ಜುಲೈ 27, 28 : ಶಿರಸಿಯಲ್ಲಿ ಕೋಶ ಓದು ದೇಶ ನೋಡು ಬಳಗದಿಂದ
ಕಾರ್ನಾಡ್ ಕೃತಿಗಳ ಕುರಿತು ಸಂವಾದ ಮತ್ತು ಓದು ಅಭಿಯಾನದ ಸಮಾರೋಪ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಾಡಿನ ಹೆಮ್ಮೆಯ ನಾಟಕಕಾರ ಗಿರೀಶ್ ಕಾರ್ನಾಡ್ ಸ್ಮರಣೆಯಲ್ಲಿ ‘ಕೋಶ ಓದು, ದೇಶ ನೋಡು ಬಳಗ’ ಈ ಬಾರಿ ಕಾರ್ನಾಡ್ ಕೃತಿಗಳನ್ನು ಓದುವ, ಓದಿಸುವ ಅಭಿಯಾನ ಹಮ್ಮಿಕೊಂಡಿತ್ತು. ಕಳೆದ ಜೂನ್ ತಿಂಗಳ ಕೊನೆಯ ವಾರದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಚಾಲನೆ ಪಡೆದ ಅಭಿಯಾನ ಒಂದು ತಿಂಗಳು ಪೂರೈಸಿ, 27, 28 ಜುಲೈ 2019ರಂದು ‘ಕಾರ್ನಾಡರ ಕೃತಿಗಳೊಂದಿಗೆ ಸಮಕಾಲೀನ ಸಂವಾದ’ ಮತ್ತು ಸಮಾರೋಪಕ್ಕೆ ಸಿದ್ಧವಾಗಿದೆ.
ಈ ಅವಧಿಯಲ್ಲಿ ರಾಜ್ಯದಾದ್ಯಂತ ನೂರಾರು ಜನರು ಅಭಿಯಾನದ ಭಾಗವಾಗಿ ಕಾರ್ನಾಡ್ ಕೃತಿಗಳನ್ನು ಓದಿದ್ದಾರೆ ಮತ್ತು ಹಲವರು ಸಾಮಾಜಿಕ ಜಾಲತಾಣ ಹಾಗೂ ಸ್ಥಳೀಯ ಗುಂಪುಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೋಶ ಓದು, ದೇಶ ನೋಡು ಬಳಗವು ಕಳೆದ ಎರಡುವರ್ಷಗಳಿಂದ ಮಹತ್ವದ ಕೃತಿಗಳನ್ನು ಓದುವ, ಓದಿಸುವ ಮತ್ತು ಸಂವಾದ ನಡೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. 2017ರಲ್ಲಿ ನಿರಂಜನರ ಚಿರಸ್ಮರಣೆ ಕಾದಂಬರಿಯ ಓದು ಮತ್ತು ಕಯ್ಯೂರು ಭೇಟಿಯೊಡನೆ ಆರಂಭವಾದ ಅಭಿಯಾನ, ಆನಂತರ ಶಿವರಾಮ ಕಾರಂತರ ಚೋಮನ ದುಡಿ, ಖುಷ್ವಂತ್ ಸಿಂಗರ ಟ್ರೈನ್ ಟು ಪಾಕಿಸ್ತಾನ್, ಮಾಂಟೋ ಕಥೆಗಳು ಹಾಗೂ ಭೀಷ್ಮ ಸಹಾನಿಯವರ ತಮಸ್ ಕೃತಿಗಳ ಯಶಸ್ವಿ ಓದು? ಸಂವಾದ ನಡೆಸಿತ್ತು.
ಈ ಬಾರಿ ಕಾರ್ನಾಡ್ ನಿಧನರಾದ ಹಿನ್ನೆಲೆಯಲ್ಲಿ ಹಾಗೂ ಕಾರ್ನಾಡರ ಕೃತಿಗಳ ಸಮಕಾಲೀನತೆಯನ್ನು ಚರ್ಚಿಸುವ ನಿಟ್ಟಿನಲ್ಲಿ ಅವರ ಕೃತಿಗಳನ್ನು ಸಂವಾದಕ್ಕೆ ಆಯ್ದುಕೊಳ್ಳಲಾಗಿತ್ತು.
ಗಿರೀಶ್ ಕಾರ್ನಾಡರು ತನ್ನ ಬಾಲ್ಯ ಕಳೆದ ಶಿರಸಿಯಲ್ಲಿ ಈ ಬಾರಿಯ ಓದು ಅಭಿಯಾನದ ಭಾಗವಾಗಿ ಸಂವಾದ ನಡೆಯಲಿದ್ದು, ಜುಲೈ 27ರ ಶನಿವಾರ ಬೆಳಗ್ಗೆ 10 :30 ಕ್ಕೆ ಚಾಲನೆ ಪಡೆಯಲಿದೆ. ಕಾರ್ಯಕ್ರಮವು ಯಲ್ಲಾಪುರ ರಸ್ತೆಯಲ್ಲಿರುವ ದೇವನಿಲಯದ ನಿಸರ್ಗಧಾಮದಲ್ಲಿ ನಡೆಯಲಿದೆ.
ಶಾಂತಾರಾಮ ನಾಯಕ ಹಿಚ್ಕಡ ಅಧ್ಯಕ್ಷತೆಯಲ್ಲಿ, ಡಾ.ರಾಜೇಂದ್ರ ಚೆನ್ನಿ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಡಾ.ಹಸೀನಾ ಖಾದ್ರಿ ಹಾಗೂ ಮುನೀರ್ ಕಾಟಿಪಳ್ಳ ಅವರ ಉಪಸ್ಥಿತಿ ಇರಲಿದೆ. ಅನಂತರ ಶ್ರೀಪಾದ ಭಟ್ ನಿರ್ದೇಶನದಲ್ಲಿ ಕಾರ್ನಾಡರ ನಾಟಕಗಳ ವಾಚಿಕಾಭಿನಯ ನಡೆಯಲಿದೆ. ಎರಡೂ ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಿಂದ ಬರುವ 1ಂಂ ಕ್ಕೂ ಹೆಚ್ಚು ಓದುಗರು ಕಾರ್ನಾಡರ ಕೃತಿಗಳ ಕುರಿತು ವಿವಿಧ ಆಯಾಮಗಳ ಚರ್ಚೆ ನಡೆಸಲಿದ್ದಾರೆ.
ಜುಲೈ 28ರ ಇಳಿ ಮಧ್ಯಾಹ್ನ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಡಾ..ಎಂ.ಜಿ. ಹೆಗಡೆ ಸಮಾರೋಪ ಮಾತುಗಳನ್ನಾಡಲಿದ್ದಾರೆ ಹಾಗೂ ಡಾ.ಅನಸೂಯಾ ಕಾಂಬ್ಳೆ ಉಪಸ್ಥಿತಿ ಇರಲಿದೆ.
ಚಿಂತನ ರಂಗ ಅಧ್ಯಯನ ಕೇಂದ್ರ ಹಾಗೂ ಸಹಯಾನ, ಕೆರೆಕೋಣ ಸಹಯೋಗದಲ್ಲಿ ಕೋಶ ಓದು ದೇಶ ನೋಡು ಬಳಗವು ಈ ಕಾರ್ಯಕ್ರಮಗಳನ್ನು ಆಯೋಜಿಸಿದೆ.