
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಎಂದು ಪ್ರಚಾರ ಮಾಡಲಾಗಿದ್ದ ಬೆಳೆವಿಮೆ ಯೋಜನೆ ವಿಫಲವಾಗಿರುವ ವಿದ್ಯಮಾನ ಗೋಚರಿಸತೊಡಗಿದೆ.
ಮೋದಿ ನೇತೃತ್ವದ ಹಿಂದಿನ ಎನ್.ಡಿ.ಎ. ಸರ್ಕಾರದ ಅವಧಿಯಲ್ಲಿ ವಿಪರೀತ ಪ್ರಚಾರದೊಂದಿಗೆ ಪ್ರಾರಂಭವಾದ ಫಸಲ್ ಭಿಮಾ ಮತ್ತು ಹವಾಮಾನ ಆಧಾರಿತ ಬೆಳೆವಿಮೆ ಗಳೆರಡೂ ವಿಫಲವಾಗಿವೆ. ಈ ಯೋಜನೆ ಬರೀ ಪ್ರಚಾರ, ಕೆಲವು ಉದ್ಯಮಿಗಳನ್ನು ಕೊಬ್ಬಿಸಿದ ಯೋಜನೆ ಎಂದು ರಾಜ್ಯ, ರಾಷ್ಟ್ರಮಟ್ಟದ ಮುಖಂಡರು ಬಹುಹಿಂದೇ ದೂರಿದ್ದರು. (ಲಕ್ಷಾಂತರ ಕೋಟಿ ಅವ್ಯವಹಾರ) ವಾಸ್ತವವೆಂದರೆ ಪ್ರಧಾನಿ ಮೋದಿ ಈ ಯೋಜನೆಯ ಬಹುತೇಕ ರಾಜ್ಯಗಳ ಜವಾಬ್ಧಾರಿಯನ್ನು ತಮ್ಮ ಸ್ನೇಹಿತರಾದ ಅಂಬಾನಿ ಸಹೋದರರಿಗೆ ನೀಡಿದ್ದರು.
ಅವರು ಬೆಳೆವಿಮೆಗೆಂದು ಕಟ್ಟಿಸಿಕೊಂಡ ಕಂತಿನ ಲಕ್ಷಾಂತರ ಕೋಟಿ ಮೊತ್ತದಲ್ಲಿ ಪ್ರತಿಶತ 15 ರಷ್ಟನ್ನೂ ಮರಳಿ ರೈತರಿಗೆ ನೀಡಿಲ್ಲದಿರುವುದು ಅಂಕಿಅಂಶಗಳ ಸತ್ಯ. ವಿಚಿತ್ರವೆಂದರೆ ಈ ಯೋಜನೆ ಜಾರಿಯಾಗಿ ಮೂರ್ನಾಲ್ಕು ವರ್ಷ ಕಳೆದ ನಂತರವೂ ಈ ಯೋಜನೆಯ ಗುಟ್ಟು, ರಹಸ್ಯಗಳು ಫಲಾನುಭವಿ ರೈತರಿಗೆ ದೊರೆಯುತ್ತಿಲ್ಲ. ಶಿರಸಿ-ಸಿದ್ಧಾಪುರ ಸೇರಿದಂತೆ ರಾಜ್ಯದಲ್ಲಿ ರೈತರ ಬೆಳೆ ವಿಮೆ ಕಂತು ಸಂಗ್ರಹಿಸುವ ಏಜೆನ್ಸಿ ಜವಾಬ್ಧಾರಿ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ವಹಿಸುತ್ತದೆ. ಆದರೆ ಈ ಬಗೆಗಿನ ಎಳ್ಳಷ್ಟು ಮಾಹಿತಿಗಳು ಕೆ.ಡಿ.ಸಿ.ಸಿ. ಬ್ಯಾಂಕ್ ಮತ್ತು ಇದರ ಅಧೀನ ಪ್ರಾಥಮಿಕ ಸಹಕಾರಿ ಸಂಘಗಗಳಲ್ಲಿಲ್ಲ.
ಈ ತೊಂದರೆ ಬಗ್ಗೆ ಸಿದ್ಧಾಪುರ ತಾಲೂಕಾ ರೈತ ಸಂಘ ಆಕ್ಷೇಪ ಎತ್ತಿ ತಾಲೂಕಿನಲ್ಲಿ ಬೆಳೆವಿಮೆ ವ್ಯವಹಾರ ಅನುಮಾನಾಸ್ಫದವಾಗಿದೆ ಇದರಿಂದ ರೈತರಿಗೆ ಅನುಕೂಲದ ಬದಲು ತೊಂದರೆ ಆಗುತ್ತಿದೆ ಎಂದಿದ್ದಾರೆ.
ರವಿವಾರ ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆದ ಸರ್ವೋದಯ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ರೈತರು ಬೆಳೆವಿಮೆ ಬಗ್ಗೆ ಆಕ್ಷೇಪ ಎತ್ತಿ ಬೆಳೆವಿಮೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಾದರೆ ನೀವ್ಯಾಕೆ ಪ್ರೀಮಿಯಂ ಕಟ್ಟಿಸಿಕೊಳ್ಳುತ್ತೀರಿ ಎಂದು ಆಕ್ಷೇಪಿಸಿದರು.
ಈ ಪ್ರಶ್ನೆಗಳಿಗೆ ಉತ್ತರಿಸಿದ ಕೆ.ಡಿ.ಸಿ.ಸಿ.ಬ್ಯಾಂಕ್ ನಿರ್ಧೇಶಕ ಷಣ್ಮುಖಗೌಡರ್ ಇದು ಕೇಂದ್ರದ ಆದೇಶ, ರಾಜ್ಯ ಸರ್ಕಾರ ಕೇಂದ್ರದ ಆದೇಶಕ್ಕೆ ಒಪ್ಪಿ ಕೆ.ಡಿ.ಸಿ.ಸಿ. ಬ್ಯಾಂಕ್ ಗೆ ಜವಾಬ್ಧಾರಿ ವಹಿಸಿದ ಮೇಲೆ ಅನಿವಾರ್ಯವಾಗಿ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ವಹಿಸಬೇಕು ಎಂದು ಸದಸ್ಯರನ್ನು ಸಮಜಾಯಿಸಿದರು.
ಇದೇ ಬೆಳೆವಿಮೆ ರಗಳೆ ಬಗ್ಗೆ ಸೋಮುವಾರ ನಡೆದ ಸಿದ್ಧಾಪುರ ತಾಲೂಕಾಪಂಚಾಯತ್ ಸಭೆ ಆಕ್ಷೇಪಿಸಿದೆ. ಸದಸ್ಯರು ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳನ್ನು ಪ್ರಶ್ನಿಸಿ ಬೆಳೆವಿಮೆ ಏನಾಯ್ತು, ಮಾಹಿತಿ ಕೊಡುವವರ್ಯಾರು? ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರೀಯಿಸಿದ ತೋಟಗಾರಿಕಾ ಸಹಾಯಕ ನಿರ್ಧೇಶಕ ಮಹಾಬಲೇಶ್ವರ ಪ್ರೀಮಿಯಂ ಕಟ್ಟಿಸಿಕೊಂಡು, ಕಮೀಷನ್ ಪಡೆಯುವ ಕೆ.ಡಿ.ಸಿ.ಸಿ. ಬ್ಯಾಂಕ್ ಅದಕ್ಕೆ ಉತ್ತರದಾಯಿ ಎಂದರು.
ಹೀಗೆ ಜನಪ್ರತಿನಿಧಿಗಳು, ರೈತರು, ಸಹಕಾರಿ ಸಂಘಗಳು ಎಲ್ಲೆಂದರಲ್ಲಿ ಬೆಳೆವಿಮೆ ತೊಂದರೆ, ರೈತರಿಗಾಗುತ್ತಿರುವ ಮೋಸದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಜನಪ್ರತಿನಿಧಿಗಳಾದ ಸಂಸದರು, ಶಾಸಕರು, ಸಚಿವರು ತುಟಿಪಿಟಿಕ್ ಮಾಡುತ್ತಿಲ್ಲ.



