

ಆಸ್ಫತ್ರೆ ಸಿಬ್ಬಂದಿ ಮೇಲೆ ಕ್ರಮಕ್ಕೆ ಆಗ್ರಹ, ಪ್ರತಿಭಟನೆಯ ಎಚ್ಚರಿಕೆ
(ಸಿದ್ಧಾಪುರ,ಆ.30-)ತಾಲೂಕಿನ ಸರ್ಕಾರಿ ಆಸ್ಫತ್ರೆಯಲ್ಲಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುವ ಸಿಬ್ಬಂದಿಗಳ ಮೇಲೆ ಕ್ರಮಕೈಗೊಳ್ಳಲು ಕೆಲವು ಸ್ಥಳಿಯರು ಆಗ್ರಹಿಸಿದ್ದಾರೆ. ಸರ್ಕಾರಿ ಆಸ್ಫತ್ರೆಯ ಓರ್ವ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ, ಚಿಕಿತ್ಸೆ, ಕ್ಷಕಿರಣ ಮಾಡಿಸುವಾಗ ಅಶಿಸ್ತಿನಿಂದ ವರ್ತಿಸುತ್ತಾರೆ. ಇಂಥ ಸಿಬ್ಬಂದಿ ಮೇಲೆ ಆಸ್ಫತ್ರೆ ಆಡಳಿತವರ್ಗ ಶೀಘ್ರ ಕ್ರಮ ಜರುಗಿಸದಿದ್ದರೆ ಈ ಘಟನೆ, ಅವ್ಯವಸ್ಥೆ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.
ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿದ ಪ್ರಮುಖರಲ್ಲಿ ಸುನಿಲ್ ನಾಯ್ಕ, ಪದ್ಮಾಕರ ನಾಯ್ಕ,ಪಾಂಡು ಹಾಗೂ ಶಂಕರಮೂರ್ತಿ ಸೇರಿದಂತೆ ಕೆಲವರಿದ್ದರು.
ಎಂಎಸ್ಸಿಯಲ್ಲಿ
ಶ್ರದ್ಧಾಗೆ ಬಂಗಾರದ ಪದಕ
ಸಿದ್ದಾಪುರ;ಆ.30- ಇಲ್ಲಿಯ ಕುಮಾರಿ ಶ್ರದ್ಧಾ ಎಂ.ವಿ. ಎಂಎಸ್ಸಿ (ರಸಾಯನಶಾಸ್ತ್ರ) ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್‍ನೊಂದಿಗೆ ಚಿನ್ನದ ಪದಕ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಬೆಂಗಳೂರಿನ ಜೈನ್ ಡೀಮ್ಡ ಟು ಬಿ ಯುನಿವರ್ಸಿಟಿಯಲ್ಲಿ 2017 ರಿಂದ 2019 ರ ಬ್ಯಾಚ್‍ನಲ್ಲಿ ಅಭ್ಯಸಿಸಿರುವ ಕು.ಶ್ರದ್ಧಾರಿಗೆ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿದ್ದ ಇಸ್ರೋ ಚೇರಮನ್ ಡಾ.ಕೆ.ಶಿವನ್ ಹಾಗೂ ವಿಶ್ವವಿದ್ಯಾಲಯದ ಪ್ರಮುಖರು ಪ್ರಶಸ್ತಿ ಪ್ರದಾನ ಮಾಡಿದರು.
ಶಿರಸಿಯ ಎಂಎಂ ಕಲಾ,ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಓದುವಾಗಲೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದ ಈ ಪ್ರತಿಭಾವಂತ ವಿದ್ಯಾರ್ಥಿನಿಯು ಎಂಜಿಸಿ ಮಹಾವಿದ್ಯಾಲಯದ ಪ್ರೊ.ಎಂ.ಎಸ್.ವಿನಾಯಕ ಹಾಗೂ ಶ್ರೀಮತಿ ಮೇಧಾ ದಂಪತಿಗಳ ಮಗಳು.
ವರ್ಷಕಾಲದ ಹೂವು
ಹೌದು,,, ನಿನ್ನರಳುವಿಕೆಯ ಉದ್ಧೇಶವಾದರೂ ಏನು?
ಮೊದಲ ಮಳೆಗೇ ಚಿಗಿತು
ಚಿಗಿತು ಗಿಡವಾಗಿ ಬೆಳೆದು
ಬೆಳೆದು ಹಸಿಹಸಿರಿನ ನಡುವಲಿ
ಮೊಗ್ಗಾಗಿ ಅವಿತು
ಅವಿತು ಒಡಲೊಳಗಿಂದ
ಹೂವಾಗಿ ಬಿರಿದು
ಹೂವಾಗಿ ನಲಿನಲಿದು
ಶ್ರಾವಣದಿ ಹೊಸದು…………!
ಒಂದೊಮ್ಮೆ ಅರಳಿ
ಮಗದೊಮ್ಮೆ ಮುದುಡಿ
ಮುದ್ದೆಯಾಗುವ ಸುಂದರ ಹೂವೇ,,,
ನಿನ್ನಾಗಮನದ ಸಂದೇಶ ಸಂಕೇತವೇನು?
ದುಂಬಿಯ ಮನತುಂಬಲೆಂದೇ
ದೇವರ ಅಡಿಸೇರಿ ಧನ್ಯವಾಗಲೆಂದೇ?
ನಾರಿಯ ಮುಡಿಸೇರಿ ನಾನೆಂದು ಮೆರೆಯಲೆಂದೇ?
ಕಂಪಸೂಸಿ ತಂಪನ್ನೀಡಲೆಂದೇ?
ಅನಂತಸೌಂದರ್ಯದ ಉಪಮೇಯವಾಗಲೆಂದೇ?
ನಿನಗೆ ನಿನಗಾಗಿ ಎಂಬುದಿಲ್ಲವೇ?
ನಿನಗೆ ನಿನ್ನ ತನವೆಂಬುದಿಲ್ಲವೇ?
ಇದ್ದರೂ ಅನ್ಯರಿಗೊಸ್ಕರ ಅದುಮಿಡುವ
ಸುಂದರ ಸಹಜ ಸಂಸ್ಕಾರವೇ?
ಒಮ್ಮೆ ಅರಳಿ ಮಗದೊಮ್ಮೆ ಮುದುಡಿ
ಮರುಘಳಿಗೆ ಇಲ್ಲವಾಗಿ ಬಿಡುವ
ವರ್ಷಕಾಲದ ನೀಲಿ ಬಣ್ಣದ ಹೂವೇ?
ಅನನ್ಯ ಸೌಂದರ್ಯದ ಖನಿಯೇ
ನಿನ್ನರಳುವಿಕೆಯ,,,,,
ನಿನ್ನ ಬರುವಿಕೆಯ
ಸದುದ್ದೇಶವಾದರೂ ಏನು???
-ರೂಪಾ ಹೆಗಡೆ

