ಝೆನ್-
ಬೇಸರವಿಲ್ಲದ ಲಿಪಿ
ಭಾರೀ ಉನ್ನತ ಹುದ್ದೆಯಲ್ಲಿದ್ದಂಥ ಅಧಿಕಾರಿಯೊಬ್ಬ ಒಮ್ಮೆ, ಗುರು ಟಕುಅನ್‍ನ ಹತ್ತಿರ ಬಂದ. ಜನರ ಅಹವಾಲುಗಳನ್ನು ಕೇಳಿಕೊಳ್ಳುವುದರಲ್ಲಿಯೂ ರಾಜ್ಯದ ಸ್ಥಿತಿಗತಿಗಳ ವರದಿಯನ್ನು ಪರಿಶೀಲಿಸುವುದರಲ್ಲಿಯೂ ತಾನು ಇಡೀ ದಿನ ಕಳೆಯುತ್ತಿರುವುದಾಗಿ ಹೇಳಿ, ಅದರಿಂದ ತನಗೆ ಬೇಸರವುಂಟಾಗಿಬಿಟ್ಟಿದೆ. ಎಂದ. ದಿನಗಳನ್ನು ಹೆಚ್ಚು ಉಪಯುಕ್ತವಾಗಿ ಕಳೆಯಲು ಏನಾದರೊಂದು ಉಪಾಯವನ್ನು ಕಾಣಿಸಿಕೊಡಲು ಬೇಡಿಕೊಂಡ.
ಟಕುಅನ್, ಬದಿಯಲ್ಲಿದ್ದ ಒಂದು ಕುಂಚ ಮತ್ತು ಕಾಗದವನ್ನೆತ್ತಿಕೊಂಡು ಎಂಟು ಲಿಪಿಗಳನ್ನು ಮೂಡಿಸಿ ಕಾಣಿಸಿದ. ಚೀನಿ ಭಾಷೆಯ ಆ ಲಿಪಿಗಳ ಒಟ್ಟೂ ಅರ್ಥ ಹೀಗೆ-
ಕಳೆದ ದಿನ ಮರಳುವುದಿಲ್ಲ, ಇಲ್ಲ,
ಒಂದಂಗುಲ ಕಾಲಕ್ಕಿರುವ ಬೆಲೆ
ಗೇಣುದ್ದದ ಪಚ್ಚೆಮಣಿಗಿಲ್ಲ, ಇಲ್ಲ.