
ಆಸ್ಫತ್ರೆ ವೈದ್ಯೇತರ
ಗುತ್ತಿಗೆ ನೌಕರರ ಗೋಳು
ಭದ್ರತೆ,ವೇತನ ಕೇಳುವುದೇ ತಪ್ಪು!
ತಾಲೂಕಾ ಆಸ್ಫತ್ರೆಗಳಲ್ಲಿ ಸ್ವಚ್ಛತೆ, ಇನ್ನಿತರೆ ಕೆಲಸಗಳಿಗೆ ಸರ್ಕಾರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡವರ ಗೋಳು ಹೇಳತೀರದಾಗಿದೆ.ಆಸ್ಫತ್ರೆ ಸ್ವಚ್ಛತೆ ಇನ್ನಿತರ ಕೆಳದರ್ಜೇಯ ಕೆಲಸ ಮಾಡುವ ಈ ನೌಕರರ ಮೇಲೆ ದಬ್ಬಾಳಿಕೆ ಹಿಂಸೆ ನಡೆದರೂ ಕೇಳುವವರಿಲ್ಲದ ಸ್ಥಿತಿ ಇಲ್ಲಿದೆ.
ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕಾ ಸರ್ಕಾರಿ ಆಸ್ಫತ್ರೆಗಳಲ್ಲಿರುವ ಈ ಕಾರ್ಮಿಕರು ವೇತನ ಕೇಳುವಂತಿಲ್ಲ. ತಮ್ಮ ಪಿ.ಎಫ್. ನೌಕರರ ಜೀವವಿಮೆ ವ್ಯವಸ್ಥೆ ಏನೂ ಪಡೆಯದ ಜೀತದ ಆಳುಗಳಂತೆ ಇವರನ್ನು ನಡೆಸಿಕೊಳ್ಳಲಾಗುತ್ತಿದೆ. ವಿದ್ಯಾವಂತರಲ್ಲದ, ಆರ್ಥಿಕ ಸ್ಥಿತಿ ಉತ್ತಮವಾಗಿರದ ಈ ನೌಕರರು ಹೊಟ್ಟೆಪಾಡಿಗಾಗಿ ಈ ಕೆಲಸ ಮಾಡುತ್ತಾರಾದರೂ ಅವರಿಗೆ ಅವರ ಹಕ್ಕು, ಸೌಲಭ್ಯಗಳ ಅರಿವಿಲ್ಲ. ಅವರ ಕೆಲಸ ಪಡೆಯುವ ಆಸ್ಫತ್ರೆಗಳು ಕೂಡಾ ಅವರ ಹಿತಾಸಕ್ತಿ ಗಮನಿಸುತ್ತಿಲ್ಲ. ಕಳೆದ ನಾಲ್ಕು ತಿಂಗಳುಗಳಿಂದ ವೇತನ ದೊರೆಯದ ತೊಂದರೆ ಮತ್ತು ಸೇವಾ ಭದ್ರತೆ ಬಗ್ಗೆ ಮುಷ್ಕರ ನಡೆಸಿದ ಈ ಡಿ. ದರ್ಜೆಯ ನೌಕರರ ಅಹವಾಲು ಕೇಳುವವರಿರಲಿಲ್ಲ. ಈ ಸ್ಥಿತಿ ಬರೀ ಸಿದ್ಧಾಪುರ ತಾಲೂಕಾಆಸ್ಪತ್ರೆಯ ದುಸ್ಥಿತಿಯಲ್ಲ ಇಡೀ ಜಿಲ್ಲೆಯಲ್ಲಿ ಕಳೆದ ಅವಧಿಗೆ ಹೊರಗುತ್ತಿಗೆ ನೌಕರರನ್ನು ಪೂರೈಸಿದ್ದ ಕುಮಟಾ ಮೂಲದ ಮಧುರಾ ಎಂಟರ್ ಪ್ರೈಸಸ್ ಕಳೆದ ನಾಲ್ಕು ತಿಂಗಳುಗಳಿಂದ ಈ ಸಿಬ್ಬಂದಿಗಳಿಗೆ ವೇತನ ಪಾವತಿಸಿಲ್ಲ. ವಿಚಿತ್ರವೆಂದರೆ ಸರ್ಕಾರ ಈ ಮಧುರಾ ಎಂಟರ್ ಪ್ರೈಸಸ್ ಗೇ ಕಳೆದ 2018 ರ ಡಿಸೆಂಬರ್ ನಿಂದ ಹಣ ಪಾವತಿಸಿಲ್ಲ.
ಈ ನೌಕರರಿಗೆ ಪಿ.ಎಫ್. ಹಣ ಮತ್ತು ನೌಕರರ ವಿಮೆ ಹಣ ಪಾವತಿಸುವ ಬಗ್ಗೆ ದಾಖಲೆ ಇದೆ. ಆದರೆ, ಈ ಹಣ ಸಂಬಂಧಿಸಿದ ಇಲಾಖೆಗಳಿಗೆ ಜಮಾ ಆಗಿದೆಯೋ ? ಅದರ ಪ್ರಯೋಜನ ಈ ನೌಕರರಿಗೆ ದೊರೆಯುವುದೋ ಇವ್ಯಾವ ವಿಚಾರಗಳ ತಿಳುವಳಿಕೆಯೂ ಈ ನೌಕರರಿಗಿಲ್ಲ!
ಈ ಬಗ್ಗೆ ಕೇಳಿದರೆ ಕೆಲಸದಿಂದ ತೆಗೆಯುವ ಹೆದರಿಕೆ. ಸರ್ಕಾರ ಮತ್ತು ಹೊರಗುತ್ತಿಗೆ ಏಜೆನ್ಸಿಗಳ ತಪ್ಪಿನಿಂದ ಸಿದ್ಧಾಪುರದಲ್ಲಿ 12 ಜನರು ತೊಂದರೆಗೊಳಗಾಗಿದ್ದರೆ ಜಿಲ್ಲೆಯಾದ್ಯಂತ ಇಂಥ ನೂರಾರು ನೌಕರರಿದ್ದಾರೆ ಎನ್ನಲಾಗುತ್ತಿದೆ. ಈ ಹೊರಗುತ್ತಿಗೆ ನೌಕರರ ಜವಾಬ್ಧಾರಿ, ಮೇಲ್ವಚಾರಣೆ ಜಿಲ್ಲಾ ಅರೋಗ್ಯಾಧಿಕಾರಿಗಳ ಜವಾಬ್ಧಾರಿ. ಆದರೆ ಈ ಅಧಿಕಾರಿ ಯಾರ ಪೋನ್ ಕರೆ ಎತ್ತುವ ಆಸಾಮಿಯಲ್ಲ! ಒಂದೆಡೆ ಸರ್ಕಾರದ ರಗಳೆ ಮತ್ತೊಂದೆಡೆ ಏಜೆನ್ಸಿಯ ಕಣ್ಣುಮುಚ್ಚಾಲೆ ಇವರೊಂದಿಗೆ ಡಿ.ಎಚ್.ಓ. ಚೆಲ್ಲಾಟ. ಇಂಥ ದುಸ್ಥಿತಿಯಲ್ಲಿ ಸಿಲುಕಿ ನಲುಗುತ್ತಿರುವ ಈ ನೌಕರರ ತೊಂದರೆಗೆ ಸ್ಫಂದಿಸಲು ಅಸಂಘಟಿತ ನೌಕರರ ಸಂಘಟನೆಗಳೂ ಇಲ್ಲ. ಇಂಥ ತೊಂದರೆ, ರಗಳೆಗಳಿಂದ ನಲುಗಿರುವ ಉತ್ತರ ಕನ್ನಡ ಜಿಲ್ಲೆಯ ತಾಲೂಕಾಆಸ್ಫತ್ರೆಗಳ ಹೊರಗುತ್ತಿಗೆ ನೌಕರರು ನಾಳೆ ಶುಕ್ರವಾರ ಜಿ.ಪಂ. ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ನಿನ್ನೆ ಸಿದ್ದಾಪುರದಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಮನವಿ ನೀಡಿದ್ದ ಈ ನೌಕರರು ಇಂದು ಕೆಲಸ ಮಾಡದೆ ಮುಷ್ಕರ ನಡೆಸಿದರು. ಮುಷ್ಕರ ಹಕ್ಕೊತ್ತಾಯ ಮಾಡಿದರೆ ಕೆಲಸದಿಂದ ತೆಗೆಯುತ್ತಾರೆ ಎಂದು ಹೆದರಿಸುತ್ತಿರುವ ಈ ಅಸಹಾಯಕ ನೌಕರರ ನೆರವಿಗೆ ಬರುವವರ್ಯಾರು? ಎನ್ನುವುದೇ ಪ್ರಶ್ನೆಯಾಗಿದೆ.
