

ಆರದ ದೀಪದಿಂದ ಪ್ರಖ್ಯಾತವಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಚಿಗಳ್ಳಿಯ ಜಲಾಶಯ ಒಡೆದು ಸಾವಿರಾರು ಎಕರೆ ಬೆಳೆ ನಾಶವಾಗಿದೆ.
ಹುಬ್ಬಳ್ಳಿ-ಶಿರಸಿ ರಸ್ತೆಯ ಪಕ್ಕಕ್ಕಿರುವ ಚಿಗಳ್ಳಿಯ ಜಲಾಶಯ ಹಳೆ ಮಾದರಿಯ 40 ವರ್ಷಗಳ ಹಿಂದಿನ ಮಣ್ಣಿನ ನಿರ್ಮಾಣದ ಜಲಾಶಯ. ಈ ವರ್ಷದ ಮಳೆ ಈ ಜಲಾಶಯವನ್ನು ಒಡೆದಿದ್ದು ಇದರಿಂದ ಸಾವಿರಾರು ಎಕರೆ ಕೃಷಿಭೂಮಿಗೆ ಹಾನಿಯಾಗಿದ್ದರೆ, ಈ ಜಲಾಶಯದ ನೀರನ್ನು ಅವಲಂಬಿಸಿ ಬದುಕು ಕಟ್ಟಿಕೊಂಡಿದ್ದ ಜನಜೀವನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಮುಂಡಗೋಡಿನ ನಾಲ್ಕೈದು ಜಲಾಶಯಗಳಲ್ಲಿ ಚಿಗಳ್ಳಿ ಜಲಾಶಯ ಒಡೆದಿದ್ದರೆ, ಈ ಜಲಾಶಯದಿಂದ 50-60 ಕಿ,ಮೀ ದೂರದ ಸಿದ್ಧಾಪುರದ ಭಾನ್ಕಳಿಯಲ್ಲಿ ಭೂಮಿಯೇ ಬಾಯಿತೆರದಿದೆ.
ಹೀಗೆ ಮಳೆ, ಮಹಾಪೂರ, ಆಕಸ್ಮಿಕಗಳಿಂದ ತೊಂದರೆಗೆ ಒಳಗಾದ ಉತ್ತರಕನ್ನಡ ಜಿಲ್ಲೆಯ ಜನರಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಕಳೆದ 2 ದಿವಸಗಳಿಂದ ಶಿರಸಿ-ಸಿದ್ಧಾಪುರದ ರಾಜಕಾರಣಿಗಳು,ಸಂಘ ಸಂಸ್ಥೆಗಳು, ಸಂಘಟನೆಗಳು ಸಂತೃಸ್ತರಿಗೆ ನೆರವು ನೀಡಲು ಮುಗಿಬೀಳುತಿದ್ದಾರೆ.
ನಿವೇದಿತ್ ಆಳ್ವ, ಉಪೇಂದ್ರಪೈ, ಭೀಮಣ್ಣ ನಾಯ್ಕ, ಸುನಿಲ್ ನಾಯ್ಕ ಸೇರಿದಂತೆ ಅನೇಕ ರಾಜಕಾರಣಿಗಳು, ಆಯ್.ಎಮ್.ಎ. ಸ್ಫಂದನ ಸಂಸ್ಥೆಯಂಥ ಸಂಘಟನೆಗಳು, ಶಿಕ್ಷಕರು, ದಾನಿಗಳು ಹೀಗೆ ಈ ವಾರದ ಪ್ರಾರಂಭದೊಂದಿಗೆ ನೆರವಿನ ಮಹಾಪೂರ ಪ್ರಾರಂಭವಾಗಿದೆ.
ಮುಗಿದ ಮಹಾಮಳೆ,ಒಡೆದ ಭೂಮಿ,ಮುರಿದುಬಿದ್ದ ತೂಗುಸೇತುವೆ, ಸಂತೃಸ್ತರಿಗೆ ಸಿಹಿಹಂಚಿ ಬೀಳ್ಕೊಡುಗೆ
ಸಿದ್ಧಾಪುರ,ಆ.12-ಸಿದ್ಧಾಪುರ ತಾಲೂಕು, ಉತ್ತರಕನ್ನಡ ಜಿಲ್ಲೆ ಸೇರಿದ ಕರಾವಳಿ, ಮಲೆನಾಡಿನಲ್ಲಿ ಮಳೆಯ ರುದ್ರನರ್ತನ ನಿಂತಿದ್ದು ಮಳೆ,ಪ್ರವಾಹಗಳ ಸಂತೃಸ್ತರು ಗಂಜಿ ಕೇಂದ್ರದಿಂದ ಮನೆಗೆ ಮರಳಿದ್ದಾರೆ. ಕರಾವಳಿಯಲ್ಲಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹಪೀಡಿತ ಪ್ರದೇಶದ ಸಮೀಕ್ಷೆ ನಡೆಸಿದ್ದಾರೆ. ಕರಾವಳಿಯ ಬಹುತೇಕ ಕಡೆ ಪ್ರವಾಹ ಇಳಿದಿದ್ದು ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ.
ಯಲ್ಲಾಪುರ ತಾಲೂಕಿನ ಕೊಡಸಳ್ಳಿ ಜಲವಿದ್ಯುತ್ ಯೋಜನೆ ನಿರಾಶ್ರಿತರ ಪುನರ್ವಸತಿ ಕೇಂದ್ರಗಳಾದ ಹೆಗ್ಗಾರು, ಕಲ್ಲೇಶ್ವರ ಗಳಿಗೆ ಗಂಗಾವಳಿ ನದಿ ನೀರು ನುಗ್ಗಿ ಹಾನಿ ಮಾಡಿದೆ. ಈ ನಿರಾಶ್ರಿತರ ಕೇಂದ್ರಗಳಲ್ಲಿ ಇದೇ ವರ್ಷ ಮೊದಲ ಬಾರಿಗೆ ನೆಗಸುಬಂದಿದ್ದು ಒಮ್ಮೆ ಮನೆ,ಹೊಲ ಬಿಟ್ಟುಬಂದ ಇವರು ಮತ್ತೆ ಇಲ್ಲಿಂದ ಎತ್ತಂಗಡಿಯಾಗಬೇಕಾಗಬಹುದೆ? ಎನ್ನುವ ಆತಂಕದಲ್ಲಿದ್ದಾರೆ.
ಇದೇ ಯಲ್ಲಾಪುರ ತಾಲೂಕಿನ ಶಿರ್ಲೆ ಜಲಪಾತದಲ್ಲಿ ಸಿಲುಕಿ ಒಂದು ದಿನದ ನಂತರ ಅಗ್ನಿಶಾಮಕ ಸೇವೆಯ ಪ್ರಯತ್ನದಿಂದ ಮರಳಿಬಂದ 6 ಜನರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಧಾನ ವ್ಯಕ್ತವಾಗಿದೆ.
ಶಿರಸಿಯ ಪ್ರತಿವರ್ಷದ ನೆರೆಪ್ರದೇಶ ಮೊಗವಳ್ಳಿಯಲ್ಲಿ ದೋಣಿ ಬಳಸುವ ಮೂಲಕ ಜಿಲ್ಲಾಡಳಿತ ಸ್ಥಳಿಯರನ್ನು ಬಚಾವು ಮಾಡಿದೆ. ಸಿದ್ಧಾಪುರ ತಾಲೂಕಿನ ಹಸರಗೋಡು ಪಂಚಾಯತ್ ಬಾಳೂರಿನ ತೂಗುಸೇತುವೆ ನೀರಿನ ಸೆಳೆತಕ್ಕೆ ಸಿಕ್ಕು ಹಾಳಾಗಿ ಬಳಕೆಗೆ ಅನುಪಯುಕ್ತವಾಗಿದೆ.
ತಾಲೂಕಿನಾದ್ಯಂತ ಅನೇಕ ಕಡೆ ಭೂಕುಸಿತವಾಗಿದೆ. ಭಾನ್ಕುಳಿಯಲ್ಲಿ ಭೂಮಿ ಬಿರುಕು ಬಿಟ್ಟಿದ್ದು ರಾಮಚಂದ್ರ, ಕೃಷ್ಣ, ಲಕ್ಷ್ಮಣ ಎನ್ನುವವರ ಮನೆ,ತೋಟ-ಗದ್ದೆಗಳಿಗೆ ಹಾನಿಯಾಗಿದೆ.
ಹೆಮ್ಮನಬೈಲ್ ಸಂತೃಸ್ತರನ್ನು ಹಳ್ಳಿಬೈಲ್ ಹೈಸ್ಕೂಲ್‍ಗೆ ಸ್ಥಳಾಂತರಿಸಲಾಗಿದೆ. ಕಿಲವಳ್ಳಿಯ ಒಂದು ಕುಟುಂಬವನ್ನು ಪರಊರಿನ ಅವರ ಸಂಬಂಧಿಗಳ ಮನೆಗೆ ಸೇರಿಸಲಾಗಿದೆ.
ಅಕ್ಕುಂಜಿ, ಕಲ್ಯಾಣಪುರಗಳ ಸಂತೃಸ್ತರು ಇಂದು ಬೆಳಿಗ್ಗೆ ಮನೆ ಸೇರಿದ್ದಾರೆ. ಈ ಸಂತೃಸ್ತರೊಂದಿಗೆ ನಿಂತು ಸಹರಿಸಿದ್ದ ತಾ.ಪಂ. ಸದಸ್ಯ ನಾಶಿರ್‍ಖಾನ್ ಇಂದು ಬಕ್ರೀದ್ ಅಂಗವಾಗಿ ಸಂತೃಸ್ತರಿಗೆ ಸಿಹಿವಿತರಿಸಿ,ಸಂತೃಸ್ತರ ಕೇಂದ್ರದಿಂದ ಅವರನ್ನು ಬೀಳ್ಕೊಟ್ಟರು. ಸಂತ್ರಸ್ತರಿಗೆ ನಿರೀಕ್ಷೆ ಮೀರಿ ನೆರವು, ಸಹಾಯ, ಸಹಕಾರ ದೊರೆತಿರುವ ಮಾಹಿತಿ ಲಭ್ಯವಾಗಿದೆ.




