ರಾಜ್ಯದಲ್ಲೇ ಅತ್ಯಧಿಕ ಮಳೆ ದಾಖಲಿಸಿದ ಸಿದ್ಧಾಪುರ (ಉ.ಕ.) ತಾಲೂಕು ಸೇರಿದಂತೆ ರಾಜ್ಯದ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಮಳೆ ತುಸು ತಗ್ಗಿದರೂ ಪ್ರವಾಹದ ಸ್ಥಿತಿ ಮುಂದುವರಿದಿದೆ.
ಕರಾವಳಿಯನ್ನು ಉತ್ತರಕರ್ನಾಟಕದೊಂದಿಗೆ ಜೋಡಿಸುವ ಮಲೆನಾಡಿನ ಬಹುತೇಕ ರಸ್ತೆಗಳೆಲ್ಲಾ ಮರಬಿದ್ದು,ಧರೆಕುಸಿದು ಸಂಪರ್ಕ ಕಡಿದುಕೊಂಡಿವೆ. ಉತ್ತರಕನ್ನಡದಲ್ಲಿ ಹಳಿಯಾಳದಿಂದ ಪ್ರಾರಂಭವಾದ ಸೇತುವೆ ಮೇಲೆ ನೀರು ನಿಂತ ಸ್ಥಿತಿ ಅನೇಕ ಕಡೆ ಮುಂದುವರಿದಿದ್ದು ಯಲ್ಲಾಪುರ ತಾಲೂಕಿನ ಶಾಲ್ಮಲಾ ನದಿಯ ಬೇಡ್ತಿ ಸೇತುವೆ ಕುಸಿದು ಬಿದ್ದ ಪರಿಣಾಮ ಶಿರಸಿ-ಯಲ್ಲಾಪುರ ರಸ್ತೆ ಸಂಪರ್ಕ ಕಡಿದುಹೋಗಿದೆ.
ಮಲೆನಾಡಿನ ಡ್ಯಾಮ್‍ಗಳು ತುಂಬಿ ನೀರು ಬಿಡುವ ಅನಿವಾರ್ಯತೆ ಸೃಷ್ಟಿಯಾಗಿರುವುದರಿಂದ ಕರಾವಳಿಯಲ್ಲಿ ಪ್ರವಾಹದ ಭೀತಿ ಆವರಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೇ ನಿರಾಶ್ರಿತರ ಸಂಖ್ಯೆ 4ಸಾವಿರ ದಾಟಿದ್ದು ರಾಜ್ಯದಲ್ಲಿ ಈವಾರ ನಿರಾಶ್ರಿತರಾದವರ ಸಂಖ್ಯೆ 40 ಸಾವಿರ ದಾಟಿದೆ.
ಈ ತೊಂದರೆ ಹಿನ್ನೆಲೆಯಲ್ಲಿ ಮಾಜಿ ಸ್ಫೀಕರ್ ಕಾಗೋಡು ತಿಮ್ಮಪ್ಪ ತಮ್ಮ ಅನಾರೋಗ್ಯ, ವೈದ್ಯರ ಎಚ್ಚರಿಕೆ ಮಧ್ಯೆ ಹೊಸನಗರದ ರಿಪ್ಪನ್‍ಪೇಟೆ,ಸಾಗರದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಮಾಡಿ ಸಂತೃಸ್ತರ ಅಹವಾಲು ಕೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿರುವ ಹಾಲಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ಬೆಳಿಗ್ಗೆ ಸಿದ್ದಾಪುರ ತಾಲೂಕಿನ ಕಲ್ಯಾಣಪುರ, ಅಕ್ಕುಂಜಿಗಳಿಗೆ ಭೇಟಿ ನೀಡಿ ಸಂತೃಸ್ತರ ಅಹವಾಲು ಆಲಿಸಿದರು.
ಸ್ಥಳಿಯ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಸಂತೃಸ್ತರ ಪುನರ್ವಸತಿ ಕೇಂದ್ರಗಳ ಅವಸ್ಥೆ ಪರಿಶೀಲಿಸಿದರು. ಮಹಾಪೂರದ ಸಂದರ್ಭದಲ್ಲಿ ತೊಂದರೆಗೊಳಗಾಗುತ್ತಿರುವ ಈಭಾಗದ ಜನರ ಶಾಶ್ವತ ವಸತಿ ವ್ಯವಸ್ಥೆಗೆ ಸೂಕ್ತ ಏರ್ಪಾಡು ಮಾಡಲು ಪ್ರಯತ್ನಿಸುವ ಭರವಸೆ ನೀಡಿದರು.
ಸಾಂಕ್ರಾಮಿಕ ರೋಗದ ಎಚ್ಚರಿಕೆ- ಕಳೆದ 4-5 ದಿವಸಗಳ ನಿರಂತರ ಮಳೆ, ಮಹಾಪೂರಗಳ ಪರಿಣಾಮ ರಾಜ್ಯದೆಲ್ಲೆಡೆ ಸಂತೃಸ್ತರ ಸಂಖ್ಯೆ ಹೆಚ್ಚಿದ್ದು ಅವರಿಗೆ ವ್ಯವಸ್ಥೆ ಮಾಡಿರುವ ತಾತ್ಕಾಲಿಕ ಪುನರ್ವಸತಿ ಕೇಂದ್ರಗಳಲ್ಲಿ ಕಡಿಮೆ ಪ್ರದೇಶದಲ್ಲಿ ಹೆಚ್ಚಿನ ಜನರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ನಿರಾಶ್ರಿತರ ಕೇಂದ್ರಗಳಲ್ಲಿ ಸಾಂಕ್ರಾಮಿಕ ರೋಗದ ಅಪಾಯವಿರುವುದರಿಂದ ಎಚ್ಚರಿಕೆಯಿಂದ ಆರೋಗ್ಯ ಅನುಕೂಲ ನಿರ್ವಹಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಭೀಮಣ್ಣ ನಾಯ್ಕ ಭೇಟಿ- ಈ ವಾರದ ಮಳೆ, ಮಹಾಪೂರಗಳಿಂದ ತೊಂದರೆಗೊಳಗಾಗಿರುವ ಪ್ರವಾಹ ಪೀಡಿತ ಪ್ರದೇಶಗಳಾದ ಶಿರಸಿಯ ಬನವಾಸಿ,ಮೊಗಳ್ಳಿ ಪ್ರದೇಶಗಳಿಗೆ ಗುರುವಾರ ಭೀಮಣ್ಣ ನಾಯ್ಕ ನೇತೃತ್ವದ ಜಿಲ್ಲಾ ಕಾಂಗ್ರೆಸ್ ತಂಡ ಭೇಟಿ ಮಾಡಿತು. ಇಂದು ಸಿದ್ಧಾಪುರ ತಾಲೂಕಿನ ಅಕ್ಕುಂಜಿ, ಕಲ್ಯಾಣಪುರ,ಹೆಮ್ಮನ ಬೈಲು ಪ್ರದೇಶಗಳಿಗೆ ಭೇಟಿ ನೀಡುವುದಾಗಿ ತಿಳಿಸಿದೆ.