

.ಮಲೆನಾಡಿನಲ್ಲಿ ಹೆಚ್ಚಿದ ಹಂದಿ ಕಾಟ
ಮಲೆನಾಡಿಗೂ ಕಾಡು ಹಂದಿಗೂ ನಂಟು.
ಮಲೆನಾಡಿನ ಪರಿಸರದಲ್ಲಿ ಕಾಡು ಹಂದಿ ವಾಸ್ತವ ಆಗಿರುವುದರಿಂದ ಮಲೆನಾಡಿನ ಸಾಹಿತ್ಯ ಸಂಗೀತ, ಸಿನೆಮಾಗಳಲ್ಲೂ ಕಾಡು ಹಂದಿ ಒಂದು ಪಾತ್ರ. ಯೋಗರಾಜ್ ಭಟ್ ರ ಗಾಳಿಪಟದಲ್ಲಿ ಕಾಡು ಹಂದಿ ಒಂದು ಪಾತ್ರವಾಗಿರುವುದನ್ನು ಮರೆಯುವಂತಿಲ್ಲ.
ತೇಜಸ್ವಿಯವರ ಸಾಹಿತ್ಯದಲ್ಲಂತೂ ಕಾಡು ಹಂದಿ ಪಾತ್ರ, ಮಾಂಸ, ರುಚಿ, ವಾಸನೆಯಾಗಿ ಅಲ್ಲಲ್ಲಿ ಕಂಡು ಬರುತ್ತದೆ. ಮಲೆನಾಡಿನ ಹಂದಿಗಳು ನಿರುಪದ್ರವಿಗಳು ಎನ್ನುತ್ತಾರೆ ಆದರೆ, ಹಂದಿಯ ಗಟ್ಟಿತನ, ಸಿಟ್ಟು, ಹುಂಬತನ ಅದನ್ನು ನೋಡಿದವರಿಗೇ ಗೊತ್ತು. ಮಲೆನಾಡಿನ ಹಂದಿ ಸೋಯಿಬೇಟೆ, ಬಲೆಬೇಟೆ ಹಿಂದೆ ಮರೆಯದ ಮನರಂಜನೆ ಈಗ ಇತಿಹಾಸ.
ಈಗ ಕಾಡು ಹಂದಿ ಸೇರಿದಂತೆ ವನ್ಯ ಮೃಗಗಳ ಬೇಟೆ ನಿಷಿದ್ಧ ಹಾಗಾಗಿ ಕಾಡು ಹಂದಿ ಈಗ ಉಪದ್ರವಿಯಾಗಿ ಬದಲಾಗಿದೆ.
ಚಿತ್ರನಟ ನೀರ್ನಳ್ಳಿ ಗಣಪತಿಯವರ ತೋಟದಲ್ಲಿ ತೆಂಗು-ಬಾಳೆ ಅಡಿಕೆ ನಾಶ ಮಾಡಿದ ಹಂದಿಯ ಉಪಟಳದ ಬಗ್ಗೆ ರಾಘವೇಂದ್ರ ಬೆಟ್ಟಕೊಪ್ಪ ತಮ್ಮ ಬರಹದಲ್ಲಿ ಪ್ರಸ್ಥಾಪಿಸಿದ್ದಾರೆ.
ಇಲ್ಲಿ ಸಿದ್ದಾಪುರದಲ್ಲಿ ರೈತರಿಗೆ ಹಂದಿಗಳು ನೀಡುತ್ತಿರುವ ಉಪಟಳದ ವರದಿಯಿದೆ. ಕಾಡುಹಂದಿ ವರ್ಷಪೂರ್ತಿ ರೈತರಿಗೆ ಕೊಡುವ ಉಪಟಳಕ್ಕೆ ರೈತರು ಕಂಗಾಲಾಗಿದ್ದಾರೆ. ಕಾಡುಹಂದಿ ಮತ್ತು ಕಾಡುಕೋಣಗಳು, ಕೋಡಗಗಳ ಉಪಟಳದಿಂದ ಬೇಸತ್ತು ಕೃಷಿ ಮಾಡುವುದೇ ಬೇಡ ಎನ್ನುವ ತೀರ್ಮಾನಕ್ಕೆ ಬಂದ ರೈತರೂ ಇದ್ದಾರೆ.
ಮಲೆನಾಡಿನ ಕೋತಿ, ಕಾಡುಹಂದಿ, ಕಾಡುಕೋಣಗಳಿಂದ ಮಲೆನಾಡು, ಕರಾವಳಿ ತಾಲೂಕುಗಳಲ್ಲಿ ಕೊಟ್ಯಂತರ ಹಾನಿ ಸಂಭವಿಸುತ್ತಿದ್ದರೂ ಅರಣ್ಯ ಇಲಾಖೆ ನೂರು, ಸಾವಿರ ಲೆಕ್ಕದಲ್ಲಿ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದೆ.
ನಾವೇ ಉತ್ತಮರು ಎಂದು ಒಂದು ಅವಧಿಗೆ ಎರಡ್ಮೂರು ಮುಖ್ಯಮಂತ್ರಿಗಳಾಗುವವರು, ಹೊಸ ಸಂಪುಟ, ಸಚಿವಾಲಯದ ಸದಸ್ಯರಾಗುವವರು ಮಲೆನಾಡಿನ ಈ ಸಮಸ್ಯೆ ಕೇಳಲೇಬೇಕಾದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ.
ಸಿದ್ದಾಪುರ
ತಾಲೂಕಿನ ಇಟಗಿ ಗ್ರಾಪಂ ವ್ಯಾಪ್ತಿಯ ತಾರಗೋಡ ಆಲಳ್ಳಿಯ ಸುಬ್ರಾಯ ಹೆಗಡೆ ಯವರ ಅಡಕೆ ತೋಟಕ್ಕೆ ಕಾಡು ಹಂದಿಗಳ ಹಿಂಡು ದಾಳಿ ನಡೆಸಿ 40ಕ್ಕೂ ಹೆಚ್ಚು ಅಡಕೆ ಹಾಗೂ ಬಾಳೆಸಸಿಗಳನ್ನು ನಾಶಪಡಿಸಿವೆ.
ಕಳೆದ ಮೂರ್ನಾಲ್ಕು ದಿನಗಳಿಂದ ಅಡಕೆ ತೋಟಕ್ಕೆ ದಾಳಿ ನಡೆಸುತ್ತಿರುವ ಕಾಡು ಹಂದಿಗಳು ಅಡಕೆ ಹಾಗೂ ಬಾಳೆ ಸಸಿಗಳನ್ನು ನಾಶಪಡಿಸಿವೆ. ಇನ್ನೊಂದೆಡೆ ಮಂಗಗಳು ಅಡಕೆ ಮಿಳ್ಳೆಗಳನ್ನು ನಾಶಪಡಿಸುತ್ತಿವೆ. ದಿನದಿಂದ ದಿನಕ್ಕೆ ರೈತರು ಬೆಳೆದ ಬೆಳೆಗಳೆಲ್ಲ ಕಾಡುಪ್ರಾಣಿಗಳ ಪಾಲಾಗುತ್ತಿರುವುದರಿಂದ ರೈತರ ಸಂಕಷ್ಟ ಹೆಚ್ಚಾಗುತ್ತಿದೆ. ಈ ಕುರಿತು ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಬೆಳೆ ಹಾನಿಯ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಹಾಗೂ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸುಬ್ರಾಯ ಹೆಗಡೆ ಆಲಳ್ಳಿ ಆಗ್ರಹಿಸಿದ್ದಾರೆ.

