
ಈ ಕ್ಷೇತ್ರದಲ್ಲಿ ಜನಪ್ರತಿನಿಧಿಗಳು ಏನು ಮಾಡುತ್ತಿದ್ದೀರಿ? ಜನಪ್ರತಿನಿಧಿಗಳಿಗೆ ಕಿಂಚಿತ್ ಕಾಳಜಿ ಇಲ್ಲವೆ? ಹೀಗೆಂದು ಪ್ರಶ್ನಿಸಿದವನು ಒಬ್ಬ ವಿದ್ಯಾರ್ಥಿ, ಈತ ಪ್ರಶ್ನಿಸಿದ್ದು ಸ್ನೇಹಿತರು, ಕುಟುಂಬಸ್ಥರ ಎದುರಿಗಲ್ಲ, ತಾಲೂಕಾ ಪಂಚಾಯತ್ ಕೆ.ಡಿ.ಪಿ.ಸಭೆಯಲ್ಲಿ.
ಇಂದು ಇಲ್ಲಿಯ (ಸಿದ್ಧಾಪುರ) ತಾ.ಪಂ. ಸಭಾಭವನದಲ್ಲಿ ತಾ.ಪಂ. ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮಾಸಿಕ ಕೆ.ಡಿ.ಪಿ. ಸಭೆ ನಡೆಯಿತು. ಈ ಸಭೆಗೆ ತಮ್ಮ ಅಹವಾಲು ಹೇಳಿಕೊಳ್ಳಲು ಬಂದಿದ್ದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸಭೆಯಲ್ಲಿ ಸೇರಿದ್ದರು.
ಇವರ ಪ್ರತಿನಿಧಿಯಾಗಿ ವೇದಿಕೆಗೆ ಬಂದ ವಿದ್ಯಾರ್ಥಿ ಹರೀಶ್ ನೀವೆಲ್ಲಾ ಏನು ಮಾಡುತಿದ್ದೀರಿ? ಕಳೆದ ಒಂದೆರಡು ವರ್ಷಗಳಿಗಿಂತ ಹೆಚ್ಚು ಅವಧಿಯಿಂದ ನಾವು ನಮ್ಮ ಬಸ್ ಅವ್ಯವಸ್ಥೆಯ ಸಮಸ್ಯೆ ಹೇಳುತ್ತಲೇ ಬರುತಿದ್ದೇವೆ. ಆದರೆ ನಿಮಗ್ಯಾರಿಗೂ ಈ ತೊಂದರೆ, ರಗಳೆ ಅರ್ಥವಾಗುವ ಹಾಗೆ ಕಾಣುವುದಿಲ್ಲ. ತಾಲೂಕಿನ ಏಕೈಕ ಸರ್ಕಾರಿ ಕಾಲೇಜಿಗೆ 8-10 ಕಿ.ಮೀ. ನಡೆದು ಬಂದು ಬಸ್ ಹತ್ತಿ ಅಧ್ಯಯನಕ್ಕೆ ಬರುವ ಅನೇಕ ವಿದ್ಯಾರ್ಥಿ,ವಿದ್ಯಾರ್ಥಿನಿ
ಗಳಿದ್ದೇವೆ. ನಮಗೆ ನಿತ್ಯ ನಿರಂತರ ಬಸ್ ಅವ್ಯವಸ್ಥೆಯ ತೊಂದರೆ, ಈ ಬಗ್ಗೆ ಅನೇಕ ಬಾರಿ ಮನವಿ ನೀಡಿ, ಪ್ರತಿಭಟನೆ ಮಾಡಿ ಬೇಡಿಕೆ ಇಟ್ಟರೂ ಪರಿಸ್ಥಿತಿ ಸುಧಾರಿಸಿಲ್ಲ, ವಿದ್ಯಾರ್ಥಿಗಳು ಪ್ರತಿಭಟನೆ ಮಾಡಲು ಹೋದರೆ ಪೊಲೀಸರು ದೂರು ದಾಖಲಿಸುತ್ತಾರೆ. ಇಂಥ ವ್ಯವಸ್ಥೆ ಯಾಕೆ? ಹೀಗಾದರೆ ನಾವು ಕೇಳುವುದ್ಯಾರನ್ನು ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರೀಯಿಸಿದ ತಾ.ಪಂ. ಅಧ್ಯಕ್ಷರು ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದರು. ಈ ಸಮಯದಲ್ಲಿ ಪ್ರತಿಕ್ರೀಯಿಸಿದ ತಾ.ಪಂ. ಸದಸ್ಯ ನಾಸಿರ್‍ಖಾನ್ ಸಾರಿಗೆ ಸಂಸ್ಥೆ ನೌಕರರಿಗೆ ನಾವು ಹೇಳಿ ಸುಸ್ತಾಗಿದ್ದೇವೆ. ಈ ಅವ್ಯವಸ್ಥೆ ಸುಧಾರಿಸುವುದು ಕಷ್ಟ ಎಂದರು. ಇದಕ್ಕೆ ಪ್ರತಿಕ್ರೀಯಿಸಿದ ಸಾರಿಗೆ ಸಂಸ್ಥೆ ಪ್ರತಿನಿಧಿ ಎಂ.ಡಿ.ನಾಯ್ಕ ಸಭೆಯ ಅಭಿಪ್ರಾಯ, ಬೇಡಿಕೆ ಮೇಲಿನ ಅಧಿಕಾರಿಗಳಿಗೆ ತಿಳಿಸುತ್ತೇವೆ ಎಂದರು.
ಯಾಕೆ ಈ ಸ್ಥಿತಿ-
ನಗರದಲ್ಲಿ ಸ್ಥಾಪನೆಯಾಗಬೇಕಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಜಕಾರಣಿಗಳ ಒಳಒಪ್ಪಂದದಿಂದಾಗಿ ಗ್ರಾ.ಪಂ. ಪ್ರದೇಶದಲ್ಲಿ ಸ್ಥಾಪನೆಯಾಗಿದೆ. ಈ ಕಾಲೇಜು, ಇಲ್ಲಿಯ ಸಮಸ್ಯೆ, ತೊಂದರೆಗಳ ಬಗ್ಗೆ ಈ ಜಿಲ್ಲೆಯ ಸಂಸದ ಅನಂತಕುಮಾರ ಹೆಗಡೆ ಅವರ ರಾಜಕೀಯ ಜೀವನದಲ್ಲಿ ಯಾವಾಗಲೂ ಕೇಳಿದ್ದಿಲ್ಲ, ಶಾಸಕರು, ಸಚಿವರು ಈಗ ವಿಧಾನಸಭಾ ಅಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಹಿಂದಿನ ಅವಧಿಯಲ್ಲಿ ತಾನು ವಿರೋಧಿ ಪಕ್ಷದ ಶಾಸಕ ಹಾಗಾಗಿ ಈ ಸರ್ಕಾರದಲ್ಲಿ ನಮ್ಮ ಕೆಲಸ ಆಗುತ್ತಿಲ್ಲ ಎಂದು ಅಲವತ್ತುಕೊಳ್ಳುತಿದ್ದರು. ಈಗ ರಾಜ್ಯ ವಿಧಾನಸಭಾ ಅಧ್ಯಕ್ಷರಾಗಿರುವ ಕಾಗೇರಿ ಕಳೆದ ವಾರ ಇದೇ ಸರ್ಕಾರಿ ಮಹಾವಿದ್ಯಾಲಯದ ಕಾರ್ಯಕ್ರಮಕ್ಕೆ ಬಂದವರು ಮತ್ತೆ ಭರವಸೆ ನೀಡಿ ತೆರಳಿದ್ದರು. ಹೀಗೆ ಶಾಸಕರ ಭರವಸೆ, ಅಧಿಕಾರಿಗಳ ಉಪೇಕ್ಷೆಯಿಂದ ನೊಂದ ವಿದ್ಯಾರ್ಥಿಗಳು ಕಳೆದ ವರ್ಷಕೂಡಾ ತಾ.ಪಂ. ಸಭೆಗೆ ಬಂದು ತಮ್ಮ ತೊಂದರೆ ಹೇಳಿಕೊಂಡಿದ್ದರು. ಈಗ ಮತ್ತೆ ತಾ.ಪಂ. ಸಭೆಗೆ ಬಂದು ತಾ.ಪಂ. ಸದಸ್ಯರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳಿಗೆ ಶಾಸಕರ ಪಕ್ಷದವರು, ತಾ.ಪಂ. ಸ್ಥಾಯಿ ಸಮೀತಿ ಅಧ್ಯಕ್ಷರೂ ಆಗಿರುವ ಮಹಾಬಲೇಶ್ವರ ಹೆಗಡೆ ನಾವೂ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೇವೆ. ನೀವು ಪ್ರತಿಭಟನೆ ಮಾಡುವುದಾದರೆ ನಾವೂ ಬರುತ್ತೇವೆ ಎಂದರು.
ಆಗ ಪ್ರತಿಕ್ರೀಯಿಸಿದ ವಿದ್ಯಾರ್ಥಿಗಳು ಬಸ್ ಬೇಡಿಕೆ ಹಿನ್ನೆಲೆಯಲ್ಲಿ ಪ್ರತಿಭಟಸಲು ಮುಂದಾದರೆ ಪೊಲೀಸರು ಪ್ರಕರಣ ದಾಖಲಿಸುತ್ತಾರೆ.ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲು ಕೇಳಿದರೆ ಪೊಲೀಸ್ ಪ್ರಕರಣ ದಾಖಲಿಸುವುದಾದರೆ ನಮ್ಮ ಭವಿಷ್ಯದ ಗತಿಯೇನು? ಎಂದರು. ಅಧ್ಯಕ್ಷರಾದಿಯಾಗಿ ತಾ.ಪಂ. ಸದಸ್ಯರು ನಾವು ವಿಧಾನಸಭಾಧ್ಯಕ್ಷರಿಗೆ,ಶಾಸಕರಿಗೆ ಹೇಳಿ ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎನ್ನುವ ತಪ್ಪು ಮಾಡಲಿಲ್ಲ!



