

ಕೊಂಡ್ಲಿಯ ಯುವಕ ಶಶಿ ಈ ಚಿತ್ರದ ನಟ,ನಿರ್ಧೇಶಕ, ನಿರ್ಮಾಪಕ!
ಆ.02 ರಂದು ತೆರೆಗೆ ಬರಲಿದೆ ಹಳ್ಳಿ ಹುಡ್ಗನ ವಜ್ರಮುಖಿ
ಉತ್ತರ ಕನ್ನಡ ಜಿಲ್ಲೆಯ ಜನರು ಸಾಹಸಿಗಳು ಎಂಬುದು ಈ ಜಿಲ್ಲೆಯ ಪ್ರತಿಭೆಗಳ ಬಿರುದು.
ಹಳ್ಳಿಯಿಂದ ದೆಲ್ಲಿವರೆಗೆ, ಪಾತಾಳದಿಂದ ಚಂದ್ರಲೋಕದ ವರೆಗೂ ಉತ್ತರಕನ್ನಡದ ಪ್ರತಿಭೆಗಳ ವ್ಯಾಪ್ತಿಯಿದೆ.
ಶಶಿ, ಶಶಿಕುಮಾರ ಎನ್ನುವ ಸಿದ್ಧಾಪುರದ ಯುವಕ ಈಗ ಚಂದನವನದ ಉದಯೋನ್ಮುಖ ಪ್ರತಿಭೆಯಾಗಿ ಈ ಹೆಗ್ಗಳಿಕೆಗಳನ್ನು ವಿಸ್ತರಿಸಿದ್ದಾರೆ.
ಸಿನೆಮಾ ಜಗತ್ತು ಬಣ್ಣದ ಜಗತ್ತು. ಈ ಕ್ಷೇತ್ರದ ಆಕರ್ಷಣೆ, ಆಸಕ್ತಿ ಇಲ್ಲದವರೇ ಇಲ್ಲ. ಆದರೆ, ಅಲ್ಲಿ ಉಳಿದು ಬೆಳೆಯುವವರು ಬೆರಳೆಣಿಕೆಯ ಜನ. ಮಾಧ್ಯಮಕ್ಷೇತ್ರದಲ್ಲಿ ತುಂಬಿತುಳುಕುತ್ತಿರುವ ಉತ್ತರಕನ್ನಡದ ಪ್ರತಿಭೆಗಳು ಸಿನೆಮಾಯಾನ ಮಾಡಿಯೂ ಯಶಸ್ಸಿಗೆ ಪ್ರಯತ್ನಿಸಿದ್ದಾರೆ, ಆದರೆ ಈ ಕ್ಷೇತ್ರದಲ್ಲಿ ಉಳಿದು ಬೆಳೆದವರು ವಿರಳ.
ಆದರೆ ಈ ವಿದ್ಯಮಾನಕ್ಕೆ ಅಪವಾದವಾಗಿರುವ ಕತೆಯೊಂದು ಇಲ್ಲಿದೆ.
ಶಶಿಕುಮಾರ ತಾಳಗುಪ್ಪ ಎನ್ನುವ ಉತ್ತರ ಕನ್ನಡದ ಮಣ್ಣಿನ ಮಗ ಈಗ ಚಂದನವನದ ಹೊಸ ಪ್ರತಿಭೆ. ಕೆಲವು ವರ್ಷಗಳ ಕೆಳಗೆ ತೆರೆಗೆ ಬಂದ ಸಿಗಂದೂರು ಚೌಡೇಶ್ವರಿ ಮಹಾತ್ಮೆ ಎನ್ನುವ ಧಾರ್ಮಿಕ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ನಟ,ನಿರ್ಮಾಪಕ, ನಿರ್ಧೇಶಕ ಶಶಿಕುಮಾರ ತಾಳಗುಪ್ಪಾ ಹಿಂದೆ ಶಶಿಕೊಂಡ್ಲಿ ಎಂದೇ ಪರಿಚಿತ. ಗ್ರಾಮೀಣ ಪರಿಸರದ ಹಳ್ಳಿ ಹುಡ್ಗ ಶಶಿಕೊಂಡ್ಲಿ ಕನ್ನಡ ಚಿತ್ರರಂಗ ಸೇರಿದ್ದೇ ಸಾಹಸದ ಕತೆ. ಸಿದ್ಧಾಪುರದ ಕೊಂಡ್ಲಿಯಿಂದ ಬೆಂಗಳೂರಿನ ಗಾಂಧಿನಗರಕ್ಕೆ ಸೈಕಲ್ ಹೊಡೆದ ಶಶಿ ಹೆಸರು ಮಾಡಿದ್ದು ಸಿಗಂದೂರು ಚೌಡೇಶ್ವರಿ ಚಿತ್ರದಿಂದ.
ಈಗ ಇವರ ಎರಡನೇ ಚಿತ್ರ ವಜ್ರಮುಖಿ ಆಗಷ್ಟ್ 2 ರಂದು ಬಿಡುಗಡೆಯಾಗುತ್ತಿದೆ. ಹಿಂದೆ ಧಾರ್ಮಿಕ ಚಿತ್ರ ಮಾಡಿ ಹೆಸರುಮಾಡಿದ್ದ ಶಶಿ ಈಗ ನಟಿ ನೀತು ನೇತೃತ್ವದಲ್ಲಿ ಮಹಿಳಾಪ್ರಧಾನ ಹಾರರ್ ಚಿತ್ರ ಮಾಡಿದ್ದಾರೆ.
ನೀತು ಗೆ ಇದು ಹೊಸ ಬಗೆಯ ಚಿತ್ರ, ನಟ,ನಿರ್ಮಾಪಕ, ನಿರ್ಧೇಶಕ ಶಶಿಗೂ ಇದು ಹೊಸ ಬಗೆಯ ಚಿತ್ರವೇ ಯಾಕೆಂದರೆ, ಇದು ಕುತೂಹಲದ ಹಾರರ್ ಚಿತ್ರ.ಹಗಲಿಗಿಂತ ರಾತ್ರಿಯ ಸಮಯದಲ್ಲೇ ಈ ಚಿತ್ರದ ಚಿತ್ರೀಕರಣ ನಡೆದಿದ್ದು ಹೆಚ್ಚು ಯಾಕೆಂದರೆ ಈ ಚಿತ್ರಪೂರ್ತಿ ಕತ್ತಲರಾತ್ರಿಯದೇ ವೈಭವ.
ಇಂಥ ಸಿನೆಮಾ ಮಾಡಿರುವ ಶಶಿಕೊಂಡ್ಲಿ ಯಾನೆ ಶಶಿ ತಾಳಗುಪ್ಪಾಗೆ ಈ ಚಿತ್ರ ಗೆಲ್ಲುವ ಭರವಸೆ ಇದೆ. ಪ್ರಯತ್ನದ ಜೊತೆಗೆ ಸಿಗಂದೂರು ಚೌಡೇಶ್ವರಿ ಆಶೀರ್ವಾದವಿದೆ ಎನ್ನುವ ಶಶಿ ಇದೇ ನಂಬಿಕೆಯಿಂದಲೇ ಹಿಂದಿನ ಸಿ.ಚೌ.ಮಹಾತ್ಮೆ ಚಿತ್ರದಲ್ಲಿ ಗೆದ್ದಿದ್ದಾರೆ.
ಈಗಲೂ ಸಿಗಂದೂರು ಚೌಡೇಶ್ವರಿ ಸಿನಿ ಕಂಬೈನ್ಸ್ ಎನ್ನುವ ಹೆಸರಲ್ಲೇ ಚಿತ್ರ ಮಾಡಿರುವ ಶಶಿ ಈಬಾರಿಯೂ ಯಶಸ್ಸಿನ ಕನಸಿನಲ್ಲಿದ್ದಾರೆ. ಸಿದ್ಧಾಪುರದ ಕೊಂಡ್ಲಿಯಿಂದ ಗಾಂಧಿನಗರ ಅಲ್ಲಿಂದ ತಾಳಗುಪ್ಪಾ ಹೀಗೆ ಬೆಂಗಳೂರನ್ನು ಮಲೆನಾಡಿಗೆ ಜೋಡಿಸಿರುವ ಶಶಿ ಉತ್ತರ ಕನ್ನಡದ ಪ್ರತಿಭೆ ಎಂಬುದು ಅನೇಕರಿಗೆ ತಿಳಿದಿಲ್ಲ. ಕೆಲಸ, ಸಾಧನೆಯಿಂದ ತಾನ್ಯಾರು ಎಂದು ತಿಳಿಯಬೇಕು ಎನ್ನುವ ಶಶಿ ವಜ್ರಮುಖಿಯಲ್ಲಿ ಗೆದ್ದು ಮತ್ತಷ್ಟು ಉತ್ತಮ ಚಿತ್ರಗಳನ್ನು ನೀಡುವಂತಾಗಲಿ ಎನ್ನುವುದು ಸಮಾಜಮುಖಿ ಹಾರೈಕೆ.
ಒಂದು ಮರ ಕಡಿದರೆ ಹತ್ತು ಗಿಡ ನೆಡಿ
ಮಲೆನಾಡು, ಕರಾವಳಿ ಭಾಗದ ಜನರ ವಿಪರೀತ ಕಟ್ಟಿಗೆ ಅವಲಂಬನೆಯಿಂದ ಇಲ್ಲಿಯ ಕಾಡು ನಾಶವಾಗಿದ್ದು, ನಶಿಸಿದ ಮೇಲೆ ಬುದ್ಧಿ-ವಿವೇಕ ಬರುವಂತೆ ಈಗಲಾದರೂ ಅರಣ್ಯ ಪರಿಸರ ಉಳಿಸುವ ಮನೋಭಾವ ವೃದ್ಧಿಯಾಗುತ್ತಿರುವುದು ಉತ್ತಮ ಲಕ್ಷಣ ಎಂದು ಎ.ಪಿ.ಎಂ.ಸಿ. ಅಧ್ಯಕ್ಷ ಕೆ.ಜಿ.ನಾಗರಾಜ್ ಶ್ಲಾಘಿಸಿದ್ದಾರೆ.
ಇಲ್ಲಿಯ ಎ.ಪಿ.ಎಂ.ಸಿ.ಯಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಗಿಡ ನೆಡುವ ಜೊತೆಗೆ ಅದರ ರಕ್ಷಣೆ,ಸಂರಕ್ಷಣೆಯ ಕಾಳಜಿ ವಹಿಸುವುದು ಮುಖ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸ್ಥಳಿಯ ವರ್ತಕರ ಸಂಘದ ಅಧ್ಯಕ್ಷ ಆರ್.ಎಸ್. ಹೆಗಡೆ ಮಾತನಾಡಿ ಅರಣ್ಯ ನಾಶ, ಜಾಗತಿಕ ತಾಪಮಾನ ಏರಿಕೆಯಿಂದ ವಾತಾವರಣದ ವೈಪರೀತ್ಯಗಳು ಆಗುತಿದ್ದು ಒಂದು ಮರ ಕಡಿದರೆ ಹತ್ತು ಮರ ನೆಡು ಎನ್ನುವ ನಮ್ಮ ಪಾರಂಪರಿಕ ವಿವೇಕ ಆಚರಿಸುವ ಮೂಲಕ ಈ ತೊಂದರೆಗೆ ಪರಿಹಾರ ಕಂಡುಕೊಳ್ಳಬೆಕು ಎಂದರು.
ನಾಗರಾಜ್ ನಾಯ್ಕ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಎ.ಪಿ.ಎಂ.ಸಿ. ಕಾರ್ಯದರ್ಶಿ ಎಂ.ಜಿ.ನಾಯ್ಕ ವಂದಿಸಿದರು.
ವನಮಹೋತ್ಸವದಲ್ಲಿ ನೆಟ್ಟ ಗಿಡಗಳೆಲ್ಲಾ ಬದುಕಿದ್ದರೆ ಸಿದ್ಧಾಪುರ ದೊಡ್ಡ ಕಾಡಾಗುತಿತ್ತು. ಈಗ ಕೃತಕ ಗಾಳಿ, ಶುದ್ಧ ನೀರು ಸಂಗ್ರಹಿಸುವ ಕಾಲಬಂದಿದೆ. ಒಬ್ಬ ಮನುಷ್ಯನಿಗೆ ದಿನವೊಂದಕ್ಕೆ ಬೇಕಾಗುವ 1800 ರೂ. ಮೌಲ್ಯದ ಗಾಳಿಯನ್ನು ಮರಗಳು ನಮಗೆ ಉಚಿತವಾಗಿ ನೀಡುತ್ತಿವೆ. ಇದು ಕಾಡು, ಅರಣ್ಯ, ಪರಿಸರದ ಮಹತ್ವಕ್ಕೆ ಸಾಕ್ಷಿ
- ಡಾ.ಶ್ರೀಧರ ವೈದ್ಯ


