
ಪುರಾಣ, ಚರಿತ್ರೆಯಲ್ಲಿ ವೈದಿಕತೆಯ ವಿಜೃಂಬಣೆಗೆ ಸೃಷ್ಟಿಯಾದ, ನಂತರ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲೂ ಕೆಲಸ ಮಾಡಿದ ಗೌರಿ-ಗಣೇಶನ ಹಬ್ಬವನ್ನು ಎಲ್ಲೆಲ್ಲೂ ಆಚರಿಸಲಾಗುತ್ತಿದೆ.
ಮುಂಬೈ, ಕೊಲ್ಲಾಪುರ ನಂತರ ಹುಬ್ಬಳ್ಳಿ,ಕರಾವಳಿ ಯಲ್ಲೆಡೆ ಆಚರಿಸಲಾಗುವ ಗಣೇಶನ ಹಬ್ಬಕ್ಕೆ ಜನತೆ ಸಿದ್ಧತೆಯಲ್ಲಿ ತೊಡಗಿದ್ದಾರೆ.ಸಂಪ್ರದಾಯದಂತೆ ರವಿವಾರ ಸ್ವರ್ಣಗೌರಿ ಪೂಜೆಯಿಂದ ಪ್ರಾರಂಭವಾಗುವ ವಿನಾಯಕ ಚತುರ್ಥಿ ಸೋಮವಾರ ಏಕಕಾಲದಲ್ಲಿ ಗೌರಿ-ಗಣೇಶನನ್ನು ಪ್ರತಿಷ್ಠಾಪಿಸುವ ಮೂಲಕ ಹಬ್ಬದ ಪ್ರಾರಂಭ ವಿದ್ಯುಕ್ತವಾಗಿ ಆರಂಭವಾಗುತ್ತದೆ.
ಸಿದ್ಧಾಪುರ ತಾಲೂಕಿನಾದ್ಯಂತ ಗ್ರಾಮಗ್ರಾಮಗಳಲ್ಲಿ ಗೌರಿ ತುಂಬುವ ವಿಧಿ ನಡೆದರೆ, ಕೆಲವು ಗ್ರಾಮಗಳಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮೂಲಕ ಗಣೇಶ್ ಚತುರ್ಥಿ ಆಚರಿಸಲಾಗುತ್ತದೆ.
ಈ ಹಬ್ಬಕ್ಕೆಂದೇ ಗಣಪತಿ ಮೂರ್ತಿ ತಯಾರಿಸುವ ನೂರಾರು ಕಲಾವಿದರು ಸಿದ್ಧಾಪುರದಲ್ಲಿದ್ದು ನೂರಾರು ಗಣಪತಿ ಮೂರ್ತಿಗಳನ್ನು ತಯಾರಿಸುವ ಗೋಡೆ ಆಟ್ರ್ಸನ ಸತ್ಯನಾರಾಯಣ ಹೆಗಡೆ ಮೂರ್ತಿ ತಯಾರಿಕೆಯನ್ನೇ ವೃತ್ತಿ-ಪ್ರವೃತ್ತಿ ಮಾಡಿಕೊಂಡಿದ್ದಾರೆ.
ತಮ್ಮ ತಾಯಿಯಿಂದ ಗಣಪತಿ ಮೂರ್ತಿ ಮಾಡುವ ಅಭ್ಯಾಸ ರೂಢಿಸಿಕೊಂಡ ಅವರಿಗೆ ಈಗ ಕೈತುಂಬಾ ಕೆಲಸ. ಸಿದ್ಧಾಪುರ ಮತ್ತು ಗ್ರಾಮೀಣ ಪ್ರದೇಶಗಳ ನೂರಾರು ಗಣಪತಿ ಮಾಡಿಕೊಡುವ ಇವರ ವೈಶಿಷ್ಟ್ಯ ಪರಿಸರಸ್ನೇಹಿ ಗಣಪ. ಹಾರ್ಸಿಕಟ್ಟಾದಲ್ಲಿ ವಿಶ್ವನಾಥ ಶೇಟ್,ಸುಂಗೋಳಿಮನೆಯಲ್ಲಿ ಆಯ್.ಕೆ.ನಾಯ್ಕ ನಗರದ ಶಿವಕುಮಾರ ಹಿರೇಮಠ ಸೇರಿದಂತೆ ಕೆಲವರು ತಮ್ಮ ವಿಶಿಷ್ಟ ಕಲೆ,ಪ್ರತಿಭೆಯ ಅನನ್ಯ ಗಣೇಶ ಮೂರ್ತಿ ಮಾಡುವಲ್ಲಿ ಸಿದ್ಧಹಸ್ತರು. ಸಿದ್ಧಾಪುರದ ಬಹುತೇಕ ಎಲ್ಲಾ ಕಲಾವಿದರೂ ರಾಸಾಯನಿಕ ರಹಿತ, ಮಾಲಿನ್ಯನಿರೋಧಕ ವಸ್ತುಗಳಿಂದ ಗಣಪತಿ ಮೂರ್ತಿ ಮಾಡುವುದರಿಂದ ಅವರೆಲ್ಲರೂ ಪರಿಸರ ಪೂರಕ ಕಲಾವಿದರೆನಿಸಿಕೊಳ್ಳುತಿದ್ದಾರೆ.
ಕಲಾವಿದ ಶಿವಕುಮಾರ ಹಿರೇಮಠ ಅಷ್ಟಗಂಧದ ಗಣಪತಿ ಮಾಡಿ ಕುಡಿಯುವ ನೀರಿನಲ್ಲಿ ಕೂಡಾ ಮುಳುಗಿಸುವ ಮೂರ್ತಿಗಳನ್ನು ತಯಾರಿಸಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.


