

ಸಿದ್ಧಾಪುರ (ಉ.ಕ.) ತಾಲೂಕಿನ ಕಲ್ಯಾಣಪುರದ ಎಲ್ಲಾ ಪ್ರವಾಹ ಸಂತೃಸ್ತರ ಕುಟುಂಬಗಳಿಗೆ ಶಾಶ್ವತ ವ್ಯವಸ್ಥಿತ ವಸತಿ ಸೌಕರ್ಯ ಒದಗಿಸಬೇಕೆಂದು ತಾ.ಪಂ.ಸ್ಥಾಯಿ ಸಮೀತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ವಸಂತ ನಾಯ್ಕ ಆಗ್ರಹಿಸಿದ್ದಾರೆ.
ಸಮಾಜಮುಖಿ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ಪ್ರತಿಮಳೆಗಾಲದಲ್ಲಿ ಕಲ್ಯಾಣಪುರದಲ್ಲಿ ಧರೆ ಕುಸಿಯುವುದು,ಕೃಷಿ ಭೂಮಿ,ಮನೆಗಳಿಗೆ ತೊಂದರೆಯಾಗುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಅನೇಕಬಾರಿ ಸ್ಥಳಿಯ ಮುಖಂಡರು ಸಂಬಂಧಿಸಿದ ಜನಪ್ರತಿನಿಧಿಗಳು ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಶಾಶ್ವತ ಪರಿಹಾರ ಕನ್ನಡಿಯೊಳಗಿನ ಗಂಟಾಗಿದೆ.
ಮಳೆ, ಪ್ರವಾಹ ಬಂದಾಗಲೆಲ್ಲಾ ಭಯದಿಂದ ಬದುಕುವ ಕಲ್ಯಾಣಪುರದ ಬಹುತೇಕ ಕುಟುಂಬಗಳು ಅನಿವಾರ್ಯವಾಗಿ ಅಲ್ಲಲ್ಲೇ ಉಳಿದುಕೊಳ್ಳುತಿದ್ದಾರೆ. ಸರ್ಕಾರ ಮತ್ತು ಸಂಬಂಧಿಸಿದ ಪ್ರಮುಖ ಜನಪ್ರತಿನಿಧಿಗಳು ಮಳೆಬಂದಾಗ ಮೊಸಳೆಕಣ್ಣೀರು ಸುರಿಸಿದರೆ ಅದರಿಂದ ಯಾರಿಗೂ ಪ್ರಯೋಜನವಿಲ್ಲ. ಜನರ ಮನೆ, ಬದುಕು, ಕೃಷಿ ಅಗತ್ಯಗಳನ್ನು ಪೂರೈಸುವುದು ಸರ್ಕಾರದ ಕರ್ತವ್ಯ ಆದರೆ ಸರ್ಕಾರಿ ಅಧಿಕಾರಿಗಳು ಪ್ರಮುಖ ಜನಪ್ರತಿನಿಧಿಗಳು ಕಲ್ಯಾಣಪುರದ ತೊಂದರೆಯನ್ನು ಲಘುವಾಗಿ ಪರಿಗಣಿಸಿರುವುದರಿಂದ ಸಮಸ್ಯೆ ಕಗ್ಗಂಟಾಗಿದೆ.
ಭೂದಾಖಲೆ, ಮನೆ ವ್ಯವಸ್ಥೆ ಅವಶ್ಯ ಸರ್ಕಾರಿ ಸೌಲಭ್ಯಗಳ ಪ್ರಾಮಾಣಿಕ ಅನುಷ್ಠಾನಗಳ ಮೂಲಕ ಕಲ್ಯಾಣಪುರದ ಪ್ರತಿವರ್ಷದ ಪ್ರವಾಹತೊಂದರೆಗೆ ಪರಿಹಾರ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.


