ಹೌದು,,, ನಿನ್ನರಳುವಿಕೆಯ ಉದ್ಧೇಶವಾದರೂ ಏನು?
ಮೊದಲ ಮಳೆಗೇ ಚಿಗಿತು
ಚಿಗಿತು ಗಿಡವಾಗಿ ಬೆಳೆದು
ಬೆಳೆದು ಹಸಿಹಸಿರಿನ ನಡುವಲಿ
ಮೊಗ್ಗಾಗಿ ಅವಿತು
ಅವಿತು ಒಡಲೊಳಗಿಂದ
ಹೂವಾಗಿ ಬಿರಿದು
ಹೂವಾಗಿ ನಲಿನಲಿದು
ಶ್ರಾವಣದಿ ಹೊಸದು…………!
ಒಂದೊಮ್ಮೆ ಅರಳಿ
ಮಗದೊಮ್ಮೆ ಮುದುಡಿ
ಮುದ್ದೆಯಾಗುವ ಸುಂದರ ಹೂವೇ,,,
ನಿನ್ನಾಗಮನದ ಸಂದೇಶ ಸಂಕೇತವೇನು?
ದುಂಬಿಯ ಮನತುಂಬಲೆಂದೇ
ದೇವರ ಅಡಿಸೇರಿ ಧನ್ಯವಾಗಲೆಂದೇ?
ನಾರಿಯ ಮುಡಿಸೇರಿ ನಾನೆಂದು ಮೆರೆಯಲೆಂದೇ?
ಕಂಪಸೂಸಿ ತಂಪನ್ನೀಡಲೆಂದೇ?
ಅನಂತಸೌಂದರ್ಯದ ಉಪಮೇಯವಾಗಲೆಂದೇ?
ನಿನಗೆ ನಿನಗಾಗಿ ಎಂಬುದಿಲ್ಲವೇ?
ನಿನಗೆ ನಿನ್ನ ತನವೆಂಬುದಿಲ್ಲವೇ?
ಇದ್ದರೂ ಅನ್ಯರಿಗೊಸ್ಕರ ಅದುಮಿಡುವ
ಸುಂದರ ಸಹಜ ಸಂಸ್ಕಾರವೇ?
ಒಮ್ಮೆ ಅರಳಿ ಮಗದೊಮ್ಮೆ ಮುದುಡಿ
ಮರುಘಳಿಗೆ ಇಲ್ಲವಾಗಿ ಬಿಡುವ
ವರ್ಷಕಾಲದ ನೀಲಿ ಬಣ್ಣದ ಹೂವೇ?
ಅನನ್ಯ ಸೌಂದರ್ಯದ ಖನಿಯೇ
ನಿನ್ನರಳುವಿಕೆಯ,,,,,
ನಿನ್ನ ಬರುವಿಕೆಯ
ಸದುದ್ದೇಶವಾದರೂ ಏನು???
-ರೂಪಾ ಹೆಗಡೆ