
(ಸಿದ್ಧಾಪುರ,ಆ.31-) ಇಲ್ಲಿಯ ಕಲಾವಿದ ಶಿವಕುಮಾರ ದೇವತೆಗಳಿಗೆ ರೂಪ ಕೊಡುತ್ತಾರೆ ಎಂದರೆ ಕೇಳಿ ಒಪ್ಪುವುದು ಅಸಂಭವ, ಆದರೆ ಇವರ ಕಲಾಕೃತಿಗಳನ್ನು ನೋಡಿದರೆ ದೇವರಿಗೆ ರೂಪ ಕೊಡುವ ಕಲಾವಿದ ಶಿವಕುಮಾರ ಎನ್ನುವುದನ್ನು ಒಪ್ಪುತ್ತೀರಿ.
ಶಿವಕುಮಾರ ಸಿ.ಹಿರೇಮಠ ಹಂಪಿ ವಿಶ್ವವಿದ್ಯಾಲಯದ ಬದಾಮಿ ಕೇಂದ್ರದಲ್ಲಿ ಎ.ಟಿ.ಸಿ. ಮಾಡಿಕೊಂಡು ಹಿಂತಿರುಗಿದಾಗ ಕಲಾವಿದನಾಗುವುದು, ಉದ್ಯೋಗಿಯಾಗುವುದು ಎನ್ನುವ ಆಯ್ಕೆಗಳಿದ್ದವು. ಕಲಾಶಿಕ್ಷಕನಾಗಿ ಶಿಕಾರಿಪುರದಲ್ಲಿ ಕೆಲವು ವರ್ಷ ಕೆಲಸಮಾಡಿದ ಶಿವಕುಮಾರ ಗೆ ಉದ್ಯೋಗ ರುಚಿಸಲಿಲ್ಲ. ಅವರ ಕಲೆಯ ಮಾಯಗಾರನ ಮನಸ್ಸು ಪೇಂಟಿಂಗ್, ಕಲಾಕೃತಿಗಳತ್ತ ಹೊರಳಿದಾಗ ಕಲಿತ ಡೈರಿ ಡಿಪ್ಲೊಮಾ ಮತ್ತು ಎ.ಟಿ.ಸಿ. ವಿದ್ಯಾರ್ಹತೆ ಉದ್ಯೋಗಗಳನ್ನು ಬಿಟ್ಟು ಕುಂಚ, ಮಣ್ಣು,ಬಣ್ಣಗಳನ್ನು ಹಿಡಿದರು.
ಇದಕ್ಕಾಗಿ ಅವರ ಕೊಟ್ಟ ಸಮಯ,ಶ್ರಮ ಅಪಾರ. ಆದರೆ ಅವರ ಪ್ರಯತ್ನವನ್ನು ಜನ ಗುರುತಿಸತೊಡಗಿದ್ದು ಅವರು ಮಾಡುವ ಮಣ್ಣಿನ ಮೂರ್ತಿಗಳಿಂದ .
ಕಳೆದ ಐದು ವರ್ಷಗಳಿಂದ ಮಣ್ಣಿನ ಮೂರ್ತಿಗಳನ್ನು ಮಾಡುತ್ತಿರುವ ಶಿವಕುಮಾರ ಹಿರೇಮಠ ಈ ವರೆಗೆ ನೂರಾರು ಮೂರ್ತಿಗಳನ್ನು ಮಾಡಿದ್ದಾರೆ. ಆದರೆ ಅವರು ಪ್ರತಿವರ್ಷ ಮಾಡುವ ಒಂದು ವಿಶೇಶಮೂರ್ತಿ ರಚನೆ ಇದೆಯಲ್ಲಾ ಅದರಲ್ಲಿ ಅವರ ಪ್ರತಿಭೆ, ಶ್ರಮ ಎದ್ದು ಕಾಣುತ್ತದೆ.
ಕಡಿಮೆ ಕೆಲಸ ಹಿಡಿದುಕೊಂಡು ಅದಕ್ಕೇ ಸಮಯ ನೀಡುವುದು ಶಿವಕುಮಾರ ರೂಢಿ ಮತ್ತು ಅಭ್ಯಾಸ. ಅವರು ಮಾಡಿರುವ ಕ್ಲೇ ವರ್ಕ್, ಪೇಟಿಂಗ್, ಮೂರ್ತಿ, ಕಲಾಕೃತಿ, ಸ್ಮರಣಿಕೆ ಎಲ್ಲದರಲ್ಲೂ ಅವರದೇ ಅನನ್ಯತೆ, ವೈಶಿಷ್ಟ್ಯತೆ. ಶಿವಪಾರ್ವತಿ, ಸಾಯಿಬಾಬಾ ಗಣಪತಿ,ಬಾಹುಬಲಿ, ಗಂಗಾಂಬಿಕೆ ಒಂದೊಂದು ಮೂರ್ತಿಗಳೂ ಶ್ರಮದ ಕತೆ ಬಿತ್ತರಿಸುತ್ತವೆ.
ಹೀಗೆ ವರ್ಷಕ್ಕೊಂದು ಮಣ್ಣಿನ ಮೂರ್ತಿ ಮಾಡುವ ಶಿವಕುಮಾರ ಹಿರೇಮಠ ಸದ್ದು ಮಾಡದ ಕಲಾವಿದ. ಪ್ರತಿವರ್ಷ ಗಣೇಶ್ ಚತುರ್ಥಿಗೆ ಜೂನ್ ಒಳಗೆ ಬೇಡಿಕೆ ಇಟ್ಟವರಿಗೆ ಮಾತ್ರ ಗಣಪತಿ, ವಿಶಿಷ್ಟ ಗಣೇಶ್ ಮೂರ್ತಿ ಮಾಡುವ ಶಿವಕುಮಾರ ಮಾಡಿದ ಮಣ್ಣಿನ ಮೂರ್ತಿ ನೋಡಿದವರು ಈ ಮೂರ್ತಿ ಮಾಡಿದ ಕಲಾವಿದ ಯಾರು ಎಂದು ಕೇಳದಿದ್ದರೆ ನೋಡಿದವರಲ್ಲೇ ಎನೋ ಐಬು ಎನ್ನಬೇಕು. ಇಂಥ ವಿಶಿಷ್ಟ, ವಿಶೇಶ ಮೂರ್ತಿ ರಚನೆಯ ಮೂಲಕ ಹೆಸರು ಮಾಡಿರುವ ಶಿವಕುಮಾರ ಸಿದ್ಧಾಪುರದ ರಾಮೇಶ್ವರ ನಗರದ ಪಶುವೈದ್ಯ ಡಾ.ಹಿರೇಮಠರ ಮಗ. ಅಪ್ಪನಂತೆ ಜಾನುವಾರು ಸೇವೆ ಮಾಡುವ ಬದಲು ಕಲೆಯ ಕುಂಚ ಹಿಡಿದವರು ಈಗ ಪ್ರತಿಭಾವಂತ ಕಲಾವಿದರಾಗಿ ಹೆಸರುಮಾಡುತಿದ್ದಾರೆ.
ಕಲೆಯ ಒಲುಮೆಗೆ ಬೇಕಾಗುವ ಸಮಯ,ಶ್ರದ್ಧೆ,ತಾಳ್ಮೆ ರೂಢಿಸಿಕೊಂಡಿರುವ ಶಿವಕುಮಾರ ದೊಡ್ಡಕಲಾವಿದನಾಗಬಲ್ಲ ವ್ಯಕ್ತಿ ಎಂದರೆ ಅದು ಭವಿಷ್ಯದ ಸತ್ಯ. ಮಣ್ಣು,ಬಣ್ಣ ಪರಿಸರ ಸ್ನೇಹಿ ಚಿಂತನೆ ಹೀಗೆ ಕಲಾವಿದನ ಸಮಾಜಮುಖಿ ಅಗತ್ಯಗಳನ್ನು ಕರಗತಮಾಡಿಕೊಂಡಿರುವ ಶಿವಕುಮಾರ ಭವಿಷ್ಯದ ಮೇರು ಕಲಾವಿದ. ಇವರು, ಇವರ ಪ್ರತಿಭೆಯಿಂದ ಸಿದ್ಧಾಪುರ ಮತ್ತು ಮೂಲಊರು ಹಾವೇರಿಗೂ ಗೌರವ. ಸಿದ್ಧಾಪುರದ ಬಹುತೇಕ ಅತ್ಯುತ್ತಮ ಮೂರ್ತಿಗಳ ಹಿಂದಿನ ಕೈಚಳಕ ವಾಗಿರುವ ಶಿವಕುಮಾರ ರಿಗೆ ಸಮಾಜಮುಖಿಯ ಅಭಿನಂದನೆಯ ಕೆಂಪು ಸಲಾಮ್.
ರವಿವಾರ ಗೌರಿ, ಸೋಮವಾರ ಗಣಪತಿ ನಾಡಿಗೆ,
ಪರಿಸರ ಸ್ನೇಹಿಗಳಾದ ಕಲಾವಿದರು
ಪುರಾಣ, ಚರಿತ್ರೆಯಲ್ಲಿ ವೈದಿಕತೆಯ ವಿಜೃಂಬಣೆಗೆ ಸೃಷ್ಟಿಯಾದ, ನಂತರ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲೂ ಕೆಲಸ ಮಾಡಿದ ಗೌರಿ-ಗಣೇಶನ ಹಬ್ಬವನ್ನು ಎಲ್ಲೆಲ್ಲೂ ಆಚರಿಸಲಾಗುತ್ತಿದೆ.
ಮುಂಬೈ, ಕೊಲ್ಲಾಪುರ ನಂತರ ಹುಬ್ಬಳ್ಳಿ,ಕರಾವಳಿ ಯಲ್ಲೆಡೆ ಆಚರಿಸಲಾಗುವ ಗಣೇಶನ ಹಬ್ಬಕ್ಕೆ ಜನತೆ ಸಿದ್ಧತೆಯಲ್ಲಿ ತೊಡಗಿದ್ದಾರೆ.ಸಂಪ್ರದಾಯದಂತೆ ರವಿವಾರ ಸ್ವರ್ಣಗೌರಿ ಪೂಜೆಯಿಂದ ಪ್ರಾರಂಭವಾಗುವ ವಿನಾಯಕ ಚತುರ್ಥಿ ಸೋಮವಾರ ಏಕಕಾಲದಲ್ಲಿ ಗೌರಿ-ಗಣೇಶನನ್ನು ಪ್ರತಿಷ್ಠಾಪಿಸುವ ಮೂಲಕ ಹಬ್ಬದ ಪ್ರಾರಂಭ ವಿದ್ಯುಕ್ತವಾಗಿ ಆರಂಭವಾಗುತ್ತದೆ.
ಸಿದ್ಧಾಪುರ ತಾಲೂಕಿನಾದ್ಯಂತ ಗ್ರಾಮಗ್ರಾಮಗಳಲ್ಲಿ ಗೌರಿ ತುಂಬುವ ವಿಧಿ ನಡೆದರೆ, ಕೆಲವು ಗ್ರಾಮಗಳಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮೂಲಕ ಗಣೇಶ್ ಚತುರ್ಥಿ ಆಚರಿಸಲಾಗುತ್ತದೆ.
ಈ ಹಬ್ಬಕ್ಕೆಂದೇ ಗಣಪತಿ ಮೂರ್ತಿ ತಯಾರಿಸುವ ನೂರಾರು ಕಲಾವಿದರು ಸಿದ್ಧಾಪುರದಲ್ಲಿದ್ದು ನೂರಾರು ಗಣಪತಿ ಮೂರ್ತಿಗಳನ್ನು ತಯಾರಿಸುವ ಗೋಡೆ ಆಟ್ರ್ಸನ ಸತ್ಯನಾರಾಯಣ ಹೆಗಡೆ ಮೂರ್ತಿ ತಯಾರಿಕೆಯನ್ನೇ ವೃತ್ತಿ-ಪ್ರವೃತ್ತಿ ಮಾಡಿಕೊಂಡಿದ್ದಾರೆ.
ತಮ್ಮ ತಾಯಿಯಿಂದ ಗಣಪತಿ ಮೂರ್ತಿ ಮಾಡುವ ಅಭ್ಯಾಸ ರೂಢಿಸಿಕೊಂಡ ಅವರಿಗೆ ಈಗ ಕೈತುಂಬಾ ಕೆಲಸ. ಸಿದ್ಧಾಪುರ ಮತ್ತು ಗ್ರಾಮೀಣ ಪ್ರದೇಶಗಳ ನೂರಾರು ಗಣಪತಿ ಮಾಡಿಕೊಡುವ ಇವರ ವೈಶಿಷ್ಟ್ಯ ಪರಿಸರಸ್ನೇಹಿ ಗಣಪ. ಹಾರ್ಸಿಕಟ್ಟಾದಲ್ಲಿ ವಿಶ್ವನಾಥ ಶೇಟ್,ಸುಂಗೋಳಿಮನೆಯಲ್ಲಿ ಆಯ್.ಕೆ.ನಾಯ್ಕ ನಗರದ ಶಿವಕುಮಾರ ಹಿರೇಮಠ ಸೇರಿದಂತೆ ಕೆಲವರು ತಮ್ಮ ವಿಶಿಷ್ಟ ಕಲೆ,ಪ್ರತಿಭೆಯ ಅನನ್ಯ ಗಣೇಶ ಮೂರ್ತಿ ಮಾಡುವಲ್ಲಿ ಸಿದ್ಧಹಸ್ತರು. ಸಿದ್ಧಾಪುರದ ಬಹುತೇಕ ಎಲ್ಲಾ ಕಲಾವಿದರೂ ರಾಸಾಯನಿಕ ರಹಿತ, ಮಾಲಿನ್ಯನಿರೋಧಕ ವಸ್ತುಗಳಿಂದ ಗಣಪತಿ ಮೂರ್ತಿ ಮಾಡುವುದರಿಂದ ಅವರೆಲ್ಲರೂ ಪರಿಸರ ಪೂರಕ ಕಲಾವಿದರೆನಿಸಿಕೊಳ್ಳುತಿದ್ದಾರೆ.
ಕಲಾವಿದ ಶಿವಕುಮಾರ ಹಿರೇಮಠ ಅಷ್ಟಗಂಧದ ಗಣಪತಿ ಮಾಡಿ ಕುಡಿಯುವ ನೀರಿನಲ್ಲಿ ಕೂಡಾ ಮುಳುಗಿಸುವ ಮೂರ್ತಿಗಳನ್ನು ತಯಾರಿಸಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.





