಿ ಬಳಿ ನಡೆದಿದೆ.
ಮೃತ ನೌಕರರನ್ನು ಸಿದ್ದಾಪುರ ಹುಸೂರಿನ ಶಶಿಧರ ನಾರಾಯಣ ನಾಯ್ಕ ಎಂದು ಗುರುತಿಸಲಾಗಿದೆ.
ಕರ್ತವ್ಯ ನಿರತ ಸಿಬ್ಬಂದಿ ಮೇಲೆ ಮರ ಮುರಿದು ಬಿದ್ದ ವಿಷಯ ತಿಳಿಯುತ್ತಲೇ ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಧಾವಿಸಿದರಾದರೂ ಶಶಿಧರ ಸ್ಥಳದಲ್ಲೇ ಅಸುನೀಗಿದ್ದರು.
ಅರಣ್ಯ ಇಲಾಖೆಯ ಸಿಬ್ಬಂದಿಗಳು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತರ ಸಂಬಂಧಿಗಳೆಲ್ಲಾ ತಾಲೂಕಾ ಆಸ್ಫತ್ರೆ ಬಳಿ ಜಮಾಯಿಸಿದ್ದಾರೆ. ಶಶಿಧರ ಇಲಾಖೆಯ ಕ್ಷೇಮಾಭಿವೃದ್ಧಿ ನೌಕರ ಎಂದು ಕೆಲಸಮಾಡುತಿದ್ದರು.ಇಂದು ಬೆಳಿಗ್ಗೆ ಎಂದಿನಂತೆ ಇಲಾಖೆಯ ಮಾವಿನಗುಂಡಿ ತಪಾಸಣಾ ನಾಕಾದಲ್ಲಿ ಕರ್ತವ್ಯ ನಿರತರಾಗಿದ್ದಾಗಲೇ ಈ ದುರ್ಘಟನೆ ನಡೆದಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ.

