
ಅಪ್ಪ..
ನಮ್ಮ ‘ಬುದ್ಧ ಕುಟೀರ’ಕೆ
ಅಣ್ಣ ಅಕ್ಕ ಸಂಕವ್ವೆ ಬಂದಿದ್ದರು
ಸಂದಕದಲ್ಲಿರುವ ಸಂಕಟಗಳ
ಬುತ್ತಿಗಂಟು ಬಿಚ್ಚಿಟ್ಟುಕೊಂಡು
ನಿರಾಳವಾಗಿ ಉಂಡೆವು ನಿನ್ನೆ.
ಅಪ್ಪ..
ಅಂಗಳದಲಾಡುತಿದ್ದ ಅಂಬೆಗಾಲಿನ
ನಿನ್ನ ಮೊಮ್ಮಗನನೆತ್ತಿಕೊಂಡು
ಸಂಕವ್ವೆ ಕೇಳಿದಳು ಹೆಸರೆನೆಂದು
ಹಾಲುಗಲ್ಲದ ಹಸುಗೂಸು
‘ಅಂಬೇಡ್ಕರ್’ ಎಂದುಲಿಯಿತು
ಮೂವರೂ ಎತ್ತಿ ಮುದ್ದಾಡಿ ಹೋದರು.
ಅಪ್ಪ..
ಅವರ್ಯಾರೊ ನಿನಗ ಬಣ್ಣ ಬಳಿದಾಗ
ವಿರೂಪಗೊಳಿಸಿದಾಗ
ನಮ್ಮ ಹೃದಯ ಘಾಸಿಗೊಳ್ಳುತ್ತದೆ
ಅಪರಿಚಿತರ್ಯಾರೊ ಅಪ್ಪಿಕೊಂಡು
ಆಪ್ತವಾಗಿ ಸಂತೈಸುತ್ತಲೇ
ನಿನ್ನನ್ನೂ ಅಪ್ಪನೆಂದು ಒಪ್ಪಿ
ನಮ್ಮೊಳಗೆ ಭರವಸೆ ಬಿತ್ತಿ ಹೋಗುತ್ತಾರೆ.
ಅಪ್ಪ..
ಮೊನ್ನೆ ಓಣಿಯ ಹುಡಗನ ಕೂನಿ
ನಿನ್ನೆ ತಂಗಿಯ ಮೇಲೆ ಅತ್ಯಾಚಾರ
ಬಿರುಕು ಬಿಟ್ಟ ಕೇರಿಯಲಿ
ಪಕ್ಷದ ಧ್ವಜ ನೆಟ್ಟಿದ್ದಾರೆ
ಕುಟೀರಕೆ ನಿನಿಟ್ಟಿರುವ..
ಹೆತ್ತಮಗನಿಗೆ ನಾನಿಟ್ಟಿರುವ ಹೆಸರು
ಸಾಯಲು ಬಿಡದೆ ಕಾಡುತ್ತಾ
ಇತಿಹಾಸದ ಪುಟ ತೆರೆದಿಟ್ಟು
ಛಲ ಬಲ ಏನೇಲ್ಲಾ ಮೂಡಿಸಿವೆ.
-ಕೆ.ಬಿ.ವೀರಲಿಂಗನಗೌಡ್ರ.
