

ನೆನಪಾಗುವೆ ಯಾಕೆ ನನಗೆ

ಮಡುವುಗಟ್ಟುವ ಕಣ್ಣಿನಲ್ಲಿ
ಬಿಂಬವಾಗಿ ನಿಲ್ಲುವೆ ನೀನು
ತಲ್ಲೀನನಾಗಿ ನಾನಾಗ
ಮತ್ತೆ ಮರೆಯುವೆ ಮರೆಯುವುದನ್ನು..
ಅಷ್ಟಕ್ಕೂ ನೀನು
ನೆನಪಾಗುವೆ ಯಾಕೆ ನನಗೆ
ಇಷ್ಟಕ್ಕೂ ಏನು
ಪಿಸುಗುಡುವೆ ಹೇಳದೆ ಒಳಗೆ..
ಕೋಪ ತಾಪ ಚಡಪಡಿಕೆ
ಅಂಗಲಾಚುವ ಮನವರಿಕೆಗಳು
ಎಲ್ಲವೂ ನಿನ್ನ ಪ್ರೀತಿಯ
ನನ್ನ ಸಾವಿರ ಮುಖಗಳು..
ಸುಮ್ಮನೆ ಧ್ಯಾನಿಸುತ್ತಾ
ಕಣ್ಣು ಮುಚ್ಚಿ ಕುಳಿತರೂ
ಬಂದಂತೆ ಆಗುವುದು
ಸದಾ ನೀ ನನ್ನೆದುರು..


ನಿನ್ನ ಆವರಿಸಿದ
ಆ ಕೆಂಪು ಚೂಡಿ
ತೂಗುಯ್ಯಾಲೆ ಆಡುವ
ಕೆಂಚು ಮುಂಗುರುಳ ಮೋಡಿ..
ಈ ಒರಟು ಕೈಗಳಲ್ಲಿ
ನಿನ್ನ ಪುಟ್ಟ ಅಂಗೈ
ಹಿಡಿದರೂ ಸಾಕು ಒಂಚೂರು
ಕಚಗುಳಿ ಆಗುವುದು ಮೈ..
ನಾವಿಟ್ಟ ಹೆಜ್ಜೆಯ ಗುರುತು
ಮೂಡಲಿಲ್ಲ ಕಲ್ಲುಬಂಡೆಯ ಮೇಲೂ
ನೆರೆಯಾಗಿ ಕೊಚ್ಚಿ ಹೋದರೂ
ಒರೆಸಲಾಗಲಿಲ್ಲ ನೆನಪುಗಳ ಆಮೇಲೂ..
ನಡೆದುದರ ಪರಾಮರ್ಶೆ
ಮುಂದೆ ನಡೆಯುವಂತೆ ಭಾಸ
ವಿನಾ ಕಾರಣ ಹಾಗೆ
ಸದ್ದಿಲ್ಲದೆ ಜೀವದ ಅಭ್ಯಾಸ..
*ಬಸವರಾಜ ಕಾಸೆ*
7829141150
pr***********@***il.com
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






