ನಿರಂತರ ಮಳೆ ಮತ್ತು ಮಹಾಪೂರದಿಂದ ಉತ್ತರ ಕನ್ನಡ ಜಿಲ್ಲೆ ಭಾದಿತವಾಗಿದ್ದು ಜಿಲ್ಲೆಯ ಪ್ರಮುಖ ಅಧಿಕಾರಿಗಳು ಮತ್ತು ತಾಲೂಕಾ ಮಟ್ಟದ ಹಿರಿಯ ಅಧಿಕಾರಿಗಳು ತಮ್ಮ ಸ್ಥಳ ಬಿಡದಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಮಳೆ,ಹೊಳೆ,ನೆರೆ ಅನಾಹುತಗಳ ಜೊತೆಗೆ ಮರ ಬಿದ್ದ ಪ್ರಕರಣಗಳು, ವಿದ್ಯುತ್ ಕಂಬ ಧರೆಗುರುಳಿದ ಅನೇಕ ಪ್ರಕರಣಗಳು ವರದಿಯಾಗಿವೆ. ಸಿದ್ಧಾಪುರ ನಗರದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಯ ಆವರಣ ಗೋಡೆ ಕುಸಿದಿದೆ.
ಬಿದ್ರಕಾನ ಬಳಿ ಮರ ಉರುಳಿಬಿದ್ದ ಪರಿಣಾಮ ವಿದ್ಯುತ್ ಕಂಬ ನೆಲಕ್ಕುರುಳಿದೆ. ಸಾಗರ ಶಿರಸಿ ರಸ್ತೆ ಅರೆಂದೂರು ಬಳಿ ಬಿದ್ದ ಮರ ಸೇರಿದಂತೆ ಸಿದ್ದಾಪುರದ ಅನೇಕ ಪ್ರದೇಶಗಳಲ್ಲಿ ಮರಗಳು ಉರುಳಿಬಿದ್ದು ವಿದ್ಯುತ್ ಕಂಬಗಳು ನೆಲಕ್ಕೊರಗಿವೆ.
ಎಚ್ಚರಿಕೆ,ಜೋಗ ಸುತ್ತಮುತ್ತ ಅಪಾಯ ಹೊನ್ನಾವರ ರಸ್ತೆ ಬಂದ್!
ಸಿದ್ಧಾಪುರ,ಆ.09-ಮಲೆನಾಡಿನ ಮಳೆ ಸಾರ್ವಜನಿಕರು, ಸ್ಥಳಿಯರನ್ನು ಕಂಗೆಡಿಸಿದೆ. ಒಂದು ಗಂಟೆ ಕೆಳಗೆ ಜೋಗ (ಮಾವಿನಗುಂಡಿ-ಹೊನ್ನಾವರ) ಹೊನ್ನಾವರ ರಸ್ತೆ ಕುಸಿದಿದ್ದು, ಖಾಸಗಿ ವಾಹನ ಸಾಗಾಟ ನಿರ್ಬಂಧಿಸಲಾಗಿದೆ.
ಸರ್ಕಾರಿ ಸಾರಿಗೆ ವಾಹನ ಸಂಚಾರ ನಿರ್ಬಂಧಿಸುವ ಸಾಧ್ಯತೆ ನಿಚ್ಚಳವಾಗಿದೆ. ಜೋಗದ ಹಳೆ ಬ್ರಿಟೀಷ್ ಬಗ್ಲೆ ಬಳಿ ಶರಾವತಿ ನೀರು ನುಗ್ಗಿ ಕಟ್ಟಡ ಬೀಳುವ ಸಾಧ್ಯತೆ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ರಾಜ್ಯ, ದೇಶದ ನಾನಾ ಭಾಗಗಳಿಂದ ಜೋಗ, ಉತ್ತರ ಕನ್ನಡ ಪ್ರವಾಸಕ್ಕೆ ಬರುವವರು ಪ್ರವಾಸ ಮುಂದೂಡುವುದು ಅವರ ಸುರಕ್ಷತೆ ದೃಷ್ಟಿಯಿಂದ ಯುಕ್ತ. ರಸ್ತೆ ಮೇಲೆ ಅಲ್ಲಲ್ಲಿ ಮರಗಳು ಬೀಳುತ್ತಿರುವುದರಿಂದ ಸ್ಥಳಿಯರು, ಪ್ರವಾಸಿಗರಿಗೆ ಓಡಾಟಕ್ಕೆ ತೊಂದರೆಯಾಗುತ್ತಿದೆ.