
ಸಿದ್ಧಾಪುರ ತಾಲೂಕಿನ ಅತಿವೃಷ್ಟಿ ಹಾನಿ ಸಮೀಕ್ಷೆ ಪೂರ್ಣಗೊಂಡಿದ್ದು,ಅತಿವೃಷ್ಟಿ ಹಾನಿ ಬಗ್ಗೆ ರೈತರು ಅರ್ಜಿ ಸಲ್ಲಿಸಲು ನೀಡಿದ ಗಡುವು ಇಂದಿಗೆ ಮುಕ್ತಾಯವಾಗಿದೆ. ಈ ನಿಗದಿತ ಅವಧಿಯಲ್ಲಿ 11640 ತೋಟಗಾರರಲ್ಲಿ 3658ಜನ ಅಡಿಕೆ ಬೆಳೆಗಾರರು ಈ ವರೆಗೆ ಅತಿವೃಷ್ಷಿ ಹಾನಿಯ ಅರ್ಜಿ ಸಲ್ಲಿಸಿದ್ದಾರೆ.
ತಾಲೂಕಿನ ಒಟ್ಟೂ 14700 ಕೃಷಿಕರಲ್ಲಿ 500 ಜನ ಭತ್ತಬೆಳೆಗಾರರು ಅರ್ಜಿ ನೀಡಿದ್ದು ಒಟ್ಟೂ ಅಂದಾಜು 4200 ಕ್ಕಿಂತ ಕಡಿಮೆ ರೈತರು ಅತಿವೃಷ್ಟಿಹಾನಿಗೆ ಅರ್ಜಿ ನೀಡಿದಂತಾಗಿದೆ.
ಈ ಅತಿವೃಷ್ಟಿ ಹಾನಿ ಅರ್ಜಿ ಸಲ್ಲಿಕೆಗೆ ಕಡಿಮೆ ಅವಧಿಯ ಸಮಯಾವಕಾಶ ನೀಡಿದ್ದು ಈ ಅವಧಿಯಲ್ಲಿ ಮಾಹಿತಿ ತಲುಪದೇ ಸಂವಹನ ಕೊರತೆಯಿಂದ ಅರ್ಜಿ ಸಲ್ಲಿಸಲು ಬಹುತೇಕರಿಗೆ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಈ ಮಧ್ಯೆ ಕಾಂವಚೂರು ಮತ್ತು ವಾಜಗೋಡು ಪಂಚಾಯತ್, ಸೇವಾಸಹಕಾರಿ ಸಂಘಗಳ ವ್ಯಾಪ್ತಿಯ ರೈತ ಮುಖಂಡರು ಮತ್ತು ಜನಪ್ರತಿನಿಧಿಗಳು ಈ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಶಾಸಕರು, ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರ ವರೆಗೆ ಅವಧಿ ವಿಸ್ತರಣೆಯ ಬೇಡಿಕೆ ಹೋಗಿದ್ದು ಸೋಮುವಾರದ ವರೆಗೆ ಅಧಿಕಾರಿಗಳು ರಜಾ ದಿನಗಳಲ್ಲೂ ಕೆಲಸ ಮಾಡಿ ಅರ್ಜಿ ಸ್ವೀಕರಿಸಬೇಕೆಂಬ ಒತ್ತಾಯ ಬಂದರೂ ತಾಂತ್ರಿಕ ಕಾರಣಗಳಿಂದ ಅರ್ಜಿ ಪಡೆಯುವ ಅವಧಿಯನ್ನು ಇಂದಿಗೆ ಮುಕ್ತಾಯಗೊಳಿಸಿದ್ದು. ಅಡಿಕೆ ತೋಟಗಳ ಕೊಳೆಹಾನಿ ಬಗ್ಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ತಾಲೂಕಿನಲ್ಲಿ ಮಳೆ,ಪ್ರವಾಹ, ನೀರು ನಿಂತ ತೊಂದರೆ ಇದ್ದರೂ ಅಲ್ಫಪ್ರಮಾಣದ ಅರ್ಜಿ ಸಲ್ಲಿಕೆ ಆಗಿರುವ ಹಿಂದೆ ಕೆಲವು ಅಧಿಕಾರಿಗಳು ಭತ್ತದ ಗದ್ದೆ ಹಾನಿ ಅರ್ಜಿ ತಿರಸ್ಕರಿಸಿದ್ದೂ ಕಾರಣ ಎನ್ನಲಾಗಿದೆ. ಈ ಮಧ್ಯೆ ತಾಲೂಕಿನಲ್ಲಿ ಅತಿವೃಷ್ಟಿ ಹಾನಿ ವ್ಯಾಪಕವಾಗಿರುವುದರಿಂದ ಅರ್ಜಿ ಪಡೆಯದೆ ಸಾಮೂಹಿಕವಾಗಿ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು ಎನ್ನುವ ಬೇಡಿಕೆಯೂ ವ್ಯಕ್ತವಾಗಿದೆ.ಇಂದು ನಿನ್ನೆ ತೋಟಗಾರಿಕೆ, ಕೃಷಿ ಇಲಾಖೆಗಳ ಸಿಬ್ಬಂದಿಗಳು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಅಹೋರಾತ್ರಿ ಅರ್ಜಿ ಪ್ರಕ್ರಿಯೆ ಕೆಲಸ ಮಾಡಿದರು.
ಬೆಳೆಹಾನಿ ಜಂಟೀ ಸಮೀಕ್ಷಾಕಾರ್ಯ ಪೂರ್ಣ. ಮಳೆ, ಪ್ರವಾಹದಿಂದ ವ್ಯಾಪಕ ಹಾನಿಯಾದ ಬಗ್ಗೆ ವರದಿಸಾಧ್ಯತೆ
ಸಿದ್ಧಾಪುರ,ತಾಲೂಕಿನ ಮಳೆಯ ಪರಿಣಾಮದಿಂದಾದ ಬೆಳೆಹಾನಿ ಸಮೀಕ್ಷೆಯ ಜಂಟೀ ಸಮೀಕ್ಷೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ತೋಟಗಾರಿಕೆ, ಕೃಷಿ,ಕಂದಾಯ ಇಲಾಖೆಯ ಅಧಿಕಾರಿಗಳ ತಂಡಗಳು ಕಳೆದ 17 ರಿಂದ 22 ರ ವರೆಗೆ ಮೂರ್ನಾಲ್ಕು ತಂಡಗಳಲ್ಲಿ ಸಮೀಕ್ಷೆ ನಡೆಸಿವೆ. ಇಂದುಕೂಡಾ ಈ ಸಮೀಕ್ಷಾ ತಂಡದ ಮೂರ್ನಾಲ್ಕು ಗುಂಪುಗಳು ಪ್ರತ್ಯೇಕವಾಗಿ ತಾಲೂಕಿನ ನಾನಾ ಪಂಚಾಯತ್ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿದವು. ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಯ ಅಧಿಕಾರಿಗಳು ಆಯಾ ಪಂಚಾಯತ್ ವ್ಯಾಪ್ತಿಯ ಗ್ರಾಮಲೆಕ್ಕಿಗರೊಂದಿಗೆ ತಾಲೂಕಿನ ಕೃಷಿಕ್ಷೇತ್ರಗಳಾದ ಭತ್ತದ ಗದ್ದೆ ಮತ್ತು ತೋಟಗಾರಿಕಾ ಕ್ಷೇತ್ರಗಳನ್ನು ಸಂದರ್ಶಿಸಿದರು.
ಕಾಳಪ್ಪ ನೇತೃತ್ವದ ತಂಡ ನೆಜ್ಜೂರು. ಕಾವಂಚೂರು, ಕಲ್ಯಾಣಪುರ, ಕಲ್ಲೂರು ಸೇರಿದಂತೆ ಕೆಲವೆಡೆ ಸಮೀಕ್ಷೆ ನಡೆಸಿತು. ಈ ಭಾಗದ ಬಹುತೇಕ ಕಡೆ ಭತ್ತದ ಬೆಳೆಗೆ ತೊಂದರೆಯಾಗಿದೆ. ಕೆಲವೆಡೆ ಎರಡು, ಮೂರನೇ ಬಾರಿ ಕೂಡಾ ನಾಟಿ ಮಾಡಿದ್ದಾರೆ.ತಾಲೂಕಿನ ದೊಡ್ಡ ಭತ್ತದ ಕ್ಷೇತ್ರ ನೆಜ್ಜೂರು ಬೈಲ್ ನಲ್ಲಿ ಹೊಳೆಯ ಪಕ್ಕದ ಭತ್ತದ ಗದ್ದೆ ಬೆಳೆಗಳೆಲ್ಲಾ ತೊಳೆದು ಹೋಗಿವೆ. ಹೊಸಳ್ಳಿಯಲ್ಲಿ ತೋಟದ ಬೆಳೆಗಳಾದ ಅಡಿಕೆ ಕೊಳೆಯಿಂದ ಉದುರಿದ್ದರೆ, ಕಾಳುಮೆಣಸು ಕೊಳೆಯಿಂದ ಸತ್ತಿರುವ ದೃಶ್ಯ ಗಮನ ಸೆಳೆಯಿತು. ಅಕ್ಕುಂಜಿ,ಗೋಳಗೋಡು,ಕಲ್ಯಾಣಪುರ ಸೇರಿದಂತೆ ಹಲವೆಡೆ ಭತ್ತದ ಗದ್ದೆಗಳು ಕೆಸರುತುಂಬಿಕೊಂಡು ವ್ಯವಸಾಯ, ಬೆಳೆಗೆ ಯೋಗ್ಯವಲ್ಲದಂತಾಗಿರುವವಾಸ್ತವ ಕಂಡುಬಂತು. ಮುಳುಗಿದ್ದ ಬೆಳೆ, ಭತ್ತದ ಕ್ಷೇತ್ರಗಳೆಲ್ಲಾ ಮೇಲ್ನೋಟಕ್ಕೆ ಹಸಿರುಸೂಸುವಂತೆ ಕಂಡರೂ ಬುಡದಲ್ಲಿ ಬಂತು ಕೂತಿರುವ ಕೆಸರು ಬೆಳೆಗಿಂತ ಕಳೆಗೆ ಅನುಕೂಲಮಾಡಿಕೊಡುವ ಸಾಧ್ಯತೆಯನ್ನು ಪ್ರತಿಬಿಂಬಿಸಿತು.
ಸಮೀಕ್ಷಾ ಕಾರ್ಯದಲ್ಲಿದ್ದ ಅಧಿಕಾರಿಗಳು ಎಲ್ಲಾ ರೈತರೂ ತಮ್ಮ ಬೆಳೆಹಾನಿ ಬಗ್ಗೆ ಆಯಾ ಗ್ರಾಮಪಂಚಾಯತ್ ಅಥವಾ ಸಂಬಂಧಿಸಿದ ಇಲಾಖೆಗಳಿಗೆ ಶೀಘ್ರ ಅರ್ಜಿ ನೀಡಲು ವಿನಂತಿಸಿದರು. ತಾಲೂಕಿನ ಐದುಸಾವಿರ ಹೆಕ್ಟೇರ್ ಕೃಷಿಭೂಮಿಯಲ್ಲಿ ಬಹುತೇಕ ಕಡೆ ಪ್ರತಿಶತ 75 ಹಾನಿಯಾಗಿದ್ದರೆ, ಕೆಲವೆಡೆ 50% ಮತ್ತೂ ಕೆಲವೆಡೆ 100% ಹಾನಿಯಾಗಿರುವ ವರದಿ ಇದೆ. ತಾಲೂಕಿನಲ್ಲಿ ಅಡಿಕೆ, ಬಾಳೆ, ಶುಂಠಿ ಮತ್ತು ಕಾಳುಮೆಣಸು ಸೇರಿದಂತೆ ಬಹುತೇಕ ಎಲ್ಲಾ ಬೆಳೆಗಳೂ ಹಾನಿಗೊಳಗಾಗಿವೆ.






Very nice