

ಇತ್ತೀಚಿಗಷ್ಟೆ ‘ಪ್ರಶಾಂತಿ’ ಆಸ್ಪತ್ರೆಯಲ್ಲಿ ಮುಂಗೋಪಿ ರಂಗಪ್ಪ ‘ನಾನೊಬ್ಬ ರಾಜಕಾರಣಿ ಅನ್ನೊ ಅರಿವಿದ್ದರೂ ಈ ವೈದ್ಯರು ನನ್ನ ಅಣ್ಣನಿಗೆ ಬೇಗ ಉಪಚರಿಸುತ್ತಿಲ್ಲವಲ್ಲ’ ಅಂತಾ ಸಿಟ್ಟಿಗೆದ್ದು ರಟ್ಯಾನಕಸುವನ್ನೆಲ್ಲಾ ಒಟ್ಟುಮಾಡಿ ವೈದ್ಯರ ಕೆಣ್ಣೆಗೆ ನಾಲ್ಕು ಬಿಟ್ಟ ತಕ್ಷಣ ಇದ್ದಕ್ಕಿದ್ದಂತೆ ಪ್ರಶಾಂತಿಯಲಿ ಅಶಾಂತಿ ಸ್ಪೋಟಗೊಂಡಿತು.
ಕಿಡಿಗೇಡಿಗಳ ಕ್ರೌರ್ಯಕ್ಕೆ ಸೌಹಾರ್ದತೆಯ ಸುದ್ದಿ ಪಸರಿಸುತ್ತಿದ್ದ ದೂರದರ್ಶನದ ಗಾಜು ಒಡೆದು ಪುಡಿಪುಡಿಯಾಯಿತು. ತೀವ್ರ ಹಲ್ಲೆಗೊಳಗಾದ ವೈದ್ಯ ಪಾಟೀಲರ ದುಸ್ಥಿತಿ ಕಂಡ ಆಸ್ಪತ್ರೆ ಸಿಬ್ಬಂದಿ ದೌಡಾಯಿಸಿ ಪೊಲೀಸ್‍ರಿಗೆ ಪೋನ್ ಮಾಡಿದರು, ಪೊಲೀಸ್ ಜೀಪು ಮತ್ತು ಬೂಟು-ಲಾಟಿಯ ಶಬ್ಧಕ್ಕಂಜಿ ಕೊಂಚ ವಾತವಾರಣ ತಿಳಿಯಾಯಿತು. ರಂಗಪ್ಪನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳದೆ ಪೊಲೀಸ್ ವ್ಯವಸ್ಥೆ ರಾಜಿಪಂಚಾಯ್ತಿ ಮಾಡಿ ಕೈ ತೊಳೆದುಕೊಂಡಿತು.
ಮರುದಿನ ವೈದ್ಯ ಪಾಟೀಲ್‍ರ ಮಗ ತನ್ನ ಗೆಳೆಯರ ಅರ್ಥಾತ್ ಎ.ಬಿ.ವಿ.ಪಿ ಸಂಘಟನೆಯರನ್ನು ಕಂಡು “ನಮ್ಮಪ್ಪನ ಪರವಾಗಿ ಬೀದಿಗಿಳಿದು ಗಟ್ಟಿಯಾದ ಧ್ವನಿ ಏತ್ತೋಣ” ಅಂತಾ ಅಲವತ್ತುಕೊಂಡ. ಇತ್ತ ವೈದ್ಯರ ಪತ್ನಿ ಪಾರ್ವತಿ ‘ಸನಾತನ’ ಸಂಸ್ಥೆಯವರನ್ನು ಬಳಿಹೋಗಿ “ಅಕ್ಕಾ ನಮ್ಮ ಯಜಮಾನ್ರ ಮೇಲೆ ಹಲ್ಲೆಮಾಡಿದ ಆ ರೌಡಿರಾಜಕಾರಣಿ ರಂಗಪ್ಪನ ಕ್ರಮವನ್ನು ಖಂಡಿಸಿ ನಾವೆಲ್ಲರೂ ಮೌನಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಒಂದು ಮನವಿ ಕೊಡೋಣ” ಅಂತಾ ವಿನಂತಿಸಿಕೊಂಡಳು. ಇನ್ನು ವೈದ್ಯರ ಬಂಧುಗಳೆಲ್ಲ ಅಪ್ಪಟ ಹಿಂದೂವಾಗಿರುವುದರಿಂದ ಆರ್.ಎಸ್.ಎಸ್./ಭಜರಂಗದಳ ಮುಂತಾದ ಹಿಂದೂ ಸಂಘಟಣೆಗಳನ್ನು ಕಂಡು ಕಣ್ಣೀರಿಟ್ಟರು. ದುರಂತ ಅಂದ್ರೆ ಯಾರೂ ಸ್ಪಂದಿಸಲಿಲ್ಲ, ಕಾರಣ ರಂಗಪ್ಪನೂ ಓರ್ವ ಹಿಂದೂವಾದಿಯಾಗಿರುವುದರಿಂದ ಎಲ್ಲರೂ ‘ಮಂಗಲ ಗೋ ಯಾತ್ರೆ’ಯಲಿ ಮಗ್ನರಾದರು.
“ಜನಪರ ಕಾಳಜಗಿಂತ ಆ ದನಪರ ಕಾಳಜಿಯೇ ನಿಮಗೆ ಹೆಚ್ಚಾಯಿತಲ್ಲ, ಥೂ.. ನಿಮ್ಮ ಜನ್ಮಕ್ಕೊಂದಿಷ್ಟು..” ಹೀಗೆ ಹಿಡಿಶಾಪ ಹಾಕಿ ವೈದ್ಯರ ಪತ್ನಿ ಪಾರ್ವತಿ ಮನೆಯತ್ತ ಮುಖ ಮಾಡಿದಳು. ಮನೆಕಡೆ ಬರುವ ಪಾರ್ವತಿಯನ್ನು ನೋಡಿ, ಪಕ್ಕದ್ಮನೆ ಗುಂಡ “ಅಮ್ಮ ಪಾರ್ವತಿ ಅಂಟಿ ‘ಘರ್ ವಾಪಸ್ಸಿ’ ಅಂತಾ ಕಿಸಕ್ಕನೆ ನಕ್ಕುಬಿಟ್ಟ.
- * *
ಪರೋಕ್ಷವಾಗಿ ರೌಡಿರಂಗಪ್ಪನ ಪರವಾಗಿರುವ ಈ ಕೊಳಕು ವ್ಯವಸ್ಥೆಯನ್ನು ಕಂಡು ರೋಷಿ ಹೋದ ಡಾಕ್ಟರ್ ಪತ್ನಿ ಪಾರ್ವತಿ ಸಧ್ಯ ಪ್ರಗತಿಪರ ಚಿಂತಕಿಯಾಗಿ ಬೀದಿಗಿಳಿದು ಹೀಗೆ ಭರಪೂರ ಭಾಷಣ ಮಾಡುತ್ತಿದ್ದಾಳೆ. “ಬಂಧುಗಳೆ, ಗಡಿಯಲಿ ಆಕಡೆಯವರ ಗುಂಡಿಗೆ ನಮ್ಮ ಸೈನಿಕರು ಬಲಿಯಾದಾಗ ಮಾತ್ರ ನಕಲಿ ದೇಶಭಕ್ತರ ನರನಾಡಿಗಳಲಿ ಒಮ್ಮಿಂದೊಮ್ಮೆಲೆ ರಕ್ತ ಕುದ್ದು ದೇಶಪ್ರೇಮ ಕೆರಳುತ್ತದೆ, ಆದರೆ ಹಿಂದೆ ಬೀಜ-ಗೊಬ್ಬರ ತರಲು ಬಂದ ರೈತರ ಎದೆಗೆ ಪೊಲೀಸ್ರು ಗುಂಡಿಟ್ಟಾಗ, ನಾಡಿನ ಪ್ರಗತಿಪರ ಚಿಂತಕರಾಗಿದ್ದ ಕಲ್ಬುರ್ಗಿ ಪನ್ಸಾರೆ ದಾಬೋಲ್ಕರ್ ಹತ್ಯೆಯಾದಾಗ, ಒಂದಿಷ್ಟು ಸಾಲಕ್ಕಂಜಿ ಸಾಲುಸಾಲು ರೈತರು ಆತ್ಮಹತ್ಯೆ ಮಾಡಿಕೊಂಡಾಗ, ನೋಟು ಬದಲಾಯಿಸಿಕೊಳ್ಳಲು ಸರದಿ ಸಾಲಿನಲ್ಲಿ ನಿಂತು ಸುಮಾರು ತೊಂಬತ್ಮೂರು ಬಡವರು ಸಾವಿಗೀಡಾದಾಗ, ದಲಿತರನ್ನು ಸವರ್ಣಿಯರು ಬಹಿಷ್ಕರಿಸಿದಾಗ ಯಾಕೆ ಈ ದೇಶಪ್ರೇಮಿಗಳು ಮೌನವಹಿಸುತ್ತಾರೆ? ಗಾಂಧಿ ಹತ್ಯೆಯಾದಾಗ, ಅನಂತಮೂರ್ತಿ ಅಸುನೀಗಿದಾಗ ಒಳಗೊಳಗೆ ಖುಷಿಪಟ್ಟವರು ದೇಶಪ್ರೇಮಿಗಳೆ?
ಯಾವುದು ದೇಶ ಪ್ರೇಮ? ಚಿತ್ರ ಮಂದಿರಗಳÀಲ್ಲಿ ಮೊದಲು ರಾಷ್ಟ್ರಗೀತೆ ಕೇಳುವುದೆ? ನಿತ್ಯ ಪಂಚಾಯತಿಗಳ ಮೇಲೆ ಧ್ವಜಾರೋಹಣ ಮಾಡುವುದೆ? ಭಾರತ ಮಾತಾಕಿ ಜೈ ಅನ್ನುವುದೆ? ಬಿ.ಜೆ.ಪಿ/ಎ.ಬಿ.ವಿ.ಪಿ/ಆರ್.ಎಸ್.ಎಸ್/ಶ್ರೀರಾಮ ಸೇನೆ/ಭಜರಂಗದಳ ಮಂತಾದ ಕೆಲ ಸಂಘಟನೆಗಳಲ್ಲಿ ಮಾತ್ರ ಸದಸ್ಯರಾಗಿರುವುದೆ? ಮುಸ್ಲಿಂರನ್ನು ಹಾಗೂ ನಾಸ್ತಿಕರನ್ನು ವಿರೋಧಿಸುವುದೆ? ಗೋ ಹತ್ಯೆ ನಿಷೇಧದ ಪರ ವಕಾಲತ್ತು ವಹಿಸುವುದೆ? ಜಾರಿಯಾಗಲಿರುವ ಮೌಢ್ಯ ನಿಷೇಧ ಕಾಯ್ದೆಯನ್ನು ವಿರೋಧಿಸುವುದೆ? ಹೆಂಡತಿಯ ಮೇಲೆ ಅನುಮಾನ ಪಟ್ಟು ಕಾಡಿಗಟ್ಟಿದ ಆ ರಾಮನನ್ನು ಜಪಿಸುವುದೆ? ಗಾಂಧೀಜಿಯವರನ್ನು ಕೊಂದ ಗೋಡ್ಸೆ ನಿಲುವನ್ನು ಒಳಗೊಳಗೆ ಸಮರ್ಥಿಸಿಕೊಳ್ಳುವುದೆ? ಜಾತಿ, ಧರ್ಮ, ದೇವರ ಹೆಸರಲ್ಲಿ ರಾಜಕೀಯ ಮಾಡುವುದೆ? ವಿಚಾರಿಸದೆ, ಪ್ರಶ್ನಿಸದೆ, ತರ್ಕಿಸದೆ ಅಥವಾ ವೈಚಾರಿಕತೆಗೆ ತೆರೆದುಕೊಳ್ಳದಿರುವುದು ದೇಶಪ್ರೇಮವೆ? ನೈತಿಕ ಪೊಲೀಸ್‍ಗಿರಿ ನಡೆಸುವುದೆ? ಚಡ್ಡಿ ಧರಿಸಿ ಪಥಸಂಚಲನದಲ್ಲಿ ಪಾಲ್ಗೊಳ್ಳುವುದೆ? ಹಿಂಡದೆ, ಹೆಂಡಿಬಳಿಯದೆ ತುಪ್ಪ ತಿಂದು ತೆಪ್ಪಗೆ ಒಂದು ಆಯಾಕಟ್ಟಿನ ಖುರ್ಚಿ ಹಿಡಿದುಕೊಳ್ಳುವುದೆ? ಬುರ್ಕಾಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ಧರ್ಮದ ನಶೆಯಲಿ ಕಾಲೇಜ್ ಕಟ್ಟೆ ಹತ್ತುವುದೆ?
ನಿಜಕ್ಕೂ ಯಾವುದು ದೇಶಪ್ರೇಮ, ಯಾವುದು ದೇಶದ್ರೋಹ ಎಲ್ಲವೂ ಕಲಸುಮೇಲೋಗರವಾಗಿದೆ. ಇಂದಿನ ಯುವಕರಿಗಂತೂ ಸತ್ಯ ಮಿಥ್ಯವಾಗಿದೆ, ಮಿಥ್ಯವೇ ಸತ್ಯವಾಗಿದೆ. ಸುಳ್ಳು ಕೊಡುವಷ್ಟು ಸುಖ ಸತ್ಯ ಯಾವತ್ತೂ ಕೊಡದು. ಎಲ್ಲರೂ ಇಂದು ಭ್ರಮೆ ಹುಟ್ಟಿಸುವ ಭ್ರಷ್ಟರಿಗೆ ಮತ, ಮಣೆ ಹಾಕಿ ಬೆಂಬಲಿಸುತ್ತಿದ್ದಾರೆ. ‘ಸತ್ಯ ಕಹಿಯಾಗಿರುತ್ತದೆ ಮತ್ತು ಅಪ್ರಿಯವಾಗಿರುತ್ತದೆ’ ಅನ್ನೊ ಅನುಭವಿಕರ ನುಡಿಯನ್ನು ನಮ್ಮ ಯುವಜನಾಂಗ ಅರ್ಥೈಸಿಕೊಳ್ಳದಿರುವುದು ದೊಡ್ಡ ದುರಂತ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಪೆರಿಯಾರ್, ಫುಲೆ ಮುಂತಾದವರ ಬದುಕು-ಬರಹವನ್ನು ಓದಿದರೆ ಮಾತ್ರ ನಿಜವಾದ ದೇಶಪ್ರೇಮ ಯಾವುದು ಅನ್ನೊದು ಮನದಟ್ಟಾಗುತ್ತದೆ. ಆದರೆ ಈ ಕುರಿತು ಬಹುಪಾಲು ವಿದ್ಯಾರ್ಥಿಗಳು ಓದುವುದೆ ಇಲ್ಲ. ಬಾವಿಕಪ್ಪೆಗಳು ಹೇಳುವುದಷ್ಟೆ ಮತ್ತು ಬರೆಯುವುದಷ್ಟೆ ಸತ್ಯವಲ್ಲ ಅದರಾಚೆಗೂ ಒಂದು ವಿಶಾಲವಾದ ಸರೋವರ ಇದೆ ಅನ್ನೊ ಕನಿಷ್ಟ ಕಲ್ಪನೆಯಾದರೂ ಇರಲಿ. ಎಲ್ಲವನ್ನೂ ಒಂದು ತಕ್ಕಡಿಯಲ್ಲಿಟ್ಟು ತೂಗಿ ನೋಡಿದಾಗ ಮಾತ್ರ ಸತ್ಯ ಗೊತ್ತಾಗುತ್ತದೆ.
ಈ ದೇಶ ಅನ್ನೊ ಕ್ಯಾನವಾಸ್ ಮೇಲೆ ವರ್ಣರಂಜಿತ ಅಮೂರ್ತ ಕಲಾಕೃತಿಯೊಂದು ನನ್ನ ಒಳಗಣ್ಣಿಗೆ ಹೀಗೆ ಸೂಕ್ಷ್ಮವಾಗಿ ಕಾಣಿಸುತ್ತಿದೆ ‘ಅಪಾಯದ ಸಂಕೇತವಾಗಿರುವ ಕೆಂಪು ವರ್ಣ ಸಧ್ಯ ಕ್ರಾಂತಿಯ ಕಹಳೆಯನ್ನೂದುತ್ತಿದೆ, ಆದರೆ ತ್ಯಾಗದ ಸಾಂಕೇತಿಕ ಅರ್ಥ ಸೂಚಿಸುವ ಕೇಸರಿವರ್ಣ ಬಡವರ, ದಲಿತರ, ಹಿಂದುಳಿದವರ, ರೈತರ ನೆತ್ತಿಯ ಮೇಲಿನ ತೂಗುಗತ್ತಿಯಾಗಿ ನನ್ನೊಳಗೆ ಅಪಾಯದ ಭೀತಿ ಹುಟ್ಟಿಸಿದೆ. ‘ಏಳು ಬಣ್ಣ ಸೇರಿ ಬಿಳಿಯ ಬಣ್ಣ’ ಅನ್ನೊ ಅನನ್ಯ ಹಾಡು ಅರ್ಥಕಳೆದುಕೊಂಡು ಆಲಾಪಿಸುತ್ತಿದೆ. ಕೆಂಪುಗಿಂತ ಕೇಸರಿಯೇ ಅಪಾಯವೆನ್ನುವ ನನ್ನ ಗ್ರಹಿಕೆಗೆ ಕೋಮುವಾದಿಗಳು ದೇಶದ್ರೋಹಿ ಹಣೆಪಟ್ಟಿ ಹಚ್ಚಬಹುದು. ದೇಶಪ್ರೇಮದ ಹೆಸರಿನಲ್ಲಿಯೇ ಅನೇಕರಿಂದು ತಮ್ಮ ಬೇಳೆ ಬೇಯಿಸಿಕೊಂಡು ಅಸಂಖ್ಯಾತ ಮುಗ್ಧರನ್ನು ವಂಚಿಸುತ್ತಿದ್ದಾರೆ. ಜಾತಿ, ಮತ, ಪಂಥ-ಪಂಗಡ, ಪಕ್ಷಗಳನ್ನು ಬದಿಗಿಟ್ಟು ಒಟ್ಟು ನಮ್ಮ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಮಪಾಲು-ಸಮಬಾಳು ಸಿಗುವಂತಾಗಲು ಶ್ರಮಿಸುವುದೆ ನಿಜವಾದ ದೇಶಪ್ರೇಮ” ಇಷ್ಟು ಹೇಳಿ ಡಾಕ್ಟರ್ ಪತ್ನಿ ಭಾಷಣ ಮುಗಿಸಿದಾಗ ಕರತಾಡಣ ಮುಗಿಲು ಮುಟ್ಟಿತು.
ರಾಜಕೀಯ ಪುಡಾರಿ ರಂಗಪ್ಪನ ಸಿಟ್ಟಿನಿಂದಾದ ಆ ಹಲ್ಲೆಯ ಪ್ರಕರಣ, ಪಾರ್ವತಿಯಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿ ಗಟ್ಟಿ ಹೋರಾಟಗಾರ್ತಿಯನ್ನಾಗಿ ರೂಪಿಸಿತು. ಸ್ಥಳಿಯ ಚುನಾವಣೆಯಲ್ಲಿ ರೌಡಿರಂಗಪ್ಪನ ವಿರುದ್ಧವೇ ಸ್ಪರ್ಧಿಸಿ ಭಾರೀ ಅಂತರದಿಂದ ಗೆಲುವು ಸಾಧಿಸಿ ಪಾರ್ವತಿ ಸೇಡು ತೀರಿಸಿಕೊಂಡಳು. ಹಂತಹಂತವಾಗಿ ರಂಗಪ್ಪನನ್ನು ಹಾಗೂ ರಂಗಪ್ಪನಂತವರನ್ನೂ ಹೆಡಮುರಗಿ ಕಟ್ಟಿ ಊರಲ್ಲಿ ಶಾಂತಿ ನೆಲೆಸುವಂತೆ ಮಾಡಿದಳು.
-ವೀರಲಿಂಗನಗೌಡ್ರ.
