

ಫೇಸ್ಬುಕ್, ವ್ಯಾಟ್ಸ್‍ಆಪ್ ಸೇರಿದ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಅಪರಾಧ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಈ ಬಾರಿಯ ಸರದಿ ಸಿದ್ಧಾಪುರದ ಕಂಚಿಕೈ ಮೂಲದ ಪ್ರಮೋದ್ ಹೆಗಡೆಯದು.
ಆಕಾಶ್ ಭಟ್ ಎನ್ನುವ ಸುಳ್ಳು ಫೇಸ್‍ಬುಕ್ ಖಾತೆ ತೆರೆದು ಮಹಿಳೆಯರು, ಅಮಾಯಕರನ್ನು ವಂಚಿಸುತಿದ್ದ ಸಿದ್ಧಾಪುರ ಮೂಲದ ಆಕಾಶ್ ಭಟ್ ಯಾನೆ ಪ್ರಮೋದ್ ಹೆಗಡೆ ವಂಚನೆ ಇಂದು ಬಯಲಾಗಿದೆ.
ಜುಲೈ 25 ರಂದು ಸೈಬರ್ ಕ್ರೈಂ ವಿಭಾಗದಲ್ಲಿ ದೂರು ದಾಖಲಿಸಿರುವ ಬೆಂಗಳೂರಿನ ಮಹಿಳೆಯೊಬ್ಬರ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಪ್ರಮೋದ್ ಹೆಗಡೆಯ ವಂಚನೆಯ ಪ್ರಕರಣ ಪತ್ತೆಯಾಗಿದ್ದು ಆರೋಪಿ ಹಾಲಿ ಬೆಂಗಳೂರು ವರ್ತೂರು ವಾಸಿ ಕಂಚಿಕೈ ಪ್ರಮೋದ್ ಹೆಗಡೆ ಯಿಂದ 6-7 ಲಕ್ಷ ಮೌಲ್ಯದ ಆಭರಣ, ವಸ್ತು ವಶಪಡಿಸಿಕೊಂಡಿದ್ದಾರೆ.
ಇದೇ ಒಂದೆರಡು ತಿಂಗಳುಗಳ ಅವಧಿಯಲ್ಲಿ ಇಂಥ ಪ್ರಕರಣಗಳಲ್ಲಿ ಉತ್ತರ ಕನ್ನಡ ಮೂಲದವರೇ 4 ಜನ ಬಂಧನಕ್ಕೊಳಗಾಗಿರುವುದು ಆತಂಕದ ವಿಚಾರ. ಈ ಖದೀಮರು ಫೇಸ್ಬುಕ್‍ನಲ್ಲಿ ನಕಲಿ ಖಾತೆ ಸೃಷ್ಟಿಸಿಕೊಂಡು ಅಮಾಯಕರು ವಿಶೇಶವಾಗಿ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಾರೆ. ಹೀಗೆ ಮಹಿಳೆಯರಿಗೆ ಮಂಕುಬೂದಿ ಎರಚುವ ದುಷ್ಟರು ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುವುದಲ್ಲದೆ ಅವರಿಂದಲೇ ಹಣ, ಆಭರಣ ಕಿತ್ತು ಹಿಂಸಿಸುತ್ತಾರೆ.
