
ಸಿದ್ದಾಪುರ ತಾಲೂಕಿನ ಹಲಗೇರಿಯಿಂದ ಗುಂಜಗೋಡ ಮಾರ್ಗದಲ್ಲಿಯ ಅಳಗೋಡಿನ ದೊಡ್ಡ ಹೊಳೆಯ ಕಿರು ಸೇತುವೆಯ ಅಕ್ಕ ಪಕ್ಕಗಳಲ್ಲಿ ಕೂಡ್ರಿಸಲಾಗಿದ್ದ ರಕ್ಷಣಾ ಹಿಡಿಕೆಗಳು ಇತ್ತೀಚಿನ ಭಾರೀ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು ಇದೀಗ ಈ ಕಿರು ಸೇತುವೆಯ ಮೇಲೆ ನಾಗರಿಕರು ಸುಗಮ ಸಂಚಾರ ಮಾಡಲಾಗದೇ ಪರಿತಪಿಸುವಂತಾಗಿದೆ.
ಈ ಸೇತುವೆಯ ಮೇಲೆ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ವಾಹನಗಳ ಸಂಚಾರ ನಡೆಸುತ್ತಿದ್ದು ಇದೀಗ ಅವರೆಲ್ಲರೂ ಎಡಗೈಯ್ಯಲ್ಲಿ ಜೀವ ಹಿಡಿದು ಸಂಚರಿಸುವಂತಾಗಿದೆ. ಮನೆಯ ಕೆಲಸ ಬಿಟ್ಟು ಎರಡೂ ಹೊತ್ತು ಶಾಲಾ ಮಕ್ಕಳನ್ನು ಈ ಸೇತುವೆಯಿಂದ ದಾಟಿಸಲು ಹಿರಿಯರು ಹೋಗುವುದೂ ಅನಿವಾರ್ಯವಾಗಿದೆ. ರಸ್ತೆಯ ಒಂದು ಭಾಗವೇ ಆಗಿರುವ ಸೇತುವೆಯಲ್ಲಿ ಸಂಚರಿಸುವವರು ಕೊಂಚ ಜಾರಿದರೂ ನೀರು ಪಾಲಾಗುವ ಸಾಧ್ಯತೆಯಿದೆ. ವಿಷಯವನ್ನು ಶಾಸಕರು, ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗಮನಕ್ಕೆ ವಾರದ ಹಿಂದೆ ತರಲಾಗಿದೆ. ಅವರು ಈ ಕುರಿತಂತೆ ಶೀಘ್ರ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರೂ ಈ ವರೆಗೆ ಯಾವುದೇ ಕ್ರಮ ನಡೆದಿಲ್ಲ. ಈಗಲಾದರೂ ಈ ಕುರಿತು ಅಧಿಕಾರಿಗಳು ಗಮನಹರಿಸಿ ನಾಗರಿಕರ ಸುರಕ್ಷಿತ ಸಂಚಾರಕ್ಕೆ ಅನುವುಮಾಡಿಕೊಡಬೇಕೆಂದು ಹಲಗೇರಿ ಗ್ರಾಮ ಪಂಚಾಯತ ಸದಸ್ಯೆ ರೇಣುಕಾ ಪರಶುರಾಮ ಕೋರಿದ್ದಾರೆ.

