
ಪ್ರವಾಹ ಮತ್ತು ಬೆಳೆಹಾನಿ ಸಮೀಕ್ಷೆ ಒಂದೆಡೆ ನಡೆಯುತಿದ್ದರೆ,ಪರಿಹಾರಕ್ಕಾಗಿ ರೈತರು ನೀಡಬೇಕಾದ ಅರ್ಜಿ ಪ್ರಮಾಣ ವಿಪರೀತವಾಗಿ ಕಡಿಮೆಯಾಗಿರುವುದು ಕಂದಾಯ (ಉ.ಕ.)ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಪ್ರವಾಹ ಮತ್ತು ಮಹಾಮಳೆಯ ನಿರ್ವಹಣೆ ಕೆಲಸವನ್ನು ಕಂದಾಯ ಇಲಾಖೆ ನೇತೃತ್ವದಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿ ಮಾಡಿದೆ. ನಂತರ ತಾತ್ಕಾಲಿಕ ವ್ಯವಸ್ಥೆ ಮತ್ತು ಪ್ರಾಥಮಿಕ ಸಮೀಕ್ಷೆನಡೆಸುವಲ್ಲಿ ಯಶಸ್ವಿಯಾಗಿದ್ದ ಜಿಲ್ಲಾಡಳಿತಕ್ಕೆ ಈಗ ಗ್ರಾ.ಪಂ.
ಗಳ ಅಸಹಕಾರ ತಲೆನೋವಾಗಿ ಪರಿಣಮಿಸಿರುವ ವಿದ್ಯಮಾನ ಬಹಿರಂಗವಾಗಿದೆ.
ಪ್ರವಾಹ, ಮಳೆತೊಂದರೆ ಸಮಯಗಳಲ್ಲೆಲ್ಲಾ ಕಂದಾಯ ಇಲಾಖೆಗೆ ಸ್ಫಂದಿಸಿ ಕೆಲಸಮಾಡಿದ್ದ ಜಿ.ಪಂ. ಆಡಳಿತ ರೈತರ ಬೆಳೆಹಾನಿ ವೈಯಕ್ತಿಕ ಅರ್ಜಿ ಪಡೆಯುವಲ್ಲಿ ಆಸಕ್ತಿ ವಹಿಸುತ್ತಿಲ್ಲ. ಒಂದೆಡೆ ಸಮೀಕ್ಷೆ, ಇನ್ನೊಂದೆಡೆ ನಿತ್ಯ ಕೆಲಸ ಇವುಗಳ ಮಧ್ಯೆ ರೈತರ ವೈಯಕ್ತಿಕ ಅರ್ಜಿಗಳನ್ನು ಪಡೆಯಲು ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ವೈಯಕ್ತಿಕ ಅರ್ಜಿ ಪಡೆಯುವ ಕೆಲಸವನ್ನು ಕಂದಾಯ ಇಲಾಖೆ ಗ್ರಾ.ಪಂ. ಗಳಿಗೆ ವಹಿಸಿತ್ತು. ಆದರೆ ಬಹುತೇಕ ಗ್ರಾ.ಪಂ. ಗಳು ಈ ಬಗ್ಗೆ ಗಮನಹರಿಸಿಲ್ಲ, ಕೆಲವೆಡೆ ವೈಯಕ್ತಿಕ ಅರ್ಜಿ ಕೊಡಲು ಗ್ರಾ.ಪಂ. ಗೆ ತೆರಳಿದ ರೈತರಿಗೆ ಅರ್ಜಿ ಪಡೆಯದೆ ಮರಳಿಕಳುಹಿಸಿದ್ದಾರೆ ಎನ್ನುವ ಆರೋಪಗಳೂ ವ್ಯಕ್ತವಾಗಿವೆ.
ಈ ಬಗ್ಗೆ ಆಕ್ಷೇಪಿಸಿರುವ ತಾ.ಪಂ. ಸದಸ್ಯ ನಾಶಿರ್‍ಖಾನ್ ಪಂಚಾಯತ್‍ಗಳಲ್ಲಿ ಬೆಳೆಹಾನಿ ಅರ್ಜಿ ಪಡೆಯುತ್ತಿಲ್ಲ, ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿವೆ ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದಿದ್ದಾರೆ.
ಈ ನಡುವೆ ಮಾಹಿತಿ-ವ್ಯವಸ್ಥೆ, ನಿರ್ವಹಣೆ ತೊಂದರೆಗಳಿಂದ ತಾಲೂಕಿನ 11 ಸಾವಿರ ರೈತರಲ್ಲಿ ಒಂದೆರಡು ಸಾವಿರ ರೈತರ ಅರ್ಜಿಗಳೂ ಸಲ್ಲಿಕೆಯಾಗದಿರುವುದರಿಂದ ಹೆಚ್ಚಿನ ಸಮಯಾವಕಾಶ ನೀಡಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.
ಈಗಾಗಲೇ ಮಳೆ, ಪ್ರವಾಹ ನಿರ್ವಹಣೆ ಕೆಲಸದಿಂದ ಹೈರಾಣಾಗಿರುವ ಕೆಲವು ಇಲಾಖೆಗಳ ನೌಕರರಿಗೆ ಗ್ರಾ.ಪಂ. ಗಳ ಅಸಹಕಾರ ಹೆಚ್ಚುವರಿ ತಲೆನೋವಾಗಿ ಕಾಡುವಂತಾಗಿದೆ. ಈ ಬಗ್ಗೆ ಜಿ.ಪಂ. ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡುವ ಸಾಧ್ಯತೆ ಕಂಡುಬಂದಿದೆ.



