ಉತ್ತರ ಕನ್ನಡ ಜಿಲ್ಲೆಯೊಂದಿಗೆ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಮುಂದುವರಿದಿದ್ದು ಇಂದು ಬಹುತೇಕ ತಾಲೂಕುಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಶಿಸಲಾಗಿದೆ. ಮರಧರೆಗುರುಳುತ್ತಿರುವುದು, ನೀರು, ರಸ್ತೆ, ಮನೆ ತುಂಬುತ್ತಿರುವುದರಿಂದ ಅಂಕೋಲಾ, ಕುಮಟಾ, ಹೊನ್ನಾವರಗಳಲ್ಲಿ ಕೆಲವೆಡೆ ಜನರಿಗೆ ಪುನರ್ವಸತಿ ವ್ಯವಸ್ಥೆ ಮಾಡಲಾಗಿದೆ.
ಸಿದ್ಧಾಪುರದ ಹೆಮ್ಮನಬೈಲ್ ಮತ್ತು ಕಲ್ಯಾಣಪುರ ಗ್ರಾಮಗಳಲ್ಲಿ ಮನೆಗಳು ಜಲಾವೃತ್ತವಾಗಿದ್ದು ಎರಡೂ ಗ್ರಾಮಗಳ ಸಮೀಪದ ಶಾಲೆಗಳಲ್ಲಿ ಗಂಜಿಕೇಂದ್ರ ಪ್ರಾರಂಭಿಸಲಾಗಿದೆ.
ಇಂದು ಮುಂಜಾನೆ ಶಿರಸಿ ರಸ್ತೆಯ ಕೆಲವೆಡೆ ಮರಬಿದ್ದುದರಿಂದ ಸಾಗರ-ಶಿರಸಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಶಿರಸಿ, ಕುಮಟಾ, ಅಂಕೋಲಾ ಮಾರ್ಗಗಳಲ್ಲಿ ನೀರು ರಸ್ತೆ ಮುಳುಗಿಸಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಕೆಲವೆಡೆ ಮನೆಗಳು ಕುಸಿದಿದ್ದು ಕೋಟ್ಯಾಂತರ ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾಗಿದೆ. ಸೇತುವೆ,ತೂಗುಸೇತುವೆಗಳ ಮೇಲೆ ನೀರು ಸೇರುತ್ತಿರುವುದರಿಂದ ಸಂಚಾರವ್ಯವಸ್ಥೆ ಸ್ಥಗಿತವಾಗಿದೆ. ಗಾಳಿ,ಮಳೆಗೆ ಸಿಕ್ಕ ತೂಗುಸೇತುವೆಗಳು ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿವೆ. ಜಿಲ್ಲಾಡಳಿತ ಪರಿಹಾರ ಕ್ರಮಗಳ ಬಗ್ಗೆ ಮುತುವರ್ಜಿವಹಿಸಿದ್ದು ಆಯಾ ತಾಲೂಕುಗಳ ತಹಸಿಲ್ದಾರರ ಮೂಲಕ ಸೂಕ್ತ ವ್ಯವಸ್ಥೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ.