

ಸಿದ್ಧಾಪುರದಲ್ಲಿ
ಭಯಹುಟ್ಟಿಸುತ್ತಿರುವ ಮರಗಳು
ಸಿದ್ದಾಪುರ ತಾಲೂಕಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೇ ಹಳೆ ಮರ ಬಿದ್ದು ಮೃತರಾದ ನಂತರ ತಾಲೂಕಿನೆಲ್ಲೆಡೆ ಅಪಾಯದ ಮರಗಳ ಬಗ್ಗೆ ಮಾತು, ಚರ್ಚೆ ಪ್ರಾರಂಭವಾಗಿದೆ. ಕಾಡು,ಜಮೀನು, ಮನೆಗಳ ಸಮೀಪದ ಮರಗಳ ಅಪಾಯಕ್ಕೆ ಆಯಾ ಪ್ರದೇಶ, ಜವಾಬ್ದಾರಿಯ ಜನರೇ ಕಾರಣ. ಆದರೆ, ರಸ್ತೆ ಅಕ್ಕಪಕ್ಕದ ಮರಗಳು, ಶಾಲಾ-ಕಾಲೇಜುಗಳು, ಸಾರ್ವಜನಿಕ ಪ್ರದೇಶ,ಸರ್ಕಾರಿ ಕಛೇರಿಗಳ ವ್ಯಾಪ್ತಿಯ ಮರಗಳ ಬಗ್ಗೆ ಸಂಬಂಧಿಸಿದವರೇ ಜವಾಬ್ಧಾರರಾಗಬೇಕಾಗುತ್ತದೆ.
ನಗರದ ನಿರ್ಮಾಣ ಹಂತದ ಮಿನಿವಿಧಾನ ಸೌಧದ ಆವರಣದ ಒಂದು ಮರ, ಹಾಳದಕಟ್ಟಾದ ಅಂಧರಶಾಲೆ ಬಳಿಯ ಹೆಸ್ಕಾಂ ಟಿ.ಸಿ. ಮೇಲೇ ಚಾಚಿರುವ ಮರ. ಹೀಗೆ ನಗರದಲ್ಲಿ ಅನೇಕ ಕಡೆ ಅಪಾಯದ ಮರಗಳಿವೆ ಎಂದು ಸಾರ್ವಜನಿಕ ಚರ್ಚೆ ನಡೆಯುತ್ತಿದೆ. ಆದರೆ ಅವುಗಳನ್ನು ತೆಗೆಯುವವರ್ಯಾರು? ಈ ಮಳೆಗಾಲದ ಮೊದಲು ಕಂದಾಯ ಇಲಾಖೆ ನೀಡಿದ ಪಟ್ಟಿಯಂತೆ ನಗರದ ಅಪಾಯದ ಮರಗಳನ್ನು ಅರಣ್ಯ ಇಲಾಖೆ ಕಡಿದು ತೆಗೆದಿದೆ. ಆದರೆ ಸರ್ಕಾರಿ ಇಲಾಖೆಗಳ ಆವರಣ, ಪ.ಪಂ. ವ್ಯಾಪ್ತಿಯ ಒಳಗಿರುವ ಅಪಾಯದ ಮರಗಳನ್ನು ತೆಗೆಯಲು ಅರಣ್ಯ ಇಲಾಖೆಗೆ ಅನುಮತಿ ಕೇಳಿದರೆ ಕೊಡಬಹುದು ಆದರೆ ಅರಣ್ಯ ಇಲಾಖೆಯೇ ಅವುಗಳನ್ನು ತೆಗೆಯುವುದು ಕಷ್ಟ ಎನ್ನುವುದು ಇಲಾಖೆಯ ಅಭಿಪ್ರಾಯ.
ಸೊರಬ ರಸ್ತೆಯಲ್ಲಿ ಟಿ.ಸಿ. ಮೇಲೆರಗಬಹುದಾದ ಅಂಧರ ಶಾಲೆಯ ಆವರಣದ ಮರ, ಅದಕ್ಕೆ ತಾಕಿಕೊಂಡಿರುವ ವಿದ್ಯುತ್ ಮಾರ್ಗ ಅಲ್ಲಿಯ ವಿದ್ಯಾರ್ಥಿಗಳು, ನೆರೆಹೊರೆಯವರಿಗೆ ಅಪಾಯ ತರುವ ಸಾಧ್ಯತೆ ಹೆಚು.್ಚ ಅದೇ ರಸ್ತೆಯಲ್ಲಿ ಕೆಲವು ಮರಗಳು ರಸ್ತೆಗೆ ವಾಲಿಕೊಂಡಿರುವುದರಿಂದ ಸಾಯಂಕಾಲ ಬೀದಿ ದೀಪ ಕಾಣದ ಸಮಸ್ಯೆ ಇದೆ ಎನ್ನುವುದು ಈ ಭಾಗದ ಸಾಮಾಜಿಕ ಕಾರ್ಯಕರ್ತ ಇಲಿಯಾಸ್ ಶೇಖ್ ಅಭಿಪ್ರಾಯ.
ಹೀಗೆ ನಗರದಲ್ಲಿ ಮತ್ತು ತಾಲೂಕಿನಾದ್ಯಂತ ಅರಣ್ಯ ಇಲಾಖೆ ಮತ್ತು ಹೆಸ್ಕಾಂ ನ ವ್ಯಾಪ್ತಿಯಲ್ಲಿ ಅನೇಕ ಮರಗಳು ಸಾರ್ವಜನಿಕರ ಪ್ರಾಣಕ್ಕೆ ಅಪಾಯ ತರುವಂತಿವೆ ಎನ್ನುವ ಸಾರ್ವಜನಿಕರು ಅವುಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಹೇಳದೆ ಸಂಬಂಧಿಸಿದವರು ಪರವಾನಗಿ ಪಡೆದು ಮರಗಳನ್ನು ತೆರವು ಮಾಡುವ ಅಗತ್ಯವಂತೂ ಈಗ ಅನಿವಾರ್ಯತೆಯಾಗಿದೆ.
ಮಳೆಗಾಲಪೂರ್ವ ಕಂದಾಯ ಇಲಾಖೆಯ ಮನವಿಯಂತೆ ಅಪಾಯದ ಮರಗಳನ್ನು ಕತ್ತರಿಸಿ ತೆಗೆದಿದ್ದೇವೆ. ಈಗಲೂ ಇಲಾಖೆಯ ಹಿರಿಯ ಅಧಿಕಾರಿಗಳು ತಾಲೂಕಿನಲ್ಲಿರುವ ಅಪಾಯದ ಮರಗಳ ಬಗ್ಗೆ ವರದಿ ಕೇಳಿದ್ದಾರೆ. ನಾನಾ ಇಲಾಖೆಗಳು ತಮ್ಮ ವ್ಯಾಪ್ತಿಯ ಅಪಾಯದ ಮರಗಳ ತೆರವಿಗೆ ಅನುಮತಿ ಪಡೆದು ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.
– ಅಜೀಜ್ ಅಹಮದ್
ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ಧಾಪುರ


